ಮಂಗಳವಾರ, ಜೂನ್ 28, 2022
25 °C

ಎಷ್ಟೇ ಕೇಳಿಕೊಂಡರೂ ವಿವಾಹ ನೋಂದಣಿ ಮಾಡಿಸದ ನುಸ್ರತ್‌ ಜಹಾನ್‌: ನಿಖಿಲ್‌ ಜೈನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕಾನೂನು ಪ್ರಕಾರ ವಿವಾಹ ನೋಂದಾಯಿಸಿಕೊಳ್ಳುವಂತೆ ತಾವು ಮಾಡಿದ ವಿನಂತಿಗಳನ್ನು ನಟಿ-ಸಂಸದೆ ನುಸ್ರತ್ ಜಹಾನ್ ನಿರಾಕರಿಸಿದ್ದರು ಎಂದು ಪತಿ ನಿಖಿಲ್ ಜೈನ್ ಆರೋಪಿಸಿದ್ದಾರೆ.

2019ರಲ್ಲಿ ಟರ್ಕಿಯಲ್ಲಿ ಉದ್ಯಮಿ ನಿಖಲ್ ಜೈನ್ ಅವರೊಂದಿಗೆ ನಡೆದಿದ್ದ ವಿವಾಹವು ಭಾರತೀಯ ಕಾನೂನುಗಳ ಪ್ರಕಾರ ಮಾನ್ಯವಾಗಿಲ್ಲ ಎಂದು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹೇಳಿಕೊಂಡಿದ್ದರು.

2020 ಆಗಸ್ಟ್‌ನಲ್ಲಿ ಚಿತ್ರವೊಂದರ ಚಿತ್ರೀಕರಣದಲ್ಲಿ ತೊಡಗಿಸಿಕೊಂಡ ಬಳಿಕ ಆಕೆಯ (ನುಸ್ರತ್) ವರ್ತನೆ ಬದಲಾಗತೊಡಗಿತು. ಬಳಿಕ ನವೆಂಬರ್‌ನಲ್ಲಿ ಮನೆ ಬಿಟ್ಟು ಹೋದಳು ಎಂದು ಜೈನ್ ತಿಳಿಸಿದ್ದಾರೆ.

ಇದನ್ನೂ ಓದಿ: 

ಜೈನ್ ಅವರು ಈ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ಮಾತ್ರ ಚರ್ಚಿಸಲು ಬಯಸಿದ್ದರು. ಆದರೆ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ, ನನ್ನ ವೈವಾಹಿಕ ಜೀವನದ ಬಗ್ಗೆ ಇತ್ತೀಚಿನ ಆರೋಪಗಳಿಂದ ಬೇಸರಗೊಂಡು ಕೆಲವು ವಿಚಾರಗಳನ್ನು ಬಹಿರಂಗಪಡಿಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

ಇತ್ತೀಚೆಗಿನ ದಿನಗಳಲ್ಲಿ ಜಹಾನ್ ಅವರು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಅಭ್ಯರ್ಥಿ ಯಶ್ ದಾಸ್‌ಗುಪ್ತಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ವರದಿಯಾಗಿದೆ.

ಜೈನ್ ಜತೆಗಿನ ವಿವಾಹ ಟರ್ಕಿಯ ಕಾನೂನಿಗೆ ಬದ್ಧವಾಗಿ ನಡೆದಿರುವ ಕಾರಣ ಭಾರತದಲ್ಲಿ ಈ ವಿವಾಹ ಅಮಾನ್ಯವಾಗಿದೆ ಎಂದು ಜಹಾನ್ ಹೇಳಿಕೆ ನೀಡಿದ್ದರು.

ಇದು ಅಂತರ್ ಜಾತಿ ವಿವಾಹವಾಗಿದ್ದರಿಂದ ಭಾರತದಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಮಾನ್ಯಗಳಿಸುವ ಅಗತ್ಯವಿರುತ್ತದೆ. ಹಾಗಾಗಲಿಲ್ಲ. ಕಾನೂನಿನ ಪ್ರಕಾರ ಇದು ವಿವಾಹವಲ್ಲ, ಇದು 'ಲಿವ್-ಇನ್' ಸಂಬಂಧವಷ್ಟೇ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: 

2019ರಲ್ಲಿ ಟರ್ಕಿಯ ಬೊಡ್ರಮ್ನಲ್ಲಿ ನಡೆದ ಜಹಾನ್-ಜೈನ್ ವಿವಾಹದಲ್ಲಿ ಕೆಲವೇ ಕೆಲವು ಆಪ್ತರು ಭಾಗವಹಿಸಿದ್ದರು. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದ ಬಳಿಕ ಜಹಾನ್ ಕೋಲ್ಕತ್ತದ ಪಂಚತಾರಾ ಹೋಟೆಲ್‌ನಲ್ಲಿ ಅದ್ದೂರಿ ರಿಸೆಪ್ಷನ್ ಏರ್ಪಡಿಸಿದ್ದರು. ಇದರಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಇತರೆ ಗಣ್ಯರು ಭಾಗವಹಿಸಿದ್ದರು.

ಪ್ರೀತಿಯಿಂದ ನಾನು ನುಸ್ರತ್‌ರನ್ನು ಮದುವೆಯಾಗಲು ಪ್ರಸ್ತಾಪಿಸಿದ್ದೆ. ಆಕೆ ಸಂತೋಷದಿಂದ ಒಪ್ಪಿಕೊಂಡಳು. ಬಳಿಕ ಟರ್ಕಿಗೆ ವಿವಾಹಕ್ಕಾಗಿ ತೆರಳಿದೆವು. ಅದಾದ ಬಳಿಕ ಗಂಡ-ಹೆಂಡತಿಯಾಗಿ ಜೊತೆಗೆ ವಾಸಿಸುತ್ತಿದ್ದೆವು ಎಂದು ಜೈನ್ ತಿಳಿಸಿದ್ದಾರೆ.

ನಾನು ನನ್ನ ಸಮಯ, ಎಲ್ಲವನ್ನೂ ನಿಷ್ಠಾವಂತ ಹಾಗೂ ಜವಾಬ್ದಾರಿಯುತ ಗಂಡನಾಗಿ ನುಸ್ರತ್‌ಗಾಗಿ ಮೀಸಲಿಟ್ಟಿದ್ದೇನೆ. ಸ್ನೇಹಿತರು, ಕುಟುಂಬ ಹಾಗೂ ನಮ್ಮ ಆಪ್ತರಿಗೆ ಎಲ್ಲವೂ ತಿಳಿದಿದೆ. ಆಕೆಗೆ ನನ್ನ ಸಂಪೂರ್ಣ ಬೆಂಬಲ ನೀಡಿದ್ದೆ. ಆದರೆ ಆಗಸ್ಟ್ 2020ರಲ್ಲಿ ಚಲನಚಿತ್ರದ ಶೂಟಿಂಗ್ ಸಮಯದಿಂದ ಆಕೆಯ ವರ್ತನೆ ಬದಲಾಗತೊಡಗಿತು. ನಾವು ಜತೆಗಿದ್ದ ಸಂದರ್ಭದಲ್ಲಿ ವಿವಾಹವನ್ನು ನೋಂದಾಯಿಸಲು ಹಲವಾರು ಬಾರಿ ವಿನಂತಿಸಿದ್ದೆ. ಆದರೆ ಆಕೆ ನಿರಾಕರಿಸಿದ್ದಳು ಎಂದು ಜೈನ್ ವಿವರಿಸಿದ್ದಾರೆ.

ಕಳೆದ ವರ್ಷ ನವೆಂಬರ್ 5ರಂದು ನುಸ್ರತ್ ತಮ್ಮ ವೈಯಕ್ತಿಕ ಸಾಮಾಗ್ರಿಗಳೊಂದಿಗೆ ಮನೆ ಬಿಟ್ಟು ತೆರಳಿ ಫ್ಲ್ಯಾಟ್‌ನಲ್ಲಿ ವಾಸಿಸಲು ಆರಂಭಿಸಿದರು. ಅದರ ನಂತರ ನಾವು ಎಂದಿಗೂ ಗಂಡ ಹೆಂಡತಿಯಾಗಿ ಇರಲಿಲ್ಲ ಎಂದು ಹೇಳಿದ್ದಾರೆ.

'ಎಸ್‌ಒಎಸ್ ಕೋಲ್ಕತ್ತ' ಎಂಬ ಬಂಗಾಳಿ ಚಿತ್ರದಲ್ಲಿ ಯಶ್ ದಾಸ್‌ಗುಪ್ತಾ ಜತೆ ನುಸ್ರತ್ ಜಹಾನ್ ನಟಿಸಿದ್ದರು. ಇದರ ಶೂಟಿಂಗ್ 2020 ಆಗಸ್ಟ್‌ನಲ್ಲಿ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು