ಶುಕ್ರವಾರ, ಜೂನ್ 18, 2021
21 °C

2025ರೊಳಗೆ ದೇಶದ 25 ನಗರಗಳಲ್ಲಿ ಮೆಟ್ರೊ ಸೇವೆ: ಪ್ರಧಾನಿ ನರೇಂದ್ರ ಮೋದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2025ರೊಳಗೆ ದೇಶದ 25 ನಗರಗಳಲ್ಲಿ ಮೆಟ್ರೊ ಸೇವೆ ದೊರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದರು.

ದೆಹಲಿಯಲ್ಲಿ ಭಾರತದ ಮೊಟ್ಟ ಮೊದಲ ಚಾಲಕರಹಿತ ಮೆಟ್ರೊ ರೈಲು ಕಾರ್ಯಾಚರಣೆಗೆ ಆನ್‌ಲೈನ್‌ ಮೂಲಕ ಹಸಿರು ನಿಶಾನೆ ನೀಡಿ ಅವರು ಮಾತನಾಡಿದರು. ಪೂರ್ಣ ಆಟೊಮ್ಯಾಟಿಕ್‌ ಚಾಲಕರಹಿತ ಈ ಮೆಟ್ರೊ ರೈಲು,  ಜನಕಪುರಿ ವೆಸ್ಟ್‌ನಿಂದ ಬೊಟಾನಿಕಲ್‌ ಗಾರ್ಡನ್‌ವರೆಗಿನ 37 ಕಿ.ಮೀ ನೀಲಿ ಮಾರ್ಗದಲ್ಲಿ ಸಂಚರಿಸಲಿದೆ. ವಿಶ್ವದ ಶೇ 7 ಮೆಟ್ರೊ ರೈಲು ಜಾಲದಲ್ಲಿ ಇಂತಹ ಚಾಲಕರಹಿತ ರೈಲು ಸೇವೆಯಿದ್ದು, ಇದೀಗ ದೆಹಲಿ ಮೆಟ್ರೊ ರೈಲು ನಿಗಮವು(ಡಿಎಂಆರ್‌ಸಿ)ಈ ಗುಂಪಿಗೆ ಸೇರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. 

‘ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ದೆಹಲಿ ಮೆಟ್ರೊ ರೈಲು ಕಾರ್ಯಾಚರಣೆ ಆರಂಭವಾಗಿತ್ತು. 2014ರವರೆಗೆ ಕೇವಲ ಐದು ನಗರಗಳಲ್ಲಿ ಇದ್ದ ಮೆಟ್ರೊ ಸೌಲಭ್ಯವು 2020ರಲ್ಲಿ 18 ನಗರಗಳಿಗೆ ವಿಸ್ತರಣೆಯಾಗಿದೆ. 2025ರೊಳಗೆ 25ಕ್ಕೂ ಅಧಿಕ ನಗರಗಳಲ್ಲಿ ಮೆಟ್ರೊ ಸೇವೆಯನ್ನು ನಾವು ವಿಸ್ತರಿಸಲಿದ್ದೇವೆ’ ಎಂದು ಮೋದಿ ಹೇಳಿದರು.

‘2014ರಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಸಂದರ್ಭದಲ್ಲಿ ದೇಶದಲ್ಲಿ 248 ಕಿ.ಮೀ ಮೆಟ್ರೊ ಜಾಲವಿತ್ತು. ಇದು 2025ರೊಳಗೆ 700 ಕಿ.ಮೀ ದಾಟಲಿದೆ. 2014ರಲ್ಲಿ 17 ಲಕ್ಷ ಜನರು ಮೆಟ್ರೊ ಬಳಸುತ್ತಿದ್ದರು. ಇದೀಗ ಈ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. ಮೆಟ್ರೊ ಸೇವೆಯು ಜನರ ಪ್ರಯಾಣವನ್ನು ಸುಲಭಗೊಳಿಸಿರುವುದು ಇದಕ್ಕೆ ಸಾಕ್ಷಿ’ ಎಂದರು.

ಯುಪಿಎ ಸರ್ಕಾರದ ಅವಧಿಯ ಕಾರ್ಯವೈಖರಿಯನ್ನು ಇದೇ ವೇಳೆ ಟೀಕಿಸಿದ ಮೋದಿ, ‘ಭವಿಷ್ಯದ ಅಗತ್ಯತೆಯ ಬಗ್ಗೆ ಅಂದು ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಯಾವುದೇ ಕೆಲಸವನ್ನು ಅವರು ನಿಷ್ಠೆಯಿಂದ ಮಾಡಿಲ್ಲ. ಹೀಗಾಗಿ ಮೂಲಸೌಕರ್ಯ ಬೇಡಿಕೆ ಹಾಗೂ ಪೂರೈಕೆ ನಡುವೆ ಅಂತರ ಸೃಷ್ಟಿಯಾಯಿತು’ ಎಂದರು.

ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಮಾರ್ಗದಲ್ಲಿ ಸಂಚರಿಸಲು ಏಕೀಕೃತ ಮೊಬಿಲಿಟಿ ಕಾರ್ಡ್‌(ಎನ್‌ಸಿಎಂಸಿ) ಸೇವೆಯನ್ನೂ ಮೋದಿ ಉದ್ಘಾಟಿಸಿದರು. ದೇಶದ ಯಾವುದೇ ಭಾಗದಲ್ಲಿ ನೀಡಿದ ರುಪೇ ಡೆಬಿಟ್‌ ಕಾರ್ಡ್‌ ಬಳಸಿಕೊಂಡು ಈ ಮಾರ್ಗದಲ್ಲಿ ಪ್ರಯಾಣಿಕರು ಪ್ರಯಾಣಿಸಬಹುದು. 2022ರೊಳಗೆ ಈ ಸೌಲಭ್ಯವು ದೆಹಲಿ ಮೆಟ್ರೊ ಜಾಲದ ಎಲ್ಲ ಮಾರ್ಗಗಳಲ್ಲೂ ಬಳಕೆಗೆ ಲಭ್ಯವಾಗಲಿದೆ.

‘ದೆಹಲಿ ಮೂಲಸೌಕರ್ಯ ಆಧುನೀಕರಣ’

‘21ನೇ ಶತಮಾನದ ಭಾರತದ ವೈಭವವನ್ನು ರಾಷ್ಟ್ರ ರಾಜಧಾನಿ ದೆಹಲಿಯು ಪ್ರತಿಬಿಂಬಿಸಬೇಕು. ಈ ನಿಟ್ಟಿನಲ್ಲಿ ಇಲ್ಲಿನ ಹಳೆಯ ಮೂಲಸೌಕರ್ಯಗಳನ್ನು ಆಧುನೀಕರಣಗೊಳಿಸುವುದಕ್ಕೆ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಮೋದಿ ಹೇಳಿದರು.

‘ದೆಹಲಿಯು, 130 ಕೋಟಿ ಜನರ ಆರ್ಥಿಕ ಹಾಗೂ ಅಧಿಕಾರದ ರಾಜಧಾನಿಯಾಗಿದೆ. ದೆಹಲಿಯಲ್ಲಿರುವ ಪ್ರವಾಸಿ ತಾಣಗಳ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ವಿದ್ಯುತ್‌ ಚಾಲಿತ ವಾಹನಗಳ ಖರೀದಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಕೊಳೆಗೇರಿ ನಿವಾಸಿಗಳಿಗೆ ಉತ್ತಮ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಹೊಸ ಸಂಸತ್‌ ಭವನ ಹಾಗೂ ಭಾರತ್‌ ವಂದನಾ ಉದ್ಯಾನದ ನಿರ್ಮಾಣ ಕಾರ್ಯವೂ ಆರಂಭಗೊಂಡಿದ್ದು, ದೆಹಲಿಯ ಸಾವಿರಾರು ಜನರಿಗೆ ಇದು ಉದ್ಯೋಗ ನೀಡಲಿದೆ’ ಎಂದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು