ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ಜುಲೈನಿಂದ ಏಕಬಳಕೆ ಪ್ಲಾಸ್ಟಿಕ್‌ ಇಲ್ಲ

ಮಾಲಿನ್ಯ ನಿಯಂತ್ರಣಕ್ಕೆ ಕ್ರಮ; ಪ್ಲಾಸ್ಟಿಕ್ ಕೈಚೀಲಗಳ ದಪ್ಪ ಹೆಚ್ಚಿಸಲು ಆದೇಶ
Last Updated 13 ಆಗಸ್ಟ್ 2021, 19:35 IST
ಅಕ್ಷರ ಗಾತ್ರ

ನವದೆಹಲಿ: ಒಂದೇ ಸಲ ಬಳಸಬಹುದಾದ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ, ಆಮದು ಹಾಗೂ ಮಾರಾಟವನ್ನು ನಿಷೇಧಿಸಿ ಕೇಂದ್ರ ಪರಿಸರ ಸಚಿವಾಲಯವು ಅಧಿಸೂಚನೆ ಹೊರಡಿಸಿದ್ದು, ಇದು 2022ರ ಜುಲೈನಿಂದ ಅನ್ವಯವಾಗಲಿದೆ.

ಪ್ಲಾಸ್ಟಿಕ್‌ ಕಡ್ಡಿ ಇರುವ ಇಯರ್ ಬಡ್‌, ಬಲೂನ್‌ ಹಿಡಿಕೆ, ಪ್ಲಾಸ್ಟಿಕ್‌ ಧ್ವಜಗಳು, ಕ್ಯಾಂಡಿ ಹಾಗೂ ಐಸ್‌ಕ್ರೀಂ ಕಡ್ಡಿಗಳು, ಅಲಂಕಾರಕ್ಕೆ ಬಳಸುವ ಥರ್ಮಾಕೋಲ್‌, ಸಭೆ–ಸಮಾರಂಭಗಳಲ್ಲಿ ಬಳಸಲಾಗುವ ಪ್ಲಾಸ್ಟಿಕ್‌ ತಟ್ಟೆ, ಲೋಟ, ಕಪ್‌, ಫೋರ್ಕ್‌, ಚಮಚ, ಚಾಕು, ಸ್ಟ್ರಾ, ಟ್ರೇ, ಪೊಟ್ಟಣ ಕಟ್ಟಲು ಬಳಸುವ ಅಥವಾ ಸಿಹಿತಿಂಡಿ ಡಬ್ಬಿಗಳ ಸುತ್ತ ಅಂಟಿಸುವ ಪ್ಲಾಸ್ಟಿಕ್‌ ಫಿಲ್ಮ್‌ಗಳು, ಆಮಂತ್ರಣ ಪತ್ರಿಕೆ, ಸಿಗರೇಟ್ ಪೊಟ್ಟಣ, 100 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ ಇಲ್ಲವೇ ಪಿವಿಸಿ ಬ್ಯಾನರ್‌ಗಳು ಮತ್ತು ಕಡ್ಡಿಗಳ ಉತ್ಪಾದನೆ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ.

ಇದೇ ಸೆ. 30ರಿಂದ, 75 ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳ ಉತ್ಪಾದನೆ ಹಾಗೂ ಬಳಕೆಯನ್ನೂ ನಿಷೇಧಿಸಲಾಗುತ್ತಿದ್ದು, ಅವುಗಳ ದಪ್ಪವನ್ನು 50 ಮೈಕ್ರಾನ್‌ನಿಂದ 75 ಮೈಕ್ರಾನ್‌ಗೆ ಹೆಚ್ಚಿಸುವಂತೆ ಆದೇಶಿಸಲಾಗಿದೆ. ಅಲ್ಲದೇ 2022ರ ಡಿಸೆಂಬರ್‌ 31ರಿಂದ, 120 ಮೈಕ್ರಾನ್‌ಗಳಿಗೆ ಹೆಚ್ಚಿಸುವುದು ಕಡ್ಡಾಯ ಎಂದು ಪರಿಸರ ಸಚಿವಾಲಯ ಹೇಳಿದೆ.

ಈ ಬಗ್ಗೆ ಗುರುವಾರ ಆದೇಶ ಹೊರಡಿಸಿರುವ ಸಚಿವಾಲಯ, ದಪ್ಪ ಹೆಚ್ಚಿಸಿದ ಪ್ಲಾಸ್ಟಿಕ್‌ ಚೀಲಗಳನ್ನು ಮರುಬಳಕೆ ಮಾಡಬಹುದಾಗಿದ್ದು, ಪ್ಲಾಸ್ಟಿಕ್‌ ಮಾಲಿನ್ಯ ನಿಯಂತ್ರಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ವಿಜ್ಞಾನ ಹಾಗೂ ಪರಿಸರ ಕೇಂದ್ರದ ವರದಿಯ ಪ್ರಕಾರ, ಭಾರತವು 2018–19ರಲ್ಲಿ 33.5 ಲಕ್ಷ ಮೆಟ್ರಿಕ್‌ ಟನ್‌ (ನಿತ್ಯ ಅಂದಾಜು 9,200 ಮೆಟ್ರಿಕ್‌ ಟನ್‌) ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಸಿತ್ತು.

ಅತಿ ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಸುತ್ತಿರುವ ಏಳು ರಾಜ್ಯಗಳ ಪೈಕಿ ಕರ್ನಾಟಕವೂ ಇದೆ. ಮಹಾರಾಷ್ಟ್ರ, (ಶೇ 12), ತಮಿಳುನಾಡು (ತಲಾ ಶೇ 12) ಗುಜರಾತ್‌ (ಶೇ 11), ಪಶ್ಚಿಮ ಬಂಗಾಳ (ಶೇ 9), ಕರ್ನಾಟಕ (ಶೇ 8), ಉತ್ತರ ಪ್ರದೇಶ (ಶೇ 7) ಹಾಗೂ ದೆಹಲಿ (ತಲಾ ಶೇ 7) ಹೆಚ್ಚು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಸುತ್ತಿರುವ ರಾಜ್ಯಗಳು.

ಏಕ ಬಳಕೆಯ ಪ್ಲಾಸ್ಟಿಕ್‌ ನಿರ್ಮೂಲನೆ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯದ ಪರಿಣಾಮಕಾರಿ ನಿರ್ವಹಣೆಗಾಗಿ, ರಾಜ್ಯಗಳು ಹಾಗೂ ಕೇಂದ್ರದ ವಿವಿಧ ಇಲಾಖೆಗಳು ನಿಗದಿತ ಅವಧಿಯಲ್ಲಿ ಸಮಗ್ರ ಕಾರ್ಯಯೋಜನೆಯೊಂದನ್ನು ರೂಪಿಸುವಂತೆಯೂ ಹೇಳಿದೆ. ಪ್ಲಾಸ್ಟಿಕ್‌ ಬಳಕೆಯ ಬಗೆಗಿನ ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಮುಂದಾಗುವಂತೆ ರಾಜ್ಯಗಳಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT