ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ಪಾಕ್‌ ದೋಣಿಯಿಂದ ₹280 ಕೋಟಿ ಮೌಲ್ಯದ ಹೆರಾಯಿನ್ ವಶ

Last Updated 25 ಏಪ್ರಿಲ್ 2022, 12:49 IST
ಅಕ್ಷರ ಗಾತ್ರ

ಅಹಮದಾಬಾದ್‌: ಒಂಬತ್ತು ಜನರಿದ್ದ ಪಾಕಿಸ್ತಾನದ ದೋಣಿಯೊಂದನ್ನು ಗುಜರಾತ್‌ ತೀರದ ಸಮೀಪ ವಶಪಡಿಸಿಕೊಂಡಿರುವ ಕರಾವಳಿ ರಕ್ಷಣಾ ಪಡೆ ಮತ್ತು ಭಯೋತ್ಪಾದನಾ ನಿಗ್ರಹ ದಳವು, ₹280 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಸೋಮವಾರ ತಿಳಿಸಿದ್ದಾರೆ.

ಪಾಕಿಸ್ತಾನದ ದೋಣಿ ‘ಅಲ್‌ ಹಜ್‌’ ಭಾರತದ ಸಮುದ್ರ ಪ್ರದೇಶಕ್ಕೆ ಪ್ರವೇಶಿಸಿದಾಗ ಗಸ್ತು ಕಾರ್ಯಾಚರಣೆಯಲ್ಲಿದ್ದ ಕರಾವಳಿ ರಕ್ಷಣಾ ಪಡೆಯ ಹಡಗುಗಳು ಅದನ್ನು ವಶಕ್ಕೆ ಪಡೆದಿವೆ ಎಂದೂ ಹೇಳಿದ್ದಾರೆ.

ದೋಣಿ ಮತ್ತು ಅದರಲ್ಲಿದ್ದವರನ್ನು ಹೆಚ್ಚಿನ ತನಿಖೆಗಾಗಿ ಕಛ್‌ ಜಿಲ್ಲೆಯ ಜಖೌ ಬಂದರಿಗೆ ಕರೆತರಲಾಗಿದೆ ಎಂದಿದ್ದಾರೆ.

1,439 ಕೋಟಿ ಮೌಲ್ಯದ ಹೆರಾಯಿನ್‌ ವಶ: 1,439 ಕೋಟಿ ಮೌಲ್ಯದ 205.6 ಕೆ.ಜಿ.ಹೆರಾಯಿನ್‌ ತುಂಬಿದ್ದ ಕಂಟೈನರ್‌ ಅನ್ನು ಗುಜರಾತ್‌ನ ಕಾಂಡ್ಲಾ ಬಂದರು ಸಮೀಪದಿಂದ ವಶಕ್ಕೆ ಪಡೆದಿದ್ದು, ಈ ಸಂಬಂಧ ಪಂಜಾಬ್‌ನ ಆಮದುದಾರನನ್ನು ಬಂಧಿಸಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ಸೋಮವಾರ ತಿಳಿಸಿದೆ.

ಕಳೆದ ವರ್ಷದ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ ನಡುವೆ ಇರಾನ್‌ನಿಂದ ಬಂದಿದ್ದ 17 ಕಂಟೈನರ್‌ಗಳ ಪೈಕಿ ಒಂದರಿಂದ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಹೇಳಿದೆ.

ಗುಪ್ತಚರ ಇಲಾಖೆಯ ಮಾಹಿತಿಯ ಆಧಾರದಲ್ಲಿ ಡಿಆರ್‌ಐ ಮತ್ತು ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಉತ್ತರಾಖಂಡದ ಕಂಪನಿಯೊಂದು ಇರಾನ್‌ನ ಬಂದರ್‌ ಅಬ್ಬಾಸ್‌ ಬಂದರಿನಿಂದ ಆಮದು ಮಾಡಿಕೊಂಡಿರುವ 17 ಕಂಟೈನರ್‌ಗಳನ್ನು ತಪಾಸಣೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಂಟೈನರ್‌ಗಳಲ್ಲಿ 10,318 ಚೀಲಗಳಲ್ಲಿ ‘ಜಿಪ್ಸಂ ಪೌಡರ್‌’ ಅನ್ನು ಆಮದು ಮಾಡಿಕೊಳ್ಳಲಾಗಿತ್ತು ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT