ಸೋಮವಾರ, ಜುಲೈ 4, 2022
21 °C

ಅಸುರಕ್ಷಿತ ಲೈಂಗಿಕತೆಯಿಂದ ಕಳೆದ ಹತ್ತು ವರ್ಷಗಳಲ್ಲಿ 17 ಲಕ್ಷ ಜನರಿಗೆ ಎಚ್‌ಐವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಸುಮಾರು 17 ಲಕ್ಷ ಜನರು ಅಸುರಕ್ಷಿತ ಲೈಂಗಿಕತೆಯಿಂದ ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯು (ಎನ್‌ಎಸಿಒ) ತಿಳಿಸಿದೆ.

ಕಳೆದ 10 ವರ್ಷಗಳಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಗಮನಾರ್ಹ ರೀತಿಯಲ್ಲಿ ಕಡಿಮೆಯಾಗಿದೆ. ಅಸುರಕ್ಷಿತ ಲೈಂಗಿಕತೆಯ ಕಾರಣ 2011–12ರಲ್ಲಿ 2.4 ಲಕ್ಷ ಜನರಿಗೆ ಎಚ್‌ಐವಿ ಸೋಂಕು ತಗುಲಿತ್ತು. ಈ ಸಂಖ್ಯೆ 2020–21ಕ್ಕೆ 85,268 ರಷ್ಟಾಗಿದೆ ಎಂದು ಆರ್‌ಟಿಐ ಪ್ರಶ್ನೆಗೆ ನೀಡಲಾದ ಉತ್ತರದಲ್ಲಿ ತಿಳಿಸಲಾಗಿದೆ.

ಮಧ್ಯಪ್ರದೇಶದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್‌ ಗೌರ್‌ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಎನ್‌ಎಸಿಒ, ಭಾರತದಲ್ಲಿ 2011–2021ರ ನಡುವೆ ಅಸುರಕ್ಷಿತ ಲೈಂಗಿಕತೆಯಿಂದ 17,08,777 ಜನರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ಮಾಹಿತಿ ನೀಡಿದೆ. 

ಆಂಧ್ರಪ್ರದೇಶದಲ್ಲಿ 3,18,814 ಎಚ್‌ಐವಿ ಸೋಂಕು ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ 2,84,577, ಕರ್ನಾಟಕದಲ್ಲಿ 2,12,982, ತಮಿಳುನಾಡಿನಲ್ಲಿ 1,16,536, ಉತ್ತರ ಪ್ರದೇಶದಲ್ಲಿ 1,10,911 ಮತ್ತು ಗುಜರಾತ್‌ನಲ್ಲಿ 87,440  ಸೋಂಕು ಪ್ರಕರಣಗಳು ಕಂಡು ಬಂದಿವೆ ಎಂದು ಎನ್‌ಎಸಿಒ ಹೇಳಿದೆ. 

2011–12 ರಿಂದ 2020–21ರವರೆಗೆ ರಕ್ತ ಸಂಬಂಧಿತ ವಸ್ತುಗಳ ಸಂಪರ್ಕದಿಂದ 15,782 ಜನರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ. ತಾಯಿಯಿಂದ ಮಕ್ಕಳಿಗೆ ವರ್ಗಾವಣೆಯಾದ 4,423 ಪ್ರಕರಣಗಳು ದಾಖಲಾಗಿವೆ.

2020ರ ಮಾಹಿತಿ ಪ್ರಕಾರ, ದೇಶದಲ್ಲಿ 81,430 ಮಕ್ಕಳು ಸೇರಿ 23,18,737 ಜನರು ಎಚ್‌ಐವಿ ಜೊತೆ ಜೀವಿಸುತ್ತಿದ್ದಾರೆ. 

ಪರೀಕ್ಷೆಯ ಪೂರ್ವ ಅಥವಾ ಪರೀಕ್ಷೆಯ ನಂತರ ಎಚ್‌ಐವಿ ಸೋಂಕಿತ ವ್ಯಕ್ತಿಗಳ ಜೊತೆ ನಡೆಸಿದ ಸಮಾಲೋಚನೆಯಲ್ಲಿ ಅವರು ನೀಡಿದ ಪ್ರತಿಕ್ರಿಯೆಯಿಂದ ಎಚ್‌ಐವಿ ಹರಡುವ ವಿಧಾನಗಳ ಮಾಹಿತಿಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು