ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್: ಅನಗತ್ಯ ಜನಸಂಚಾರ ತಪ್ಪಿಸಿ –ಕೇಂದ್ರ ಸರ್ಕಾರದ ಸಲಹೆ

ಹೊಸ ವರ್ಷಾಚರಣೆ ಸಣ್ಣ ಪ್ರಮಾಣದಲ್ಲಿರಲಿ
Last Updated 17 ಡಿಸೆಂಬರ್ 2021, 20:57 IST
ಅಕ್ಷರ ಗಾತ್ರ

ನವದೆಹಲಿ: ‘ಯೂರೋಪ್‌ ಮತ್ತು ವಿಶ್ವದ ಬೇರೆಡೆ ಕೊರೊನಾ ವೈರಾಣುವಿನ ಓಮೈಕ್ರಾನ್‌ ರೂಪಾಂತರ ತಳಿಯು ತೀವ್ರವಾಗಿ ಹರಡುತ್ತಿದೆ. ಹೀಗಾಗಿ ದೇಶದ ಜನರು ಅನಗತ್ಯ ಪ್ರಯಾಣವನ್ನು ತಪ್ಪಿಸಬೇಕು. ಹೊಸ ವರ್ಷಾಚರಣೆ ಸಣ್ಣ ಪ್ರಮಾಣದಲ್ಲಿ ಇರಬೇಕು’ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

‘ದೇಶದಲ್ಲಿ 20 ದಿನಗಳಿಂದ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್‌ನ ಹೊಸ ಪ್ರಕರಣಗಳ ಸಂಖ್ಯೆ 10,000ಕ್ಕಿಂತಲೂ ಕಡಿಮೆ ಇದೆ. ಬೇರೆ ದೇಶಗಳಲ್ಲಿ ಕೋವಿಡ್‌ ಮತ್ತು ಓಮೈಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಆಗುತ್ತಿರುವ ಏರಿಕೆ ಗಮನಿಸಿದರೆ, ನಾವು ಬಹಳ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ. ಓಮೈಕ್ರಾನ್‌ ರೂಪಾಂತರ ತಳಿಯು, ಡೆಲ್ಟಾಗಿಂತಲೂ ಬಹಳ ವೇಗವಾಗಿ ಹರಡುತ್ತಿದೆ. ಸಮುದಾಯಕ್ಕೆ ಸೋಂಕು ತಗುಲಿಸುವಲ್ಲಿ ಓಮೈಕ್ರಾನ್‌, ಡೆಲ್ಟಾವನ್ನು ಮೀರಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸರ್ಕಾರ ಹೇಳಿದೆ.

‘ದೇಶದ 19 ಜಿಲ್ಲೆಗಳಲ್ಲಿ, ಒಂದು ವಾರದಿಂದ ಕೋವಿಡ್‌ ದೃಢಪಡುವ ಪ್ರಮಾಣವು ಶೇ 5–10ಕ್ಕೆ ಏರಿಕೆಯಾಗಿದೆ. ಐದು ಜಿಲ್ಲೆಗಳಲ್ಲಿ ಈ ಪ್ರಮಾಣವು ಶೇ 10ಕ್ಕಿಂತಲೂ ಹೆಚ್ಚು ಇದೆ. ಈ ಜಿಲ್ಲೆಗಳಲ್ಲಿ ಕೋವಿಡ್‌ ದೃಢಪಡುವ ಪ್ರಮಾಣವು ಶೇ 5ಕ್ಕಿಂತ ಕಡಿಮೆಯಾಗುವವರೆಗೆ ಕಠಿಣ ನಿಯಂತ್ರಣ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ’ ಎಂದು ಸರ್ಕಾರವು ಮಾಹಿತಿ ನೀಡಿದೆ.

ದೇಶದಲ್ಲಿ ಓಮೈಕ್ರಾನ್‌ ಪ್ರಕರಣ 101ಕ್ಕೆ ಏರಿಕೆ
ದೇಶದಲ್ಲಿ ಓಮೈಕ್ರಾನ್‌ ರೂಪಾಂತರ ತಳಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಶುಕ್ರವಾರ 101ಕ್ಕೆ ಏರಿಕೆಯಾಗಿದೆ. ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರವು ಹೇಳಿದೆ.

‘ಮಹಾರಾಷ್ಟ್ರದಲ್ಲಿ 32, ದೆಹಲಿಯಲ್ಲಿ 22, ರಾಜಸ್ಥಾನದಲ್ಲಿ 17, ತೆಲಂಗಾಣದಲ್ಲಿ 8, ಕರ್ನಾಟಕದಲ್ಲಿ 8, ಗುಜರಾತ್‌ನಲ್ಲಿ 5, ಕೇರಳದಲ್ಲಿ 5, ಆಂಧ್ರಪ್ರದೇಶ ಚಂಡೀಗಡ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಓಮೈಕ್ರಾನ್ ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರವು ಮಾಹಿತಿ ನೀಡಿದೆ.

‘ಮಹಾರಾಷ್ಟ್ರದಲ್ಲಿ ಶುಕ್ರವಾರ ಓಮೈಕ್ರಾನ್‌ನ 8 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ರಾಜ್ಯದಲ್ಲಿ ಓಮೈಕ್ರಾನ್‌ ಪ್ರಕರಣಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ’ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7ಕ್ಕೆ ಏರಿದೆ ಎಂದು ಕೇರಳ ಸರ್ಕಾರ ಹೇಳಿದೆ. ಮಹಾರಾಷ್ಟ್ರ ಮತ್ತು ಕೇರಳ ಸರ್ಕಾರ ನೀಡಿರುವ ಸಂಖ್ಯೆಯನ್ನು ಪರಿಗಣಿಸಿದರೆ ದೇಶದಲ್ಲಿ ಪತ್ತೆಯಾದ ಓಮೈಕ್ರಾನ್ ಪ್ರಕರಣಗಳ ಸಂಖ್ಯೆ 119 ಆಗುತ್ತದೆ.

‘ಓಮೈಕ್ರಾನ್‌ ವ್ಯಾಪಕವಾಗಿರುವ ಮತ್ತು ಓಮೈಕ್ರಾನ್‌ ಇಲ್ಲದ ದೇಶಗಳಿಂದ ಚೆನ್ನೈಗೆ ಬಂದಿಳಿದಿರುವ 28 ಜನರಿಗೆ ಕೋವಿಡ್‌ ಇರುವುದು ದೃಢಪಟ್ಟಿದೆ. ಅಷ್ಟೂ ಜನರ ಮೂಗು ಮತ್ತು ಗಂಟಲ ದ್ರವದ ಮಾದರಿಯಲ್ಲಿ ಕೋವಿಡ್‌ ದೃಢಪಡಿಸುವ ಎಸ್‌ ವಂಶವಾಹಿಯ ಸಂಖ್ಯೆ ತೀರಾ ಕಡಿಮೆ ಇದೆ. ಅವರಿಗೆ ಓಮೈಕ್ರಾನ್‌ ತಗುಲಿರುವ ಅಪಾಯವಿದೆ. ಮಾದರಿಗಳನ್ನು ವೈರಾಣು ಸಂರಚನೆ ವಿಶ್ಲೇಷಣೆಗೆ ಕಳುಹಿಸಲಾಗಿದೆ’ ಎಂದು ತಮಿಳುನಾಡು ಆರೋಗ್ಯ ಇಲಾಖೆ ಶುಕ್ರವಾರ ಹೇಳಿದೆ.

ಬ್ರಿಟನ್‌ನಲ್ಲಿ 93 ಸಾವಿರ ಪ್ರಕರಣ
ಬ್ರಿಟನ್‌ನಲ್ಲಿ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್‌ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ ಕೋವಿಡ್‌ನ 93,045 ಹೊಸ ಪ್ರಕರಣಗಳು ದೃಢಪಟ್ಟಿವೆ.

ಡಿಸೆಂಬರ್ 1ನ್ನು ಹೊರತುಪಡಿಸಿ ಈವರೆಗೆ, ಈ ಎಲ್ಲಾ ದಿನಗಳಲ್ಲೂ ಬ್ರಿಟನ್‌ನಲ್ಲಿ ಪ್ರತಿದಿನ 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಈಗ ದೃಢಪಟ್ಟ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 1.10 ಕೋಟಿಯನ್ನು ದಾಟಿದೆ. ಇದರಲ್ಲಿ 97 ಲಕ್ಷದಷ್ಟು ಜನರು ಗುಣಮುಖರಾಗಿದ್ದಾರೆ. ಒಟ್ಟು 12.92 ಲಕ್ಷ ಸಕ್ರಿಯ ಪ್ರಕರಣಗಳಿವೆ. ಕಳೆದ 15 ದಿನಗಳಲ್ಲಿ ಕೋವಿಡ್‌ನಿಂದ ಪ್ರತಿದಿನ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

* ವಿಶ್ವದ 91 ದೇಶಗಳಲ್ಲಿ ಓಮೈಕ್ರಾನ್‌ ಹರಡಿದ್ದು, ಒಟ್ಟು 27,000 ಪ್ರಕರಣಗಳು ವರದಿಯಾಗಿವೆ. ಬ್ರಿಟನ್‌ನಲ್ಲಿ 12,000 ಮತ್ತುಡೆನ್ಮಾರ್ಕ್‌ನಲ್ಲಿ 9,000 ಪ್ರಕರಣಗಳು ಪತ್ತೆಯಾಗಿವೆ.
* ಓಮೈಕ್ರಾನ್‌ ಹರಡುವುದನ್ನು ತಡೆಯುವ ಉದ್ದೇಶದಿಂದ ಡೆನ್ಮಾರ್ಕ್ ಸರ್ಕಾರವು ಸಿನಿಮಾ ಮಂದಿರಗಳನ್ನು ಮುಚ್ಚಲು ಆದೇಶಿಸಿದೆ. ಹೆಚ್ಚಿನ ಸಂಖ್ಯೆಯ ಜನರು ಗುಂಪುಗೂಡುವುದನ್ನು ನಿರ್ಬಂಧಿಸಿದೆ.
* ಪೋರ್ಚುಗಲ್‌ನಲ್ಲಿ ಈಗ ಪ್ರತಿದಿನ ಪತ್ತೆಯಾಗುತ್ತಿರುವ ಕೋವಿಡ್‌ ಪ್ರಕರಣಗಳಲ್ಲಿ ಓಮೈಕ್ರಾನ್‌ ಪ್ರಕರಣಗಳ ಪ್ರಮಾಣವುಶೇ 20ಕ್ಕೆ ಏರಿಕೆಯಾಗಿದೆ. ವರ್ಷಾಂತ್ಯದ ವೇಳೆಗೆ ಇದು ಶೇ 80ಕ್ಕೆ ಏರಿಕೆಯಾಗುವ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
* ರಷ್ಯಾದ ಸ್ಫುಟ್ನಿಕ್–ವಿ, ಅಮೆರಿಕದ ಜಾನ್ಸನ್‌ ಅಂಡ್ ಜಾನ್ಸನ್ ಮತ್ತು ಚೀನಾದ ಕೋವಿಡ್‌ ಲಸಿಕೆಗಳು ಓಮೈಕ್ರಾನ್‌ ರೂಪಾಂತರ ತಳಿಯ ವಿರುದ್ಧ ಕೆಲಸ ಮಾಡುವುದಿಲ್ಲ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ನಡೆದ ಅಧ್ಯಯನ ವರದಿಯು ಹೇಳಿದೆ.
* 2021ರ ವಿಶ್ವ ಸುಂದರಿ ಸ್ಪರ್ಧೆಯ ಭಾರತದ ಸ್ಪರ್ಧಿ ಮಾನಸ ವಾರಾಣಸಿ ಸೇರಿದಂತೆ ಹಲವರಿಗೆ ಕೋವಿಡ್‌ ದೃಢಪಟ್ಟಿರುವುದರಿಂದ ಅಂತಿಮ ಸುತ್ತಿನ ಸ್ಪರ್ಧೆಯನ್ನು ಮುಂದೂಡಲಾಗಿದೆ.
* ಜಪಾನ್‌ನಲ್ಲಿ ಕೋವಿಡ್‌ ಲಸಿಕೆಯ ಬೂಸ್ಟರ್‌ ಡೋಸ್‌ ನೀಡುವುದಕ್ಕೆ ವೇಗ ನೀಡಲು ನಿರ್ಧರಿಸಲಾಗಿದೆ.

ತುರ್ತು ಬಳಕೆ: ‘ಕೋವೊವ್ಯಾಕ್ಸ್‌’ಗೆ ಅನುಮತಿ
ಭಾರತದಲ್ಲಿ ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ ತಯಾರಿಸುತ್ತಿರುವ ಕೋವಿಡ್‌ ಲಸಿಕೆ ‘ಕೋವೊವ್ಯಾಕ್ಸ್‌’ ಅನ್ನು ತುರ್ತು ಸಂದರ್ಭದಲ್ಲಿ ಬಳಸಲು ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ಅನುಮೋದನೆ ನೀಡಿದೆ. ಅಮೆರಿಕದ ಕಂಪನಿ ನೋವಾವ್ಯಾಕ್ಸ್‌ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT