ಗುರುವಾರ , ಸೆಪ್ಟೆಂಬರ್ 23, 2021
20 °C

ದೇಶದ ಶೇ 60ರಷ್ಟು ಜನರ ಧ್ವನಿ ಹತ್ತಿಕ್ಕುವ ಪ್ರಯತ್ನ: ರಾಹುಲ್ ಗಾಂಧಿ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರ ಮೇಲೆ ಹಲ್ಲೆ ನಡೆಸುವ ಮೂಲಕ, ಕೇಂದ್ರ ಸರ್ಕಾರ ದೇಶದ ಶೇ 60ರಷ್ಟು ಜನರ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ, ವಿವಿಧ ವಿರೋಧ ಪಕ್ಷಗಳ ನಾಯಕರು ಗುರುವಾರ ನವದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೆಗಾಸಸ್‌ ಗೂಢಚರ್ಯೆ ತನಿಖೆಗೆ ಒತ್ತಾಯಿಸಿ, ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ, ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರ ಮೇಲೆ ಹಲ್ಲೆಯನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸೇರಿದಂತೆ ಎನ್‌ಸಿಪಿ, ಟಿಎಂಸಿ, ಎಸ್‌ಪಿ, ಶಿವಸೇನಾ ಸೇರಿದಂತೆ ಹದಿನಾಲ್ಕು ವಿವಿಧ ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು.

ಸಂಸತ್‌ ಭವನದಲ್ಲಿರುವ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಕಚೇರಿಯಲ್ಲಿ ವಿವಿಧ ವಿರೋಧ ಪಕ್ಷಗಳ ನಾಯಕರು ಪ್ರತಿಭಟನೆಗೂ ಮುನ್ನ ಸಭೆ ನಡೆಸಿದರು. ಸಭೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎನ್‌ಸಿಪಿ ನಾಯಕ ಶರದ್ ಪವಾರ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಶಿವಸೇನಾ ಸಂಸದ ಸಂಜಯ್ ರಾವುತ್, ಮನೋಜ್ ಝಾ ಮತ್ತು ಮತ್ತಿತರು ಪಾಲ್ಗೊಂಡಿದ್ದರು.

ಸಭೆಯ ನಂತರ ‘ಪ್ರಜಾಪ್ರಭುತ್ವದ ಕಗ್ಗೊಲೆ ನಿಲ್ಲಿಸಿ‘, ‘ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ರದ್ದು ಗೊಳಿಸಿ‘ ಎಂಬ ಘೋಷಣೆಗಳುಳ್ಳ ಫಲಕಗಳೊಂದಿಗೆ ಸಂಸತ್‌ ಭವನದಿಂದ ವಿಜಯ್‌ ಚೌಕ್‌ನತ್ತ ಮೆರವಣಿಗೆಯಲ್ಲಿ ಸಾಗಿದ ವಿರೋಧ ಪಕ್ಷಗಳ ನಾಯಕರು, ಮೆರವಣಿಗೆಯುದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಇದಕ್ಕೂ ಮುನ್ನ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯನಾಯ್ಡು ಅವರನ್ನು ಭೇಟಿಯಾದ ಸಂಸದರು, ‘ರಾಜ್ಯಸಭೆಯಲ್ಲಿ ಮಹಿಳಾ ಸಂಸದರು ಸೇರಿದಂತೆ, ಹಲವು ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ಅಶಿಸ್ತಿನ ನಡವಳಿಕೆ ಪ್ರದರ್ಶಿಸಿದ್ದಾರೆ ‘ ಎಂದು ದೂರು ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, ‘ಸಂಸತ್ತಿನ ಅಧಿವೇಶನ ಮುಗಿದಿದೆ. ಆದರೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರಿಗೆ ಮಾತನಾಡಲು ಅವಕಾಶ ನೀಡದೇ, ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ. ಈ ಮೂಲಕ ದೇಶದ ಶೇ 60ರಷ್ಟು ಜನರ ಧ್ವನಿಯನ್ನು ಹತ್ತಿಕ್ಕಲಾಗಿದೆ, ಅವಮಾನಿಸಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ‘ ಎಂದು ಆರೋಪಿಸಿದರು.

‘ಪೆಗಾಸಸ್ ಗೂಢಚರ್ಯೆ, ಕೃಷಿ ಕಾಯ್ದೆಗಳ ರದ್ದತಿ ಹಾಗೂ ಬೆಲೆ ಏರಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ವಿರೋಧ ಪಕ್ಷಗಳಿಗೆ ಪ್ರಸ್ತಾಪಿಸಲು ಸಂಸತ್ತಿನ ಒಳಗೆ ‌ ಅವಕಾಶ ನೀಡಲಿಲ್ಲ‘ ಎಂದು ರಾಹುಲ್ ಗಾಂಧಿ ಟೀಕಿಸಿದರು.

ಇದೇ ಮೊದಲ ಬಾರಿಗೆ ಹೊರಗಿನಿಂದ ಜನರನ್ನು ಕರೆಸಿ ರಾಜ್ಯಸಭೆಯಲ್ಲಿ ಸಂಸದರ ಮೇಲೆ ಹಲ್ಲೆ ನಡೆಸಲಾಗಿದೆ‘ ಎಂದು ಆರೋಪಿಸಿದ ರಾಹುಲ್ ಗಾಂಧಿ, ‘ಸಮರ್ಪಕವಾಗಿ ಸದನವನ್ನು ನಡೆಸುವುದು ಸಭಾಧ್ಯಕ್ಷರ ಜವಾಬ್ದಾರಿ‘ ಎಂದು ಹೇಳಿದರು.

‘ಪ್ರಧಾನ ಮಂತ್ರಿಯವರು ನಮ್ಮ ದೇಶವನ್ನು ಮಾರುವ ಕೆಲಸ ಮಾಡುತ್ತಿದ್ದಾರೆ. ಅವರು ಭಾರತದ ಆತ್ಮವನ್ನು ಈಗಾಗಲೇ ಎರಡು – ಮೂರು ಕೈಗಾರಿಕೋದ್ಯಮಗಳಿಗೆ ಮಾರುತ್ತಿದ್ದಾರೆ. ಆದ್ದರಿಂದಲೇ, ಸಂಸತ್ತಿನ ಒಳಗೆ ವಿರೋಧ ಪಕ್ಷದವರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ‘ ಎಂದು ರಾಹುಲ್ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ರಾಹುಲ್‌ ಗಾಂಧಿಯವರ ಆರೋಪಕ್ಕೆ ದನಿಗೂಡಿಸಿದ ಶಿವಸೇನಾ ಸಂಸದ ಸಂಜಯ್ ರಾವುತ್‌, ‘ಸಂಸತ್ ಅಧಿವೇಶನವೇ ಸರಿಯಾಗಿ ನಡೆಯಲಿಲ್ಲ. ಸಾರ್ವಜನಿಕರ ಪ್ರಮುಖ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ವಿರೋಧ ಪಕ್ಷಗಳಿಗೆ ಅವಕಾಶ ನೀಡಲಿಲ್ಲ‘ ಎಂದು ದೂರಿದರು.

ಜನರನ್ನು ಕರೆತಂದು ರಾಜ್ಯಸಭೆಯಲ್ಲಿ ಮಾರ್ಷಲ್‌ಗಳನ್ನಾಗಿ ನಿಯೋಜಿಸಲಾಗಿದೆ. ಸಂಸತ್ತಿನ ಒಳಗೆ ಹೋಗಲು ನನಗೆ ಅವಕಾಶ ನೀಡದಂತಹ ಈ ‘ಮಾರ್ಷಲ್‌ ಕಾನೂನು‘ಗಳನ್ನು ಕಂಡು, ನಾನೆಲ್ಲೋ ಪಾಕಿಸ್ತಾನದ ಗಡಿಯಲ್ಲಿ ನಿಂತಂತೆ ಭಾಸವಾಯಿತು‘ ಎಂದು ರಾವುತ್‌ ಹೇಳಿದರು.

‘ಎರಡು ದಶಕಗಳಿಗಿಂತ ಹೆಚ್ಚು ಕಾಲ ಸಂಸತ್ತಿನಲ್ಲಿ ಇಂತಹ ನಡವಳಿಕೆಯನ್ನು ನೋಡಿಲ್ಲ‘ ಎಂದು ಸಂಸದ ತಿರುಚಿ ಶಿವ ಹೇಳಿದರೆ, ‘ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಸಂಸತ್ತಿನಲ್ಲಿ ಇಂತಹ ನಾಚಿಕೆಗೇಡಿನ ಘಟನೆಗಳನ್ನು ಕಾಣಲಿಲ್ಲ‘ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪ್ರಫುಲ್ ಪಟೇಲ್ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದರು.

ವಿರೋಧ ಪಕ್ಷಗಳ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ಈ ಆರೋಪಗಳೆಲ್ಲ ಸುಳ್ಳು‘ ಎಂದು ಪ್ರತಿಪಾದಿಸಿದರು. ‘ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದರೆ, ಮಾರ್ಷಲ್‌ಗಳು ಹೇಗೆ ತಮ್ಮ ಸಂಸದರನ್ನು ನಿರ್ವಹಿಸಿದ್ದಾರೆ ಎಂಬ ಸತ್ಯ ಗೊತ್ತಾಗುತ್ತದೆ‘ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು