ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಸಂಚಾರ ನಿರ್ಬಂಧ ಸಡಿಲಿಕೆ ಮರುಪರಿಶೀಲನೆಗೆ ಪ್ರಧಾನಿ ಮೋದಿ ಸೂಚನೆ

Last Updated 27 ನವೆಂಬರ್ 2021, 20:39 IST
ಅಕ್ಷರ ಗಾತ್ರ

ನವದೆಹಲಿ: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಸ್‌ನ ರೂಪಾಂತರ ತಳಿ ‘ಓಮಿಕ್ರಾನ್’ ಕುರಿತಂತೆ ವಿಶ್ವದಾದ್ಯಂತ ಆತಂಕ ಮನೆಮಾಡಿದ್ದು, ಅಂತರರಾಷ್ಟ್ರೀಯ ಸಂಚಾರ ನಿರ್ಬಂಧ ಸಡಿಲಿಸುವ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ದೇಶದಲ್ಲಿ ಕೋವಿಡ್ 19 ಮತ್ತು ಲಸಿಕೆ ವಿತರಣೆ ಕುರಿತಾದ ಅಧಿಕಾರಿಗಳ ಸಮಗ್ರ ಪರಿಶೀಲನಾ ಸಭೆಯಲ್ಲಿ ಕೊರೊನಾ ರೂಪಾಂತರ ತಳಿ ‘ಓಮಿಕ್ರಾನ್’ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮೋದಿಗೆ ವಿವರಣೆ ನೀಡಿದ್ದಾರೆ. ಅತ್ಯಂತ ಅಪಾಯಕಾರಿ ಎನ್ನಲಾಗುತ್ತಿರುವ ಈ ತಳಿಯನ್ನು ವಿಶ್ವ ಆರೋಗ್ಯ ಸಂಸ್ಥೆಯು ‘ಕಳವಳಕಾರಿ ರೂಪಾಂತರ’ಎಂದು ಕರೆದಿದ್ದು, ಹಲವು ದೇಶಗಳಲ್ಲಿ ಇದು ಕಂಡುಬಂದಿದೆ ಎಂದು ವಿವರಿಸಿದ್ದಾರೆ.

ಇದು ‘ಡೆಲ್ಟಾ’ರೀತಿಯೇ ಕಳವಳಕಾರಿ ಮತ್ತು ಹೆಚ್ಚು ಸಾಂಕ್ರಾಮಿಕವಾಗಬಲ್ಲ ತಳಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ‘ಓಮಿಕ್ರಾನ್’ಎಂದು ಹೆಸರಿಟ್ಟಿದೆ.

2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಕೊರೊನಾ ರೂಪಾಂತರ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಅತ್ಯಂತ ಕ್ರಿಯಾಶೀಲರಾಗಿರಬೇಕು. ಜನರೂ ಸಹ ಅತ್ಯಂತ ಜಾಗರೂಕರಾಗಿರಬೇಕು. ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರದಂತಹ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಪ್ರಧಾನಿ ಹೇಳಿರುವುದಾಗಿ ಪ್ರಧಾನಿ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ವಿದೇಶಗಳಿಂದ ಬರುವ ಎಲ್ಲರ ಮೇಲೂ ನಿಗಾ ಇಡಬೇಕು. ಮಾರ್ಗಸೂಚಿಯಂತೆ ಅವರನ್ನು ಪರೀಕ್ಷೆಗೆ ಒಳಪಡಿಸಬೇಕು. ಈ ಸೋಂಕಿನ ಅಪಾಯದಲ್ಲಿರುವ ರಾಷ್ಟ್ರಗಳ ಬಗ್ಗೆಯೂ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ನಿರ್ಬಂಧ ಹಿಂತೆಗೆತ ನಿರ್ಧಾರವನ್ನು ಮರುಪರಿಶೀಲಿಸುವಂತೆಯೂ ಅವರು ಸೂಚಿಸಿದ್ದಾರೆ.

ನಾಗರಿಕ ವಿಮಾನಯಾನ ಸಚಿವಾಲಯ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಒಂದು ದಿನದ ಬಳಿಕ ಮೋದಿ ಅಧಿಕಾರಿಗಳಿಗೆ ಈ ನಿರ್ದೆಶನ ಕೊಟ್ಟಿದ್ದಾರೆ.

ಬ್ರಿಟನ್, ಜರ್ಮನಿ, ಸಿಂಗಪುರ, ಇಸ್ರೇಲ್, ಫ್ರಾನ್ಸ್ ಮತ್ತು ಇಟಲಿ ದೇಶಗಳಲ್ಲಿ ದಕ್ಷಿಣ ಆಫ್ರಿಕಾ ವಿಮಾನಗಳಿಗೆ ನಿರ್ಬಂಧ ಹೇರಿದ ಸಂದರ್ಭದಲ್ಲೇ ಭಾರತದಲ್ಲಿ ಅಂತರರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

‘ಓಮಿಕ್ರಾನ್’ ರೂಪಾಂತರ ಪತ್ತೆಯಾಗಿರುವ ದಕ್ಷಿಣ ಆಫ್ರಿಕಾ, ಹಾಂಗ್‌ಕಾಂಗ್, ಬೊತ್ಸ್ವಾನಾಗಳಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ನಡೆಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಸೂಚಿಸಿದೆ.

‘ಕೊರೊನಾದ ರೂಪಾಂತರ ತಳಿ ಪತ್ತೆಯಾಗಿರುವುದರಿಂದ ನಾವು ಜಾಗೃತರಾಗಿದ್ದೇವೆ. ಕೋವಿಡ್–19 ಮತ್ತು ಲಸಿಕೆ ಕುರಿತಾದ ಪರಿಶೀಲನಾ ಸಭೆಯಲ್ಲಿ ಕಂಟೈನ್ಮೆಂಟ್ ಮತ್ತು ಎರಡನೇ ಡೋಸ್ ಲಸಿಕೆ ನೀಡಿಕೆ ಹೆಚ್ಚಳದ ಬಗ್ಗೆ ಚರ್ಚೆ ನಡೆಸಲಾಯಿತು’ಎಂದು ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ನಿಯಮಗಳ ಪ್ರಕಾರ, ಅಂತರರಾಷ್ಟ್ರೀಯ ಪ್ರಯಾಣಿಕರ ಜಿನೋಮ್ ಸೀಕ್ವೆನ್ಸಿಂಗ್ ಮಾದರಿ ಸಂಗ್ರಹಿಸಿ ನೆಟ್‌ವರ್ಕ್ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸುವಂತೆಯೂ ಮೋದಿ ಸೂಚಿಸಿದ್ದಾರೆ.

***

*ಚೆನ್ನೈ, ಕೊಯಮತ್ತೂರು, ಮದುರೈ ಹಾಗೂ ತಿರುಚಿನಾಪಳ್ಳಿ ವಿಮಾನ ನಿಲ್ದಾಣಗಳಿಗೆ ಬಂದಿಳಿಯುವ ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇರಿಸಲು ನಾಲ್ಕು ಅಧಿಕಾರಿಗಳನ್ನು ತಮಿಳುನಾಡು ಸರ್ಕಾರ ನೇಮಿಸಿದೆ.

*ಕೇಂದ್ರ ಆರೋಗ್ಯ ಸಚಿವಾಲಯ ವರ್ಗೀಕರಿಸಿದ ದೇಶಗಳ ಪ್ರಯಾಣಿಕರು ಗುಜರಾತ್‌ಗೆ ಬಂದಿಳಿದಾಗ, ಅವರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯ

*ದಕ್ಷಿಣ ಆಫ್ರಿಕಾದಿಂದ ಬರುವ ಪ್ರಯಾಣಿಕರಿಗೆ ಮುಂಬೈನಲ್ಲಿ ಕ್ವಾರಂಟೈನ್‌: ಮೇಯರ್ ಕಿಶೋರಿ ಪೆಡ್ನೇಕರ್

*ಶಬರಿಮಲೆ ಯಾತ್ರೆಯಲ್ಲಿ ಪಾಲ್ಗೊ
ಳ್ಳುವ ಮಕ್ಕಳಿಗೆ ಆರ್‌ಟಿಪಿಸಿಆರ್ ಪರೀಕ್ಷೆ ಕಡ್ಡಾಯವಲ್ಲ ಎಂದು ಕೇರಳ ಸರ್ಕಾರ ತಿಳಿಸಿದೆ. ಉಳಿದವರಿಗೆ ಎರಡೂ ಡೋಸ್‌ ಹಾಕಿಸಿಕೊಂಡ ಪ್ರಮಾಣಪತ್ರ ಅಥವಾ ಆರ್‌ಟಿಪಿಸಿಆರ್ ಪ್ರಮಾಣಪತ್ರ ಕಡ್ಡಾಯ ಮಾಡಲಾಗಿದೆ

*ಒಡಿಶಾದಲ್ಲಿ ಶನಿವಾರ 41 ಮಕ್ಕಳೂ ಸೇರಿದಂತೆ 264 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಶುಕ್ರವಾರವೂ 219 ಜನರಲ್ಲಿ ಸೋಂಕು ಪತ್ತೆಯಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT