ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿಯಿಲ್ಲ, ಸಿಎಎ ಅನುಷ್ಠಾನ ಖಚಿತ: ವಿಜಯವರ್ಗೀಯ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್‌ಆರ್‌ಸಿ) ಜಾರಿಗೊಳಿಸುವುದಿಲ್ಲ. ಆದರೆ ಖಂಡಿತವಾಗಿಯೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗೊಳಿಸಲಿದ್ದೇವೆ ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಹೇಳಿಕೆ ನೀಡಿದ್ದಾರೆ.
'ನಾವು ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಚುನಾವಣೆ ನಂತರ ಸಿಎಎ ಅನುಷ್ಠಾನಗೊಳಿಸುವುದನ್ನು ಎದುರು ನೋಡುತ್ತಿದ್ದೇವೆ. ಇದು ನಮ್ಮ ಪಾಲಿಗೆ ಪ್ರಮುಖ ವಿಷಯವಾಗಿದ್ದು, ಹಿಂಸೆಗೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡಲು ಶ್ರಮಿಸುತ್ತಿದ್ದೇವೆ. ಆದರೆ ಚುನಾವಣೆಯಲ್ಲಿ ಗೆದ್ದರೂ ಎನ್ಆರ್‌ಸಿ ಜಾರಿಗೊಳಿಸುವ ಯಾವುದೇ ಯೋಜನೆ ನಮ್ಮಲ್ಲಿಲ್ಲ' ಎಂದು ವಿವರಿಸಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ ಹೊಸ ಪೌರತ್ವ ಕಾಯ್ದೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ 72 ಲಕ್ಷಕ್ಕೂ ಹೆಚ್ಚು ಸೇರಿದಂತೆ ದೇಶದ 1.5 ಕೋಟಿಗೂ ಅಧಿಕ ಜನರಿಗೆ ಪ್ರಯೋಜನ ಸಿಗಲಿದೆ.
ಇದನ್ನೂ ಓದಿ: Explainer | ಸಿಎಎ, ಎನ್ಆರ್ಸಿ ನಡುವಣ ನಂಟೇನು?
64 ವರ್ಷದ ಬಿಜೆಪಿ ಮುಖಂಡ ವಿಜಯವರ್ಗೀಯ, ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷವು ಸಿಎಎಯನ್ನು ಏಕೆ ವಿರೋಧಿಸುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು. ಅಲ್ಲದೆ ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಸಿಎಎ ಜಾರಿಗೆ ಬಂದರೆ ಅನೇಕರಿಗೆ ಪ್ರಯೋಜನ ಸಿಗಲಿದೆ ಎಂದಿದ್ದಾರೆ.
ಚುನಾವಣಾ ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಕ್ಕೆ ತಿರುಗೇಟು ನೀಡಿರುವ ವಿಜಯವರ್ಗೀಯ, ಈ ಅಸಂಬದ್ಧ ವಾದಗಳಿಂದ ಯಾವುದೇ ನೆರವಾಗುವುದಿಲ್ಲ. ಕುತೂಹಲಕಾರಿ ಅಂಶವೆಂದರೆ ದೀದಿ ಚುನಾವಣೆ ಗೆದ್ದಾಗ ಯಾವುದೇ ಸಮಸ್ಯೆಯಿರಲಿಲ್ಲ. ಚುನಾವಣಾ ಗೆದ್ದಾಗ ಎಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಒಮ್ಮೆ ಸೋಲನ್ನು ಗ್ರಹಿಸಲು ಪ್ರಾರಂಭಿಸಿದ ಬಳಿಕ ನೀವು ಚುನಾವಣಾ ಆಯೋಗದ ವಿರುದ್ಧ ಆರೋಪ ಹೊರಿಸುತ್ತಿದ್ದು, ಮತಯಂತ್ರಗಳನ್ನು ದೂಷಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.