ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿ: ಮಹಿಳಾ ಸಂಸದರ ಒತ್ತಾಯ

ನೂರ್ ಮುಕದಂ ಕೊಲೆ ಪ್ರಕರಣ ಪ್ರಸ್ತಾಪಿಸುತ್ತಾ ಸದನದಲ್ಲಿ ಕಣ್ಣೀರಿಟ್ಟ ಸಂಸದೆ ಅಸ್ಮಾ ಖಾದೀರ್‌
Last Updated 31 ಜುಲೈ 2021, 8:55 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜರ್ನ್ಯವನ್ನು ಪ್ರಕರಣಗಳನ್ನು ತಡೆಯುವುದಕ್ಕಾಗಿ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವಂತೆ ಪಾಕಿಸ್ತಾನದ ವಿವಿಧ ಪಕ್ಷಗಳ ಮಹಿಳಾ ಸಂಸದರು ಪಕ್ಷ ಭೇದ ಮರೆತು ಸರ್ವಾನುಮತದಿಂದ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶುಕ್ರವಾರ ಸಂಸತ್ತಿನ ಕಲಾಪದಲ್ಲಿ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ), ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮಹಿಳಾ ಸದಸ್ಯರು ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ಡಾನ್ ಪತ್ರಿಕೆ ಶನಿವಾರ ವರದಿ ಮಾಡಿದೆ.

ಇಸ್ಲಾಮಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಮಾಜಿ ರಾಜತಾಂತ್ರಿಕ ಶೌಖತ್‌ ಮುಕದಂ ಅವರ ಪುತ್ರಿ ನೂರ್‌ ಮುಕದಂ ಅವರ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮಹಿಳಾ ಸಂಸದರು, ಪಾಕಿಸ್ತಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ.

‌‘ಅತ್ಯಾಚಾರ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸಿ ಹಾಗೂ ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕೆಂದು ನಾವು 69 ಮಹಿಳಾ ಸಂಸದರು ಒತ್ತಾಯಿಸುತ್ತಿದ್ದೇವೆ‘ ಎಂದು ವಿರೋಧ ಪಕ್ಷ ಪಿಎಂಎಲ್‌–ಎನ್‌ ಸಂಸದೆ ಸೈಯದ್‌ ನೊಶೀನ್‌ ಇಫ್ತಿಕಾರ್‌ ಹೇಳಿದ್ದಾರೆ. ಇದೇ ವೇಳೆ ಅತ್ಯಾಚಾರ ಪ್ರಕರಣಗಳನ್ನು ಪರಿಶೀಲಿಸಲು ಸಂಸದೀಯ ಸಮಿತಿಯನ್ನು ರಚಿಸುವಂತೆ ಮಹಿಳಾ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.

‘ಪಾಕಿಸ್ತಾನದಲ್ಲಿ ಜನ–ಜೀವನ ಸುಗಮವಾಗಿ ನಡೆಯಬೇಕೆಂದರೆ ಅತ್ಯಾಚಾರಿಗಳು ಮತ್ತು ಕೊಲೆಗಡುಕರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು‘ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಅವರ ಪಕ್ಷದ ಸಂಸದೆ ಅಸ್ಮಾ ಖಾದೀರ್‌ ಒತ್ತಾಯಿಸಿದ್ದಾರೆ.

ಪಾಕಿಸ್ತಾನದಲ್ಲಿ ಇತ್ತೀಚೆಗೆ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು ಹಾಗೂ ಇತ್ತೀಚೆಗೆ ನೂರ್ ಮುಕದಂ ಅವರ ಹತ್ಯೆಯ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವ ವೇಳೆ ಅಸ್ಮಾ ಖದೀರ್‌ ಕಣ್ಣೀರಿಟ್ಟರು.

ಇಸ್ಲಾಮಾಬಾದ್‌ನ ಐಷಾರಾಮಿ ಪ್ರದೇಶದಲ್ಲಿ ನೂರ್‌ ಮುಕದಂ ಅವರನ್ನು ಖ್ಯಾತ ಉದ್ಯಮಿ ಪುತ್ರನೊಬ್ಬ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣದ ನಂತರ ಮಹಿಳೆಯರ ಮೇಲಿನ ದೌರ್ಜನ್ಯದ ವಿಷಯವು ಮಹಿಳಾ ಸಂಸದರ ಗಮನ ಸೆಳೆದಿದೆ. ಈ ಪ್ರಕರಣದಲ್ಲಿ ಕೊಲೆಗಾರ ರನ್ನು ಬಂಧಿಸಲಾಗಿದೆ. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆದಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT