ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನ ಮುಗಿದರೂ ಮುಗಿಯದ ಜಟಾಪಟಿ

ಸಂಸತ್ ಕಲಾಪದಲ್ಲಿ ನಡವಳಿಕೆ: ಆಡಳಿತ–ಪ್ರತಿಪಕ್ಷಗಳಿಂದ ದೂರು, ಪ್ರತಿದೂರು
Last Updated 12 ಆಗಸ್ಟ್ 2021, 19:51 IST
ಅಕ್ಷರ ಗಾತ್ರ

ನವದೆಹಲಿ: ಪೆಗಾಸಸ್‌ ಗೂಢಚರ್ಯೆ ಪ್ರಕರಣದಿಂದಾಗಿ ಸಂಸತ್ ಅಧಿವೇಶನ ವ್ಯರ್ಥವಾಗಿದ್ದು ಒಂದೆಡೆಯಾದರೆ, ಕೊನೆಯ ಕ್ಷಣದಲ್ಲಿ ಮಸೂದೆಗಳ ಅಂಗೀಕಾರದ ವೇಳೆ ರಾಜ್ಯಸಭೆಯಲ್ಲಿ ನಡೆದ ಸಿನಿಮೀಯ ಘಟನೆಗಳು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿವೆ. ಪ್ರತಿಪಕ್ಷಗಳ ಮುಖಂಡರು ಸಂಸತ್ ಭವನದಿಂದ ಮೆರವಣಿಗೆ ನಡೆಸಿ ಸರ್ಕಾರದ ನಡೆ ಖಂಡಿಸಿದವು. ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಸಚಿವರ ತಂಡವು, ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿತು.

ಸಂಸತ್ ಅಧಿವೇಶನದಲ್ಲಿ ಅನುಚಿತ ಘಟನೆಗಳಿಗೆ ಕಾರಣವಾದ ಪ್ರತಿಪಕ್ಷ ಸದಸ್ಯರ ವಿರುದ್ಧ ರಾಜ್ಯಸಭೆಯ ಸಭಾಪತಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವರ ತಂಡ ಆಗ್ರಹಿಸಿದೆ. ಸರ್ಕಾರವು ಮಸೂದೆಗೆ ಅಂಗೀಕಾರ ಪಡೆಯುವ ಉದ್ದೇಶದಿಂದ ಅಧಿವೇಶನಕ್ಕೆ ಹೊರಗಿನಿಂದ ಜನರನ್ನು ಕರೆಸಿದ್ದು ಏಕೆ ಎಂದು ಪ್ರತಿಪಕ್ಷಗಳು ಪ್ರಶ್ನಿಸಿವೆ.

ಪ್ರತಿಪಕ್ಷಗಳ ಪರೇಡ್: ಮಸೂದೆ ಅಂಗೀಕಾರಕ್ಕಾಗಿ ಅತ್ಯಧಿಕ ಭದ್ರತಾ ಸಿಬ್ಬಂದಿಯನ್ನು ಸದನದಲ್ಲಿ ನಿಯೋಜಿಸುವ ಮೂಲಕ ಕೇಂದ್ರ ಸರ್ಕಾರವು ಸಮರಕಲೆ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ವಿರೋಧಿ ಬಣವನ್ನು ಒಟ್ಟುಗೂಡಿಸಲು ಮುಂದಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಇದೇ 20ರಂದು ವಿರೋಧ ಪಕ್ಷಗಳ ಆಡಳಿತವಿರುವ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧರಾಜ್ಯ ಮಟ್ಟದಲ್ಲಿ ಜಂಟಿ ಅಭಿಯಾನ ನಡೆಸುವ ತಂತ್ರಗಾರಿಕೆಯು ಸಭೆಯಲ್ಲಿ ಅಂತಿಮವಾಗಲಿದೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಸಂಸತ್ ಕಚೇರಿಯಲ್ಲಿ ಗುರುವಾರ ಸಭೆ ನಡೆಯಿತು. ನಂತರ, ರಾಹುಲ್ ಗಾಂಧಿ ಸೇರಿದಂತೆ 11 ಪಕ್ಷಗಳ ನಾಯಕರು ಸಂಸತ್ತಿನಿಂದ ವಿಜಯ ಚೌಕಕ್ಕೆ ಮೆರವಣಿಗೆಯಲ್ಲಿ ಸಾಗಿ, ಜಂಟಿ ಹೇಳಿಕೆ ನೀಡಿದರು.

ಸರ್ಕಾರದ ನಡವಳಿಕೆಯು ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದ್ದು, ಹೊರಗಿನಿಂದ ಬಂದ ವ್ಯಕ್ತಿಗಳು ಮಹಿಳಾ ಸದಸ್ಯರ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಯಿತು.

‌‘ಸರ್ಕಾರವು ಪ್ರತಿಪಕ್ಷಗಳ ಚರ್ಚೆಯ ಬೇಡಿಕೆಯನ್ನು ತಿರಸ್ಕರಿಸಿದೆ. ಸಂಸತ್ತಿನ ಹೊಣೆಗಾರಿಕೆಯಿಂದ ವಿಮುಖವಾಗುತ್ತಿದೆ. ಪೆಗಾಸಸ್ ಕುತಂತ್ರಾಂಶ ಬಳಸಿ ನಡೆಸಿದೆ ಎನ್ನಲಾದ ಬೇಹುಗಾರಿಕೆ ಬಗೆಗಿನ ಚರ್ಚೆಯಿಂದ ದೂರ ಸರಿಯುತ್ತಿದೆ. ಇದು ಸಂಸತ್ತಿನ ಮುಂಗಾರು ಅಧಿವೇಶನವನ್ನು ಉದ್ದೇಶಪೂರ್ವಕವಾಗಿ ಹಳಿ ತಪ್ಪಿಸಿತು. ಇದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಸರ್ಕಾರ ನೀಡುತ್ತಿರುವ ಗೌರವ’ ಎಂದು ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ, ಆನಂದ್ ಶರ್ಮಾ, ಶರದ್ ಪವಾರ್, ಟಿ.ಆರ್. ಬಾಲು, ಟಿ. ಶಿವ, ರಾಮಗೋಪಾಲ್ ಯಾದವ್, ಸಂಜಯ್ ರಾವುತ್, ಮನೋಜ್, ಎಳಮರಂ ಕರೀಂ, ಇ.ಟಿ. ಮೊಹ್ಮದ್, ಬಶೀರ್, ಬಿನೋಯ್ ವಿಶ್ವಂ, ಎನ್‌.ಕೆ. ಪ್ರೇಮಚಂದ್ರನ್, ಥಾಮಸ್ ಚಾರಿಕಾಡನ್ ಮೊದಲಾದವರು ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ.

‘ಉಭಯ ಸದನಗಳಲ್ಲಿ ಕಲಾಪ ನಡೆಯದಿರುವುದಕ್ಕೆ ಸರ್ಕಾರವೂ ಜವಾಬ್ದಾರ. ಪೆಗಾಸಸ್ ಚರ್ಚೆ ಕೈಗೆತ್ತಿಕೊಳ್ಳಲು ಇಟ್ಟಿದ್ದ ಪ್ರತಿಪಕ್ಷಗಳ ಬೇಡಿಕೆಯನ್ನು ಒಪ್ಪಿಕೊಳ್ಳಲು ಸರ್ಕಾರ ನಿರಾಕರಿಸಿತು. ಸರ್ಕಾರವು ತನ್ನ ಬಹುಮತವನ್ನು ವಿವೇಚನಾರಹಿತವಾಗಿ ಬಳಸಿಕೊಳ್ಳುತ್ತಿದ್ದು, ಸ್ಥಾಪಿತ ಕಾರ್ಯವಿಧಾನಗಳು ಹಾಗೂ ಸಂಪ್ರದಾಯಗಳನ್ನು ಉಲ್ಲಂಘಿಸುತ್ತಿದೆ’ ಎಂದು ಆರೋಪಿಸಲಾಗಿದೆ.

ತನ್ನದೇ ನಡವಳಿಕೆ ಮತ್ತು ಕಾರ್ಯಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು, ಪ್ರತಿಪಕ್ಷವನ್ನು ದೂಷಿಸುವ ದುರುದ್ದೇಶಪೂರಿತ ಮತ್ತು ದಾರಿತಪ್ಪಿಸುವ ಅಭಿಯಾನವನ್ನು ಸರ್ಕಾರ ಆರಂಭಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು.

ಕ್ಷಮೆಗೆ ಆಡಳಿತ ಪಕ್ಷ ಒತ್ತಾಯ:

ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪೀಯೂಷ್ ಗೋಯಲ್ ಮತ್ತು ಸಚಿವರ ತಂಡವು, ಪ್ರತಿಪಕ್ಷಗಳ ಮುಖಂಡರು ಮಾರ್ಷಲ್‌ಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿತು. ಪ್ರತಿಪಕ್ಷಗಳು ತಾವು ನಡೆದಿದ್ದೇ ಹಾದಿ ಎಂದುಕೊಂಡಿರುವುದು ಖಂಡನೀಯ ಎಂದು ಪ್ರತಿಪಾದಿಸಿತು.

‘ರಾಜ್ಯಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಅವರ ಮೇಜು ಇರುವುದು ಮೇಲೆ ಹತ್ತಿ ನೃತ್ಯ ಮಾಡಲು ಅಥವಾ ಪ್ರತಿಭಟನೆ ಮಾಡಲು ಅಲ್ಲ’ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಅಧಿವೇಶನದಲ್ಲಿ ಅರಾಜಕತೆ ಸೃಷ್ಟಿಸುವುದೇ ಪ್ರತಿಪಕ್ಷಗಳ ಏಕೈಕ ಕಾರ್ಯಸೂಚಿಯಾಗಿತ್ತು ಎಂದು ಅವರು ದೂರಿದ್ದಾರೆ. ತಮ್ಮ ವರ್ತನೆಗೆ ಪ್ರತಿಪಕ್ಷಗಳು ದೇಶದ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದರು.

ನಿಯಮ ಉಲ್ಲಂಘಿಸಿದ ವಿರೋಧ ಪಕ್ಷದ ಸಂಸದರ ವಿರುದ್ಧ ರಾಜ್ಯಸಭಾ ಸಭಾಪತಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ ಎಂದುಸಂಸದೀಯ ವ್ಯವಹಾರಗಳ ಸಚಿವಪ್ರಲ್ಹಾದ ಜೋಶಿ ಆಗ್ರಹಿಸಿದರು.

ನಾಯ್ಡುಗೆ ಎರಡೂ ಕಡೆಯಿಂದ ದೂರು:

ಪ್ರಲ್ಹಾದ ಜೋಷಿ, ಪೀಯೂಷ್ ಗೋಯಲ್, ಮುಕ್ತಾರ್ ಅಬ್ಬಾಸ್ ನಖ್ವಿ ಸೇರಿದಂತೆ ಕೇಂದ್ರ ಸಚಿವರ ತಂಡವು ಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿತು. ಮಾರ್ಷಲ್‌ಗಳ ಮೇಲೆ ಹಲ್ಲೆ ಮಾಡಿದ ವಿರೋಧ ಪಕ್ಷಗಳ ಸಂಸದರ ನಡವಳಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿತು. ಪ್ರತಿಪಕ್ಷಗಳ ಸದಸ್ಯರು ನಾಯ್ಡು ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ, ಆಡಳಿತ ಪಕ್ಷದ ವಿರುದ್ಧ ಪ್ರತಿದೂರು ಸಲ್ಲಿಸಿತು.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ರಾಜ್ಯಸಭೆ ಉಪಸಭಾಪತಿ ವೆಂಕಯ್ಯ ನಾಯ್ಡು ಅವರನ್ನು ಗುರುವಾರ ಭೇಟಿ ಮಾಡಿ ಮಾತುಕತೆ ನಡೆಸಿದರು. ಸಂಸದರ ವರ್ತನೆ, ಕೋಲಾಹಲ ಕುರಿತಂತೆ ಚರ್ಚಿಸಿದರು. ಕೂಲಂಕಷ ವರದಿ ಪಡೆದ ಬಳಿಕಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಕಲಾಪದಲ್ಲಿ ಉಂಟಾದ ಭಾರಿ ಕೋಲಾಹದಿಂದ ಬೇಸರಗೊಂಡ ನಾಯ್ಡು ಅವರು, ‘ಪ್ರಜಾಪ್ರಭುತ್ವದ ದೇಗುಲದಲ್ಲಿ ನಡೆದ ಅಪಚಾರ’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT