ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮಿಕ್ರಾನ್‌: ರಾಜ್ಯಗಳಿಗೆ ಕೇಂದ್ರದಿಂದ ಪತ್ರ, ಕಟ್ಟೆಚ್ಚರಕ್ಕೆ ಸೂಚನೆ

ರಾಜ್ಯಗಳಿಗೆ ಕೇಂದ್ರದಿಂದ ಪತ್ರ: ಕೋವಿಡ್‌ ಪರೀಕ್ಷೆ ಹೆಚ್ಚಳಕ್ಕೆ ನಿರ್ದೇಶನ
Last Updated 28 ನವೆಂಬರ್ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪರೀಕ್ಷೆ ಹೆಚ್ಚಿಸಿ, ವಿಮಾನ ನಿಲ್ದಾಣಗಳಲ್ಲಿ ಕೋವಿಡ್‌ ತಪಾಸಣೆಯನ್ನು ಕಟ್ಟುನಿಟ್ಟುಗೊಳಿಸಿ, ಕೊರೊನಾ ವೈರಾಣುವಿನ ಹೊಸ ರೂಪಾಂತರ ತಳಿ ಓಮಿಕ್ರಾನ್‌ ಬಗ್ಗೆ ಕಣ್ಣಿಟ್ಟಿರಿ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಭಾನುವಾರ ಸೂಚಿಸಿದೆ.

‘ಕೋವಿಡ್‌ ಪರೀಕ್ಷೆಯ ಪ್ರಮಾಣವು ಕೆಲವು ರಾಜ್ಯಗಳಲ್ಲಿ ಇಳಿಕೆ ಆಗಿರುವುದು ಕಂಡು ಬಂದಿದೆ. ಅಗತ್ಯ ಪ್ರಮಾಣದಲ್ಲಿ ಪರೀಕ್ಷೆ ಆಗದೇ ಇದ್ದರೆ ಸೋಂಕು ಯಾವ ಮಟ್ಟದಲ್ಲಿದೆ ಎಂಬುದನ್ನು ತಿಳಿಯುವುದು ಸಾಧ್ಯವಿಲ್ಲ. ರಾಜ್ಯಗಳು ಪರೀಕ್ಷೆ ಮೂಲ ಸೌಕರ್ಯ ಹೆಚ್ಚಿಸಬೇಕು ಮತ್ತು ಪರೀಕ್ಷಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು’ ಎಂದು ರಾಜ್ಯಗಳಿಗೆ ಬರೆದ ಪತ್ರದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

ವಿಮಾನ ನಿಲ್ದಾಣಕ್ಕೆ ವಿದೇಶಗಳಿಂದ ಬಂದಿಳಿಯುವವರ ಪ್ರಯಾಣ ವಿವರಗಳನ್ನು ಪರಿಶೀಲಿಸಬೇಕು. ಓಮಿಕ್ರಾನ್‌ ದೃಢಪಟ್ಟಿರುವ ದೇಶಗಳಿಗೆ ಹೋದವರು ಅಥವಾ ಆ ದೇಶಗಳನ್ನು ಹಾದು ಬಂದವರನ್ನು ಕೋವಿಡ್‌ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಿಸಬೇಕು. ಕೋವಿಡ್‌ ದೃಢಪಟ್ಟ ಎಲ್ಲ ಮಾದರಿಗಳನ್ನು ವೈರಾಣುವಿನ ಸಂರಚನೆ ವಿಶ್ಲೇಷಣೆಗಾಗಿ (ಜಿನೋಮ್‌ ಸೀಕ್ವೆನ್ಸಿಂಗ್‌) ನಿಯೋಜಿತ ಪ್ರಯೋಗಾಲಯಗಳಿಗೆ ಕಳುಹಿಸಬೇಕು ಎಂದೂ ಸೂಚಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಓಮಿಕ್ರಾನ್‌ ಪತ್ತೆಯಾದ ಕಾರಣಕ್ಕೆ ಶನಿವಾರ ತುರ್ತು ಸಭೆ ನಡೆಸಿ ಪರಿಸ್ಥಿತಿಯ ಮಾಹಿತಿ ಪಡೆದು, ಸಲಹೆ, ಸೂಚನೆಗಳನ್ನು ನೀಡಿದ್ದರು. ಅದರ ಮರು ದಿನವೇ ಕೇಂದ್ರ ಸರ್ಕಾರದ ಈ ಪತ್ರ ರವಾನೆಯಾಗಿದೆ.

ವಿದೇಶದಿಂದ ಬರುವ ಪ್ರಯಾಣಿಕರ ಪರೀಕ್ಷೆ ಮತ್ತು ಅವರ ಮೇಲೆ ನಿಗಾ ಇರಿಸುವುದಕ್ಕೆ ಇರುವ ಸಾಮಾನ್ಯ ಕಾರ್ಯನಿರ್ವಹಣಾ ಪ್ರಕ್ರಿಯೆಯನ್ನು ಪರಿಷ್ಕರಿಸಲು ಕೇಂದ್ರವು ನಿರ್ಧರಿಸಿದೆ.

ಒಂದು ಪ್ರದೇಶದಲ್ಲಿ, ಪ್ರಕರಣಗಳ ಪ್ರವೃತ್ತಿ ಬದಲಾವಣೆ ಮತ್ತು ಸೋಂಕು ದೃಢಪಡುವಿಕೆ ಪ್ರಮಾಣದ ಮೇಲೆ ನಿಗಾ ಇರಿಸಿ. ಹೆಚ್ಚು ಪ್ರಕರಣ ಇರುವ ಪ್ರದೇಶಗಳನ್ನು ಪ್ರತ್ಯೇಕಿಸಬೇಕು.ಸೋಂಕು ದೃಢಪಡುವಿಕೆ ಪ್ರಮಾಣವು ಶೇ 5ರ ಒಳಗೆ ಇರುವಂತೆ ನೋಡಿಕೊಳ್ಳಬೇಕು ಎಂದು ಕೇಂದ್ರವು ಸೂಚಿಸಿದೆ.

ವಿಮಾನಯಾನ: ಮರುಪರಿಶೀಲನೆ

ಸಾಂಕ್ರಾಮಿಕ ಪರಿಸ್ಥಿತಿಯ ಬಗ್ಗೆ ನಿಕಟ ನಿಗಾ ಇರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ. ಹಲವು ದೇಶಗಳಲ್ಲಿ ಓಮಿಕ್ರಾನ್‌ ರೂಪಾಂತರ ತಳಿ ಪತ್ತೆಯಾಗಿದೆ. ಹಾಗಾಗಿ, ಡಿ. 15ರಿಂದ ವಿದೇಶಗಳಿಗೆ ವಿಮಾನಯಾನ ಪುನರಾರಂಭಿಸಲು ಕೈಗೊಂಡ ನಿರ್ಧಾರವನ್ನು‍ ಮರು ಪರಿಶೀಲಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಹಲವು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ವಿ.ಕೆ. ಪಾಲ್‌, ಪ್ರಧಾನಿಯವರ ಮುಖ್ಯ ವೈಜ್ಞಾನಿಕ ಸಲಹೆಗಾರ ಡಾ. ವಿಜಯ ರಾಘವನ್‌, ಆರೋಗ್ಯ, ನಾಗರಿಕ ವಿಮಾನಯಾನ ಮತ್ತು ಇತರ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT