ಮಂಗಳವಾರ, ಡಿಸೆಂಬರ್ 1, 2020
21 °C

ದೆಹಲಿ: ಪಟಾಕಿ ನಿಷೇಧ ಆದೇಶದ ಉಲ್ಲಂಘನೆ, ಕುಸಿದ ಗಾಳಿಯ ಗುಣಮಟ್ಟ

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ನವದೆಹಲಿ: ಪಟಾಕಿ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಿ ಹೊರಡಿಸಲಾದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡದ ದೆಹಲಿಯ ಜನ, ಎಗ್ಗಿಲ್ಲದೇ ಪಟಾಕಿ ಹೊಡೆಯುವ ಮೂಲಕವೇ ಶಬ್ಧಾಡಂಬರದ ದೀಪಾವಳಿ ಆಚರಣೆಗೆ ಒತ್ತು ನೀಡಿದ್ದಾರೆ.

ಶನಿವಾರ ಮಧ್ಯರಾತ್ರಿ ಕಳೆದರೂ ಮುಗಿಯದ ಪಟಾಕಿ ಅಬ್ಬರದಿಂದಾಗಿ ರಾಜಧಾನಿ ವಲಯದಲ್ಲಿ ಗಾಳಿಯ ಗುಣಮಟ್ಟವು ‘ತೀವ್ರ’ ಸ್ವರೂಪದಲ್ಲಿ ಹದಗೆಟ್ಟಿದೆ.

ಇಲ್ಲಿನ ಐಟಿಒ ಮತ್ತು ಆನಂದ ವಿಹಾರ ಪ್ರದೇಶಗಳಲ್ಲಿ ಭಾನುವಾರ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು ಕ್ರಮವಾಗಿ 461 ಮತ್ತು 478ರಷ್ಟು ದಾಖಲಾಗಿದೆ ಎಂದು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ ತಿಳಿಸಿದೆ.

ಭಾನುವಾರ ರಾತ್ರಿಯೂ ಪಟಾಕಿಹಾವಳಿ ಮಿತಿ ಮೀರಿದೆ. ಸೋಮವಾರವೂ ಪಟಾಕಿ ಸುಡುವುದು ಮುಂದುವರಿದಲ್ಲಿ ಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚಲಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ ಎಂದು ಸಮಿತಿ ಎಚ್ಚರಿಕೆ ನೀಡಿದೆ.

ನವದೆಹಲಿ, ನೊಯ್ಡಾ, ಗ್ರೇಟರ್‌ ನೊಯ್ಡಾ, ಗುರುಗ್ರಾಮ, ಘಾಜಿಯಾಬಾದ್‌ ಒಳಗೊಂಡಿರುವ ರಾಜಧಾನಿ ವಲಯ (ಎನ್‌ಸಿಆರ್)ದಲ್ಲಿ ಇದೇ 30ರವರೆಗೆ ಪಟಾಕಿ ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನವೆಂಬರ್‌ 9ರಂದು ಆದೇಶ ಹೊರಡಿಸಿತ್ತು.

ಅದಕ್ಕೂ ಮೊದಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರು ಪಟಾಕಿ ನಿಷೇಧಿಸಿ ಆದೇಶ ಹೊರಡಿಸಿದ್ದಲ್ಲದೆ, ಎಲ್ಲರೂ ಒಂದಾಗಿ ಏಕಕಾಲಕ್ಕೆ ಲಕ್ಷ್ಮೀ ಪೂಜೆ ಮಾಡುವ ಮೂಲಕ ಶಬ್ದರಹಿತ ದೀಪಾವಳಿಗೆ ಆದ್ಯತೆ ನೀಡುವಂತೆ ಕೋರಿದ್ದರು.

ಶನಿವಾರ ಆಚರಿಸಲಾದ ಛೋಟಿ (ಚಿಕ್ಕ) ದೀಪಾವಳಿಯಂದು ಇಲ್ಲಿನ ಅಕ್ಷರಧಾಮ ಮಂದಿರದಲ್ಲಿ ಕೇಜ್ರಿವಾಲ್‌ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಲಕ್ಷ್ಮೀ ಪೂಜೆ ನೆರವೇರಿಸಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು