ಬುಧವಾರ, ಮಾರ್ಚ್ 22, 2023
26 °C

ರಾಹುಲ್‌ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದರೆ ನನಗ್ಯಾವ ಸಮಸ್ಯೆಯೂ ಇಲ್ಲ: ನಿತೀಶ್‌

ಪಿಟಿಐ Updated:

ಅಕ್ಷರ ಗಾತ್ರ : | |

ಪಟ್ನಾ: ‘ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್‌ ಘೋಷಿಸಿದರೆ ಯಾವುದೇ ಸಮಸ್ಯೆ ಇಲ್ಲ’ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶನಿವಾರ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: 

2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ಅವರು ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಇತ್ತೀಚೆಗೆ ಹೇಳಿದ್ದರು. ಈ ಬಗ್ಗೆ ಪತ್ರಕರ್ತರ ಪ್ರಶ್ನೆಗಳಿಗೆ ನಿತೀಶ್‌ ಕುಮಾರ್ ಪ್ರತಿಕ್ರಿಯಿಸಿದರು.

‘ನಾನು ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗುವ ಆಕಾಂಕ್ಷೆ ಹೊಂದಿಲ್ಲ’ ಎಂದು ಪುನರುಚ್ಚರಿಸಿದರು. ಆದರೂ, ಬಿಜೆಪಿಯನ್ನು ವಿರೋಧಿಸುವ ಪಕ್ಷಗಳನ್ನು ಒಗ್ಗೂಡಿಸುವುದಾಗಿ ತಮ್ಮ ಬದ್ಧತೆಯನ್ನು ಪ್ರತಿಪಾದಿಸಿದರು.

ಐದು ತಿಂಗಳ ಹಿಂದೆ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ಹೊರಬಂದಿದ್ದ ನಿತೀಶ್‌ ಕುಮಾರ್‌ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಜೊತೆ ಸೇರಿ ಬಿಹಾರದಲ್ಲಿ ಸರ್ಕಾರ ರಚನೆ ಮಾಡಿದ್ದರು. ನಂತರ ಮಾತನಾಡಿದ್ದ ಅವರು, ಬಿಜೆಪಿ ವಿರುದ್ಧ ಪಕ್ಷಗಳನ್ನು ರಾಷ್ಟ್ರ ಮಟ್ಟದಲ್ಲಿ ಸಂಘಟಿಸುವುದಾಗಿ ಹೇಳಿದ್ದರು.

ಈ ಹಿನ್ನೆಲೆಯಲ್ಲಿ, ನಿತೀಶ್ ಕುಮಾರ್‌ ಅವರು 2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕೆಲ ಮಂದಿ ಆಗ ಅಭಿಪ್ರಾಯಪಟ್ಟಿದ್ದರು.

ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರೂ ಇದೇ ಮಾತುಗಳನ್ನು ಆಡಿದ್ದರು. ಪ್ರಧಾನ ಮಂತ್ರಿ ಹುದ್ದೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಬಲ ಅಭ್ಯರ್ಥಿಯಾಗಬಲ್ಲರು ಎಂದು ಅವರು ಹೇಳಿದ್ದರು.

ಕಳೆದ 50 ವರ್ಷಗಳಲ್ಲಿ ನಿತೀಶ್, ಸಾಮಾಜಿಕ ಹಾಗೂ ರಾಜಕೀಯ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮೀಸಲಾತಿ ಚಳವಳಿಯಲ್ಲಿ ಪಾಲ್ಗೊಂಡಿದ್ದಾರೆ. 37 ವರ್ಷಗಳಿಗೂ ಹೆಚ್ಚು ಸಂಸದೀಯ ಹಾಗೂ ಆಡಳಿತಾತ್ಮಕ ಅನುಭವ ಹೊಂದಿದ್ದಾರೆ’ ಎಂದು ಹೊಗಳಿದ್ದರು.

ಇದೆಲ್ಲದರ ಬಗ್ಗೆ ಆಗಸ್ಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ನಿತೀಶ್‌ ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದ್ದರು.

'ನಾನು ಕೈ ಮುಗಿದು ಹೇಳುತ್ತೇನೆ. ಅಂತಹ (ಪ್ರಧಾನಿ) ಯಾವುದೇ ಆಲೋಚನೆಗಳಿಲ್ಲ. ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿಸಲು ಪ್ರಯತ್ನ ಮಾಡುತ್ತೇನೆ. ಅದನ್ನು ಅವರೇ ಮಾಡಿದರೆ ಉತ್ತಮ' ಎಂದಿದ್ದರು.

ವಿರೋಧ ಪಕ್ಷಗಳನ್ನು ಒಗ್ಗೂಡಿಸುವುದರಲ್ಲಿ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದ್ದ ನಿತೀಶ್, 'ನಾನು ಧನಾತ್ಮಕವಾಗಿ ಕೆಲಸ ಮಾಡುತ್ತಿದ್ದೇನೆ. ಸಾಕಷ್ಟು ದೂರವಾಣಿ ಕರೆಗಳು ಬರುತ್ತಿವೆ. ವಿಪಕ್ಷದಲ್ಲಿರುವ ಎಲ್ಲರನ್ನು ಒಗ್ಗೂಡಿಸಲು ಬಯಸುತ್ತೇನೆ. ನಾನು ಎಲ್ಲವನ್ನು ಮಾಡುತ್ತೇನೆ. ಆದರೆ ಮೊದಲು ನನ್ನ ಕೆಲಸವನ್ನು ಇಲ್ಲಿ ಮಾಡುತ್ತೇನೆ' ಎಂದು ಹೇಳಿದ್ದರು.

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು