ಶನಿವಾರ, ಸೆಪ್ಟೆಂಬರ್ 25, 2021
24 °C

ಪೆಗಾಸಸ್‌ ಬಳಸಿಲ್ಲ ಎಂದು ದೃಢಪಡಿಸುವಿರೇ: ‘ಸುಪ್ರೀಂ’ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದ ವಿವಿಧ ವರ್ಗಗಳ ಜನರ ಮೇಲೆ ಬೇಹುಗಾರಿಕೆ ನಡೆಸಲು ಪೆಗಾಸಸ್‌ ಕುತಂತ್ರಾಂಶವನ್ನು ಬಳಸಿದೆ ಅಥವಾ ಬಳಸಿಲ್ಲ ಎಂಬ ವಿಚಾರವನ್ನು ನ್ಯಾಯಾಲಯದ ಮುಂದೆ ದೃಢಪಡಿಸುವ ಬಯಕೆಯ ಇದೆಯೇ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. 

ಗೂಢಚರ್ಯೆ ನಡೆಸಿಲ್ಲ. ಆದರೆ, ಅದಕ್ಕೆ ಸಂಬಂಧಿಸಿದ ಎಲ್ಲ ಅಂಶಗಳನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗುವುದು ಎಂದು ಕೇಂದ್ರ ಸರ್ಕಾರವು ಸಲ್ಲಿಸಿರುವ ಎರಡು ಪುಟಗಳ ಪ್ರಮಾಣಪತ್ರವು ಅರ್ಜಿದಾರರಿಗೆ ತೃಪ್ತಿ ತಂದಿಲ್ಲ ಎಂಬುದು ಗಮನಕ್ಕೆ ಬಂದಿದೆ ಎಂದು ಮುಖ್ಯ  ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಪೀಠವು ಸೋಮವಾರ ಹೇಳಿದೆ. 

‘ಪ್ರಕರಣದ ವಿಚಾರಣೆಯು ನಾಳೆಯೂ (ಮಂಗಳವಾರ) ಮುಂದುವರಿಯಲಿದೆ. ಇನ್ನೊಂದು ವಿವರವಾದ ಪ್ರಮಾಣಪತ್ರ ಸಲ್ಲಿಸುವ ಇಚ್ಛೆ ಇದೆಯೇ? ಹಾಗಿದ್ದರೆ ನಮ್ಮ ಗಮನಕ್ಕೆ ತನ್ನಿ. ಇಲ್ಲ ಎಂದಾದರೆ ವಿಚಾರಣೆ ಮುಂದುವರಿಸಬಹುದು. ಪ್ರಮಾಣಪತ್ರ ಸಲ್ಲಿಕೆಗೆ ಸರ್ಕಾರಕ್ಕೆ ಇಚ್ಛೆ ಇಲ್ಲ ಎಂದಾದರೆ ಬಲವಂತ ಮಾಡ
ಲಾಗದು’ ಎಂದು ಪೀಠವು ಹೇಳಿತು. 

ಸಾಮಾಜಿಕ ಹೋರಾಟಗಾರರು, ರಾಜಕಾರಣಿಗಳು, ಪತ್ರಕರ್ತರು, ನ್ಯಾಯಾಂಗದ ಸದಸ್ಯರು ಮುಂತಾದವರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪವನ್ನು ಸರ್ಕಾರವು ಸ್ಪಷ್ಟವಾಗಿ ತಳ್ಳಿ ಹಾಕಿದೆ. ಆದರೆ, ಈ ವಿಚಾರದಲ್ಲಿ ಸ್ಥಾಪಿತ ಹಿತಾಸಕ್ತಿಗಳ ಅಪಪ್ರಚಾರವನ್ನು ಬಯಲು ಮಾಡುವುದಕ್ಕಾಗಿ ಪರಿಣತರ ಸಮಿತಿ ರಚಿಸಲಾಗುವುದು ಎಂದು ತಿಳಿಸಿದೆ. 

ಬೇಹುಗಾರಿಕೆಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಚಾರ. ಹಾಗಾಗಿ, ಪ್ರಮಾಣಪತ್ರದ ಮೂಲಕ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು.  ಬೇಹುಗಾರಿಕೆ ನಡೆಸಿಲ್ಲ ಎಂದು ಸರ್ಕಾರವು ಪ್ರಮಾಣಪತ್ರ ಸಲ್ಲಿಸಿದರೆ ಅರ್ಜಿದಾರರು ತಮ್ಮ ಅರ್ಜಿಗಳನ್ನು ವಾಪಸ್‌ ಪಡೆಯುತ್ತಾರೆಯೇ ಎಂದು ಪ್ರಶ್ನಿಸಿದರು. 

ಪೆಗಾಸಸ್‌ ಕುತಂತ್ರಾಂಶವನ್ನು ಸರ್ಕಾರ ಅಥವಾ ಅದರ ಸಂಸ್ಥೆಗಳು ಎಂದಾದರೂ ಬಳಸಿವೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಲು ಸರ್ಕಾರ ಹಿಂದೇಟು ಹಾಕಿದೆ. ಈ ವಿಚಾರದಲ್ಲಿ ತಾವು ನಿರಪರಾಧಿ ಎಂಬುದನ್ನು ಸರ್ಕಾರವು ಸಾಬೀತು ಮಾಡುವಂತೆ ಸೂಚಿಸಬೇಕು ಎಂದು ಅರ್ಜಿದಾರ ಎನ್‌. ರಾಮ್‌ ಮತ್ತು ಇತರರ ಪರ ವಕೀಲರಾದ ಕಪಿಲ್‌ ಸಿಬಲ್‌, ಶ್ಯಾಮ್‌ ದಿವಾನ್‌, ರಾಕೇಶ್‌ ದ್ವಿವೇದಿ ಹೇಳಿದರು. 

ಪೆಗಾಸಸ್‌ ಕುತಂತ್ರಾಂಶವನ್ನು ಬಳಸಿಯೇ ಇಲ್ಲ ಎಂದು ಸರ್ಕಾರವು ಪ್ರಮಾಣ ಮಾಡಬೇಕು ಎಂದು ಸಿಬಲ್‌ ಆಗ್ರಹಿಸಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು