ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಪಘಾತ ಸಂತ್ರಸ್ತರ ಪೋಷಕರಿಗೆ ಪರಿಹಾರ ನ್ಯಾಯಸಮ್ಮತ

ದೆಹಲಿ ಹೈಕೋರ್ಟ್‌ ಅಭಿಮತ
Last Updated 17 ಜನವರಿ 2021, 11:35 IST
ಅಕ್ಷರ ಗಾತ್ರ

ನವದೆಹಲಿ: ‘ಬದುಕಿನ ಒಂದು ಹಂತದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಅವಲಂಬಿಸಿರುತ್ತಾರೆ. ಹೀಗಾಗಿ, ರಸ್ತೆ ಅಪಘಾತದಲ್ಲಿ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ಪರಿಹಾರ ನಿರಾಕರಿಸುವುದು ನ್ಯಾಯಸಮ್ಮತವಲ್ಲ’ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

‘ಅಪಘಾತ ನಡೆದ ಸಂದರ್ಭದಲ್ಲಿ ಒಂದು ವೇಳೆ ಪೋಷಕರು ಮಕ್ಕಳ ಮೇಲೆ ಅವಲಂಬನೆಯಾಗಿರಲಿಲ್ಲ ಎಂದು ಭಾವಿಸಿಕೊಳ್ಳೋಣ. ಆದರೆ, ಭವಿಷ್ಯದಲ್ಲಿ ಅವರು ಅವಲಂಬನೆಯಾಗುವ ಪರಿಸ್ಥಿತಿ ಉದ್ಭವವಾಗುತ್ತದೆ. ಅದು ಹಣಕಾಸಿನ ವಿಚಾರವಾಗಿಯೂ ಮತ್ತು ಭಾವನಾತ್ಮಕವಾಗಿಯೂ ಇರುತ್ತದೆ. ಮಕ್ಕಳು ಹೇಗೆ ಪೋಷಕರ ಮೇಲೆ ಅವಲಂಬನೆಯಾಗಿರುತ್ತಾರೆ. ಅದೇ ರೀತಿ ಒಂದು ಹಂತದಲ್ಲಿ ಪೋಷಕರು ಮಕ್ಕಳ ಮೇಲೆ ಅವಲಂಬನೆಯಾಗುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

2008ರಲ್ಲಿ ನಡೆದ ರಸ್ತೆ ಅಪಘಾತದಲ್ಲಿ 23 ವರ್ಷದ ಮಗನನ್ನು ಕಳೆದುಕೊಂಡ ಮಹಿಳೆಯೊಬ್ಬರು ಹೆಚ್ಚಿನ ಪರಿಹಾರ ನೀಡುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ಜತೆಗೆ, ₹2.42 ಲಕ್ಷ ನೀಡಿದ್ದ ಪರಿಹಾರವನ್ನು ₹6.80 ಲಕ್ಷಕ್ಕೆ ಹೆಚ್ಚಿಸುವಂತೆ ಆದೇಶಿಸಿದೆ. ನ್ಯಾಯಮೂರ್ತಿ ಜೆ. ಆರ್‌. ಮಿಧಾ ಈ ಆದೇಶ ನೀಡಿದ್ದಾರೆ.

ಅತಿ ವೇಗವಾಗಿ ಮತ್ತು ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡಿದ್ದರಿಂದ ಅಪಘಾತವಾಗಿದೆ. ಜತೆಗೆ ಅಪಘಾತದಲ್ಲಿ ಸಾವಿಗೀಡಾದ ಯುವಕನ ತಂದೆ ದೆಹಲಿಯಲ್ಲಿ ಸಬ್‌ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಗನ ಆದಾಯದ ಮೇಲೆ ಅವರು ಅವಲಂಬನೆಯಾಗಿಲ್ಲ. ಹೀಗಾಗಿ, ಪೋಷಕರು ಪರಿಹಾರಕ್ಕೆ ಅರ್ಹರಲ್ಲ ಎಂದು ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶ ನೀಡಿತ್ತು.

ಆದರೆ, ನ್ಯಾಯಮಂಡಳಿ ಆದೇಶವನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಅಪಘಾತದಲ್ಲಿ ಸಾವಿಗೀಡಾದವರ ಪೋಷಕರನ್ನು ಮಕ್ಕಳ ಮೇಲೆ ಅವಲಂಬಿತರು ಎಂದು ಕಾನೂನಿನಲ್ಲಿ ಪರಿಗಣಿಸಲಾಗಿದೆ. ವೃದಾಪ್ಯದಲ್ಲಿ ಪೋಷಕರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ಹೈಕೋರ್ಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT