ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಳನಿಸ್ವಾಮಿಯಿಂದ ನಾಮನಿರ್ದೇಶನ: ಕೋರ್ಟ್‌ ಮೆಟ್ಟಿಲೇರಿದ ಪನ್ನೀರಸೆಲ್ವಂ ಬಣ

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆ
Last Updated 18 ಮಾರ್ಚ್ 2023, 13:52 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆಯಬೇಕಿರುವ ಚುನಾವಣೆಗೆ ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿ ಆಗಿರುವ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಶನಿವಾರ ನಾಮಪತ್ರ ಸಲ್ಲಿಸಿದರು. ಈ ನಾಮಪತ್ರವನ್ನು ತಡೆಹಿಡಿಯುವಂತೆ ಕೋರಿ ಪಳನಿಸ್ವಾಮಿ ಅವರ ಎದುರಾಳಿ ನಾಯಕ, ಪಕ್ಷದಿಂದ ಪದಚ್ಯುತಗೊಂಡಿರುವ ಒ. ಪನ್ನೀರಸೆಲ್ವಂ ಅವರ ಬಣ ಮದ್ರಾಸ್‌ ಹೈಕೋರ್ಟ್‌ ಮೆಟ್ಟಿಲೇರಿದೆ.

ಪನ್ನೀರಸೆಲ್ವಂ ಅವರ ನಿಕಟವರ್ತಿ, ಶಾಸಕ ಪಿ.ಎಚ್‌. ಮನೋಜ್‌ ಪಾಂಡಿಯನ್‌ ಅವರು ಈ ಕುರಿತು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಭಾನುವಾರ ಬೆಳಿಗ್ಗೆ ನ್ಯಾಯಮೂರ್ತಿ ಕೆ. ಕುಮಾರೇಶ್‌ ಬಾಬು ಅವರು ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ. ಈ ಅರ್ಜಿಯು ಪಳನಿಸ್ವಾಮಿ ಮತ್ತು ಪನ್ನೀರಸೆಲ್ವಂ ಅವರು ಬಣಗಳ ನಡುವೆ ಮತ್ತೊಂದು ಕಾನೂನು ಹೋರಾಟಕ್ಕೆ ನಾಂದಿಯಾಗಲಿದೆ ಎನ್ನಲಾಗಿದೆ.

ಪಳನಿಸ್ವಾಮಿ ಅವರು ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ಪನ್ನೀರಸೆಲ್ವಂ ಅವರು, ಪಕ್ಷ ಆಂಗೀಕರಿಸಿರುವ ಪ್ರಕ್ರಿಯೆಗಳನ್ನು ಅನುಸರಿಸದೇ ಚುನಾವಣೆ ಘೋಷಿಸಲಾಗಿದೆ. ಇದು ‘ಕಿಸೆಗಳ್ಳತನದಂಥ ಕೆಲಸ’ ಎಂದು ಕಿಡಿಕಾರಿದರು.

ಕಳೆದ ವರ್ಷ ಜುಲೈ 11ರಂದು ನಡೆದಿದ್ದ ಎಐಎಡಿಎಂಕೆಯ ಸಾಮಾನ್ಯ ಮಂಡಳಿ ಸಭೆಯಲ್ಲಿ ಪಳನಿಸ್ವಾಮಿಯವರನ್ನು ಪಕ್ಷದ ಮಧ್ಯಂತರ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಕುರಿತು ಫೆಬ್ರುವರಿ 23ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್‌, ಈ ನೇಮಕಾತಿಯನ್ನು ಊರ್ಜಿತಗೊಳಿಸಿತ್ತು. ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬೇರೆ ಯಾರೂ ನಾಮಪತ್ರ ಸಲ್ಲಿಸದಿದ್ದರೆ, ಪಳನಿಸ್ವಾಮಿ ಅವರೇ ಅವಿರೋಧವಾಗಿ ಆಯ್ಕೆ ಆಗುತ್ತಾರೆ. ಇದರಿಂದಾಗಿ ಪಕ್ಷದ ಮೇಲಿನ ಅವರ ಹಿಡಿತ ಮತ್ತಷ್ಟು ಬಲವಾಗುತ್ತದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT