ಸೋಮವಾರ, ಸೆಪ್ಟೆಂಬರ್ 27, 2021
25 °C

ಯಾವುದೇ ಧರ್ಮ ಸಂಕುಚಿತ ಚಿಂತನೆ ಬೋಧಿಸದು:‌ ಹೈಕೋರ್ಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ (ಪಿಟಿಐ): ‘ಯಾವುದೇ ಧರ್ಮವು ಸಂಕುಚಿತ ಮನಸ್ಥಿತಿ, ಚಿಂತನೆಯನ್ನು ಬೋಧಿಸುವುದಿಲ್ಲ ಮತ್ತು ಅನ್ಯರಿಗೆ ನೋವುಂಟು ಮಾಡುವುದಿಲ್ಲ. ಹಿಂದೂ ದೇವರ ಎದುರು ಪ್ರತಿಜ್ಞೆ ಮಾಡಿದಾಕ್ಷಣ ಯಾರೊಬ್ಬರೂ ಹಿಂದೂ ಧರ್ಮದ ಪ್ರತಿಪಾದಕರಾಗುವುದಿಲ್ಲ’ ಎಂದು ಮದ್ರಾಸ್ ಹೈಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದೆ.

ರಾಜ್ಯದ ಹಿಂದೂ ಧಾರ್ಮಿಕ ಮತ್ತು ಚಾರಿಟಬಲ್‌ ದತ್ತಿ ಇಲಾಖೆಯ ಸಲಹಾ ಸಮಿತಿಯ ಅಧ್ಯಕ್ಷತೆ ವಹಿಸುವುದರಿಂದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರನ್ನು ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಮಾಡಿದ ಹೈಕೋರ್ಟ್‌, ಅರ್ಜಿದಾರ ವಕೀಲರಿಗೆ ಕಟು ಎಚ್ಚರಿಕೆಯನ್ನೂ ನೀಡಿತು.

’ಮುಂದಿನ ಐದು ವರ್ಷ ಕಾಲ ಯಾವುದೇ ರೀತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದರ ವಿರುದ್ಧ ಅರ್ಜಿದಾರರಿಗೆ ನಿರ್ಬಂಧ ಹೇರಿ‘ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ.ಸಿ. ಆದಿಕೇಶವಲು ಅವರಿದ್ದ ನ್ಯಾಯಪೀಠವು ಆದೇಶ ಹೊರಡಿಸಿತು.

ಅರ್ಜಿಯನ್ನು ಸಲ್ಲಿಸಿದ್ದ ವಕೀಲರು, ‘ಇಲಾಖೆಯ ನಿಯಮಗಳ ಪ್ರಕಾರ, ಸಲಹಾ ಸಮಿತಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ಹಿಂದೂ ಧರ್ಮವನ್ನು ಪ್ರತಿಪಾದಿಸುತ್ತೇನೆ ಎಂದು ಪ್ರತಿಜ್ಞೆಯನ್ನು ಸ್ವೀಕರಿಸಬೇಕಾಗಿದೆ. ಇದು, ಸ್ಪಷ್ಟವಾಗಿದೆ’ ಎಂದು ವಾದ ಮಂಡಿಸಿದ್ದರು.

ಈ ವಾದವನ್ನು ತಳ್ಳಿಹಾಕಿದ ಪೀಠವು, ‘ಧರ್ಮವನ್ನು ಆಚರಿಸುವ ವೇಳೆ ಪೂರ್ವಗ್ರಹಪೀಡಿತ ಧೋರಣೆ ಮತ್ತು ವೈಮನಸ್ಯ ಭಾವನೆಯನ್ನು ಬದಿಗೊತ್ತಬೇಕು’ ಎಂದು ಪ್ರತಿಪಾದಿಸಿತು. ‘ಭಾರತವು ಪ್ರಜಾಪ್ರಭುತ್ವ ರಾಷ್ಟ್ರ. ದೇವರು ಅಥವಾ ಸಂವಿಧಾನ ಹೆಸರಿನಲ್ಲಿ ಪ್ರತಿಜ್ಞೆ ಸ್ವೀಕರಿಸಲು ಸಂವಿಧಾನದಲ್ಲಿ ಅವಕಾಶವಿದೆ’ ಎಂದು ತಿಳಿಸಿತು.

‘ಇದು ಸ್ಪಷ್ಟವಾಗಿ ಕುಚೇಷ್ಟೆಯ ಅರ್ಜಿ, ಕೆಟ್ಟ ಅಭಿರುಚಿಯನ್ನು ಹೊಂದಿದೆ. ಈ ಮನವಿಯಲ್ಲಿ ಪೂರ್ವಗ್ರಹಪೀಡಿತ ಮನಸ್ಥಿತಿಯಿದೆ’ ಎಂದು ವಕೀಲ ಎಸ್‌.ಶ್ರೀಧರನ್‌ ಅವರ ಅರ್ಜಿಯ ವಿಚಾರಣೆಯ ವೇಳೆ ಅಭಿಪ್ರಾಯಪಟ್ಟಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು