ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೆಗಾಸಸ್‘ ಕುರಿತು ಪ್ರಧಾನಿ ಮೋದಿ ಮೌನ ಏಕೆ: ಚಿದಂಬರಂ ಪ್ರಶ್ನೆ

Last Updated 10 ಆಗಸ್ಟ್ 2021, 8:08 IST
ಅಕ್ಷರ ಗಾತ್ರ

ನವದೆಹಲಿ: ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಸರ್ಕಾರದ ಎಲ್ಲ ಸಚಿವರು ಮತ್ತು ಇಲಾಖೆಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿಯವರೇ ಉತ್ತರಿಸಬಹುದಿತ್ತು, ಯಾಕೆ ಅವರು ಈ ವಿಷಯದಲ್ಲಿ ಮೌನವಹಿಸಿದ್ದಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ್ದಾರೆ.

ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್‌ ಭಟ್‌ ಅವರು ಸೋಮವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ‘ರಕ್ಷಣಾ ಸಚಿವಾಲಯ ಎನ್‌ಎಸ್‌ಒ ತಂತ್ರಜ್ಞಾನಗಳ ಸಮೂಹದೊಂದಿಗೆ ಯಾವುದೇ ವ್ಯವಹಾರ ನಡೆಸಿಲ್ಲ‘ ಎಂದು ಮಾಹಿತಿ ನೀಡಿದ್ದರು.

ಈ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಮಂಗಳವಾರ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಚಿದಂಬರಂ, ‘ಎನ್‌ಎಸ್‌ಒ ಸಮೂಹದೊಂದಿಗೆ ಯಾವುದೇ ವ್ಯವಹಾರ ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯ ಹೇಳಿದೆ. ಒಂದು ಸಚಿವಾಲಯ/ ಇಲಾಖೆಯಾಗಿ ಅವರ ಹೇಳಿಕೆ ಸರಿ ಇರಬಹುದು. ಆದರೆ, ಈ ವಿಚಾರದಲ್ಲಿ ಸರ್ಕಾರದಲ್ಲಿರುವ ಹಲವು ಸಚಿವಾಲಯಗಳು, ಇಲಾಖೆಗಳ ಮೇಲೆ ಶಂಕೆ ಇದೆ. ಅವುಗಳ ಬಗ್ಗೆ ಯಾರು ಪ್ರತಿಕ್ರಿಯೆ ನೀಡುತ್ತಾರೆ? ಆ ಸಚಿವಾಲಯ/ ಇಲಾಖೆಗಳ ಪರವಾಗಿ ಪ್ರಧಾನಮಂತ್ರಿ ಮಾತ್ರ ಉತ್ತರಿಸಬಹುದು. ಅವರು ಯಾಕೆ ಮೌನವಾಗಿದ್ದಾರೆ‘ ಎಂದು ಪ್ರಶ್ನಿಸಿದ್ದಾರೆ.

ಇಸ್ರೇಲ್‌ನ ಎನ್‌ಎಸ್‌ಒ ಕಂಪನಿಯ ಪೆಗಾಸಸ್ ಗೂಢಚರ್ಯೆ ಕುತಂತ್ರಾಂಶ ಬಳಸಿ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ನಾಯಕರು, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ ಕೆಲವು ಉದ್ಯಮಿಗಳು, 40 ಪತ್ರಕರ್ತರು ಸೇರಿದಂತೆ 300 ಕ್ಕೂ ಹೆಚ್ಚು ಭಾರತೀಯರ ಮೊಬೈಲ್ ಫೋನ್ ಸಂಖ್ಯೆಗಳ ಮೇಲೆ ಕಣ್ಗಾವಲು ಇಡಲಾಗಿತ್ತು ಎಂದು ಅಂತರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಮಾಡಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಂಗಾರು ಅಧಿವೇಶನದ ಸಂಸತ್ತಿನ ಉಭಯ ಸದನಗಳಲ್ಲಿ ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಜಟಾಪಟಿ ನಡೆಯುತ್ತಿದೆ. ವಿರೋಧ ಪಕ್ಷಗಳು ಮಾಡುತ್ತಿರುವ ಎಲ್ಲ ಆರೋಪವನ್ನು ಸರ್ಕಾರ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT