ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಪ್ರಶ್ನಿಸಿದ್ದು ಬಿಜೆಪಿಗೇ ಹೊರತು ವಿಜ್ಞಾನಿಗಳಿಗಲ್ಲ: ಅಖಿಲೇಶ್‌ ಯಾದವ್‌

Last Updated 4 ಜನವರಿ 2021, 11:31 IST
ಅಕ್ಷರ ಗಾತ್ರ

ಲಕ್ನೋ: ಕೋವಿಡ್‌ ಲಸಿಕೆ ವಿಚಾರವಾಗಿ ನಾನು ಪ್ರಶ್ನಿಸಿದ್ದು ಬಿಜೆಪಿಗೇ ಹೊರತು ವಿಜ್ಞಾನಿಗಳಿಗಲ್ಲ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಲಸಿಕೆ ವಿಚಾರವಾಗಿ ಅಖಿಲೇಶ್‌ ಯಾದವ್‌ ಶನಿವಾರ ನೀಡಿದ್ದ ಹೇಳಿಕೆ ವಿವಾದದ ಕಿಡಿಯನ್ನೇ ಹೊತ್ತಿಸಿತ್ತು. 'ಬಿಜೆಪಿ ಸರ್ಕಾರ ನೀಡುತ್ತಿರುವ ಲಸಿಕೆಯನ್ನು ನಾನು ಹಾಕಿಸಿಕೊಳ್ಳುವುದಿಲ್ಲ. ನನಗೆ ಅವರ ಮೇಲೆ ನಂಬಿಕೆ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಲ್ಲರಿಗೂ ಉಚಿತ ಲಸಿಕೆ ನೀಡುತ್ತೇವೆ' ಎಂದು ಅಖಿಲೇಶ್‌ ಯಾದವ್‌ ಹೇಳಿದ್ದರು.

ಅಖಿಲೇಶ್‌ ಯಾದವ್‌ ಅವರು ನೀಡಿದ್ದ ಹೇಳಿಕೆಗೆ ಬಿಜೆಪಿಯ ನಾಯಕರು ಕೆಂಡಾಮಂಡಲವಾಗಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಸೇರಿದಂತೆ ಹಲವು ನಾಯಕರು ಅಖಿಲೇಶ್‌ ಯಾದವ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಈ ವಿಚಾರವಾಗಿ ಸೋಮವಾರ ಮಾತನಾಡಿರುವ ಅಖಿಲೇಶ್‌, 'ನಾನು ಅಥವಾ ಸಮಾಜವಾದಿ ಪಕ್ಷವು ವಿಜ್ಞಾನಿಗಳು, ತಜ್ಞರು ಅಥವಾ ಸಂಶೋಧಕರನ್ನು ಪ್ರಶ್ನಿಸಿಲ್ಲ. ನಾವು ಬಿಜೆಪಿಯನ್ನು ಪ್ರಶ್ನಿಸಿದ್ದೇವೆ. ನಮ್ಮ ಕೆಲ ಅನುಮಾನಗಳಿಗೆ ಸ್ಪಷ್ಟನೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ' ಎಂದು ಹೇಳಿದ್ದಾರೆ.

'ಬಡವರಿಗೆ ಯಾವಾಗ ಲಸಿಕೆ ಸಿಗುತ್ತದೆ. ಸಿಕ್ಕರೂ ಅದು ಉಚಿತವಾಗಿ ದೊರೆಯಲಿದೆಯೇ ಎಂಬುದಾಗಿ ಬಿಜೆಪಿಯನ್ನು ಕೇಳಲು ಬಯಸುತ್ತೇನೆ' ಎಂದು ಅಖಿಲೇಶ್‌ ಯಾದವ್‌ ತಿಳಿಸಿದ್ದಾರೆ.

ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ ಸಂಸ್ಥೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಷರತ್ತುಬದ್ಧ ಲಸಿಕೆ ಬಳಕೆಗೆ ಡಿಸಿಜಿಐ ಭಾನುವಾರ ಅನುಮೋದನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT