ಗುರುವಾರ , ಮೇ 13, 2021
16 °C
ಮುನ್ನೆಚ್ಚರಿಕೆಯ ಖರೀದಿ ಧಾವಂತ!

ಕೊರೊನಾ ಭಯ: ದೇಶದಾದ್ಯಂತ ಎದುರಾಗಿದೆ ಅಗತ್ಯ ಔಷಧದ ಅಭಾವ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದಂತೆಯೇ ಆತಂಕಕ್ಕೆ ಒಳಗಾಗುತ್ತಿರುವ ಜನತೆ, ಮುನ್ನೆಚ್ಚರಿಕೆ ಕ್ರಮವಾಗಿ ಔಷಧ ಖರೀದಿಯಲ್ಲಿ ತೊಡಗಿದ್ದರಿಂದ ಕೊರೊನಾ ಲಕ್ಷಣಗಳಿರುವ ರೋಗಿಗಳಿಗೆ ಅಗತ್ಯ ಔಷಧದ ಕೊರತೆ ಎದುರಾಗಿದೆ.

ಈಗಾಗಲೇ ಕೊರೊನಾ ಪೀಡಿತರಿಗೆ ನೀಡಲಾಗುವ ರೆಮ್‌ಡಿಸಿವಿರ್‌ ಇಂಜೆಕ್ಷನ್‌ನ ಅಭಾವ ಸೃಷ್ಟಿ ಆಗಿದೆ. ಅದೇ ಮದರಿಯಲ್ಲಿ ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಮಾರುಕಟ್ಟೆಯಲ್ಲಿ ಅಗತ್ಯ ಮಾತ್ರೆಗಳು ಮತ್ತು ಇತರ ಇಂಜಕ್ಷನ್‌ಗಳು ಲಭ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ಅನಗತ್ಯ ಖರೀದಿ ಹೆಚ್ಚಿದ್ದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ. ಔಷಧ ಉತ್ಪಾದನೆಯ ಪ್ರಮಾಣ ಬೇಡಿಕೆಗೆ ಅನುಗುಣವಾಗಿಯೂ ಇಲ್ಲ. ಪೂರೈಕೆಯ ಕೊರತೆ ಇರುವುದರಿಂದ ಈಗಾಗಲೇ ಕೆಲವು ಪ್ರಮುಖ ಔಷಧಗಳು ಲಭ್ಯವಾಗುತ್ತಿಲ್ಲ.

ಕೊರೊನಾ ಸೋಂಕಿತರು ಹಾಗೂ ಶಂಕಿತರಿಗೆ ವೈದ್ಯರು ಸೂಚಿಸುತ್ತಿರುವ ಪ್ಯಾರಾಸಿಟಮಾಲ್, ಐವರ್‌ಮೆಕ್ಟಿನ್, ಡಾಕ್ಸಿಸೈಕ್ಲಿನ್, ಅಜಿಥ್ರೊಮೈಸಿನ್, ವಿಟಮಿನ್‌–ಸಿ ಮಾತ್ರೆ ಹಾಗೂ ಮಾರೋಪೆನೆಮ್ ಮತ್ತು ಫ್ಯಾಬಿ ಫ್ಲೂ ಇಂಜಕ್ಷನ್‌ಗಳು ಕೊರತೆಯ ಪಟ್ಟಿಯಲ್ಲಿರುವ ಪ್ರಮುಖ ಔಷಧಗಳಾಗಿವೆ.

ವಿದೇಶಗಳಿಂದ ಆಮದಾಗುವ ಈ ಔಷಧಗಳ ಕಚ್ಚಾ ಸಾಮಗ್ರಿಯ ದರವೂ ಇತ್ತೀಚಿನ ದಿನಗಳಲ್ಲಿ ಮೂರು ಪಟ್ಟು ಹೆಚ್ಚಿದ್ದು, ಕೆಲವೇ ದಿನಗಳಲ್ಲಿ ಈ ಔಷಧಗಳ ದರದಲ್ಲೂ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಔಷಧ ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.

ಕೊರೊನಾದ ಅಲ್ಪಸ್ವಲ್ಪ ಲಕ್ಷಣಗಳಿಂದ ಬಳಲುತ್ತ, ಮನೆಗಳಲ್ಲೇ ಪ್ರತ್ಯೇಕ ವಾಸದಲ್ಲಿರುವವರಿಗೆ, ಸೋಂಕಿನ ಪ್ರಮಾಣ ಹೆಚ್ಚದಿರಲಿ ಎಂಬ ಕಾರಣ ಆರಂಭಿಕ ಹಂತದಲ್ಲಿ ವೈದ್ಯರು ಫ್ಯಾಬಿಫ್ಲೂ ಇಂಜೆಕ್ಷನ್‌ ಅನ್ನು ಸೂಚಿಸುತ್ತಿದ್ದಾರೆ. ಹಾಗಾಗಿಯೇ, ಸೋಂಕು ನಿವಾರಕವಾದ ಈ ಔಷಧ ಅಂಗಡಿಗಳಿಂದ ಬೇಗನೆ ಖಾಲಿಯಾಗುತ್ತಿದೆ.

ಜ್ವರ, ಕೆಮ್ಮು, ನೆಗಡಿಯಿಂದಾಗಿ ಮನೆಗಳಲ್ಲೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೂ ಕೊರೊನಾ ಪೀಡಿತರಿಗೆ ನೀಡುವ ಔಷಧಿಗಳನ್ನೇ ಸೂಚಿಸಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಜಿಥ್ರೊಮೈಸಿನ್, ವಿಟಮಿನ್ ಡಿ–3 ಅಥವಾ ಐವರ್‌ಮೆಕ್ಟಿನ್ ಮಾತ್ರೆಗಳು ಈ ವರ್ಷ 10 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿವೆ. ಇಂಥ ಬೆಳವಣಿಗೆಯು ಬೇಡಿಕೆ ಮತ್ತು ಪೂರೈಕೆಗೆ ಸವಾಲಾಗಿದೆ ಎಂದು ಫಾರ್ಮಾ ಕಂಪೆನಿಯೊಂದರ ಮಾರಾಟ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಗಣೇಶ್‌ ಶೇಷಗಿರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಭಾರತದಲ್ಲಿ ಔಷಧ ತಯಾರಿಸುವ ಕಂಪನಿಗಳು ಕೇವಲ ಮೂರರಿಂದ ಆರು ತಿಂಗಳಿಗೆ ಸಾಕಾಗುವಷ್ಟು ಕಚ್ಚಾ ಸಾಮಗ್ರಿ ಸಂಗ್ರಹಿಸುತ್ತವೆ. ಅನೇಕ ದೇಶಗಳು ಚೀನಾದಿಂದ ಅಗತ್ಯ ವಸ್ತುಗಳ ಆಮದನ್ನು ನಿಲ್ಲಿಸಿವೆ. ಕೊರೊನಾ ಭೀತಿ ಆರಂಭ ಆದಾಗಿನಿಂದ ಸ್ವಿಜರ್‌ಲೆಂಡ್‌, ಅಮೆರಿಕ ಮತ್ತಿತರ ದೇಶಗಳಿಂದ ಔಷಧಗಳ ಕಚ್ಚಾ ಸಾಮಗ್ರಿಯ ಪೂರ್ಣಪ್ರಮಾಣದ ಆಮದು ಸ್ಥಗಿತಗೊಂಡಿದ್ದು, ಅಗತ್ಯ ಔಷಧಗಳ ಅಭಾವ ಹೆಚ್ಚಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೊನಾದಿಂದಾಗಿ ಆತಂಕದಲ್ಲಿರುವ ಜನರನ್ನು ಔಷಧಗಳ ಕೊರತೆಯು ಮತ್ತಷ್ಟು ಆತಂಕಕ್ಕೆ ಈಡುಮಾಡಲಿದೆ. ಕೇಂದ್ರ ಸರ್ಕಾರ ಮೊದಲೇ ಈ ಕುರಿತು ಗಮನ ಹರಿಸಿದಲ್ಲಿ ಮುಂದಿನ ದಿನಗಳಲ್ಲಿ ಎದುರಾಗಲಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಅವರು ಮನವಿ ಮಾಡಿದ್ದಾರೆ.

***

ಐವರ್‌ಮೆಕ್ಟಿನ್, ಡಾಕ್ಸಿಸೈಕ್ಲಿನ್, ವಿಟಮಿನ್‌–ಸಿ ಮತ್ತು ಅಜಿಥ್ರೊಮೈಸಿನ್ ಮಾತ್ರೆಗಳಿಗೆ ಸಾಕಷ್ಟು ಬೇಡಿಕೆ ಇದೆ. ಆದರೆ, ವಿತರಕರು ತಕ್ಷಣಕ್ಕೆ ಪೂರೈಸತ್ತಿಲ್ಲ.
–ಟಿ.ಎಚ್‌. ಅಳಗವಾಡಿ, ಸಗಟು ಔಷಧ ವ್ಯಾಪಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು