ಮಂಗಳವಾರ, ಸೆಪ್ಟೆಂಬರ್ 21, 2021
21 °C

ಪೆಟ್ರೋಲ್‌ ದರ ಏರಿಕೆ ಖಂಡಿಸಿ ಸಂಸತ್‌ಗೆ ಸೈಕಲ್‌ ಜಾಥಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ : ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಮಂಗಳವಾರ ಬೆಳಿಗ್ಗೆ ಆಯೋಜಿಸಿದ್ದ ಚಹಾಕೂಟದಲ್ಲಿ 15 ವಿರೋಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಒಗ್ಗಟ್ಟಾಗಿರಬೇಕು ಎಂಬ ವಿಷಯಕ್ಕೆ ಸಭೆಯಲ್ಲಿ ಒತ್ತು ನೀಡಲಾಗಿದೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯನ್ನು ಖಂಡಿಸಿ ರಾಹುಲ್‌ ಸೇರಿದಂತೆ ಹಲವು ಸಂಸದರು ಸೈಕಲ್‌ನಲ್ಲಿ ಸಂಸತ್ತಿಗೆ ಹೋದರು. ಸೈಕಲ್‌ ತುಳಿಯಲು ಸಾಧ್ಯವಾಗದವರು ನಡೆದು ಹೋದರು.  

ಕಾಂಗ್ರೆಸ್‌ನ ನೂರು ಸಂಸದರಲ್ಲದೆ, ಟಿಎಂಸಿ, ಎನ್‌ಸಿಪಿ, ಶಿವಸೇನಾ, ಡಿಎಂಕೆ,ಎಡಪಕ್ಷಗಳು ಮತ್ತು ಎಸ್‌ಪಿಯ ಸಂಸದರು ಚಹಾಕೂಟದಲ್ಲಿ ಭಾಗವಹಿಸಿದರು. 17 ವಿರೋಧ ಪಕ್ಷಗಳ ಸಂಸದರಿಗೆ ಚಹಾಕೂಟಕ್ಕೆ ಆಹ್ವಾನ ನೀಡಲಾಗಿತ್ತು. ಬಿಎಸ್‌ಪಿ ಮತ್ತು ಎಎಪಿ ಸಂಸದರು ಚಹಾಕೂಟಕ್ಕೆ ಹಾಜರಾಗಲಿಲ್ಲ. ರಾಹುಲ್‌ ಅವರು ನಡೆಸಿದ್ದ ವಿರೋಧ ಪಕ್ಷಗಳ ಮುಖಂಡರ ಸಭೆಗೆ ಟಿಎಂಸಿ ಗೈರು ಹಾಜರಾಗಿತ್ತು. ಆದರೆ, ಚಹಾಕೂಟದಲ್ಲಿ ಭಾಗಿಯಾಗಿದೆ. 

‘ನಾವೆಲ್ಲರೂ ಒಗ್ಗಟ್ಟಾಗಿರಬೇಕು. ನಮ್ಮ ಧ್ವನಿಯು ಒಗ್ಗಟ್ಟಾದಂತೆ ಅದರ ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ. ಈ ಧ್ವನಿಯನ್ನು ದಮನಿಸುವುದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಕಷ್ಟವಾಗುತ್ತಾ ಹೋಗುತ್ತದೆ’ ಎಂದು ರಾಹುಲ್‌ ಹೇಳಿದ್ದಾರೆ. 

ಪ್ರಚಾರದ ಗಿಮಿಕ್‌: ಬಿಜೆಪಿ

ರಾಹುಲ್‌ ಗಾಂಧಿ ಅವರು ಅಗ್ಗದ ಪ್ರಚಾರಕ್ಕಾಗಿ ಗಿಮಿಕ್‌ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಸರ್ಕಾರದ ವರ್ಚಸ್ಸಿಗೆ ಮಸಿ ಬಳಿಯಲು ಮತ್ತು ಸಂಸತ್‌ ಕಲಾಪ ನಡೆಯುವುದಕ್ಕೆ ತಡೆ ಒಡ್ಡಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ ಎಂದೂ ಬಿಜೆಪಿ ಹೇಳಿದೆ. 

ಸಂಸತ್‌ ಕಲಾಪಕ್ಕೆ ಅಡ್ಡಿ ಮಾಡುವಲ್ಲಿ ವಿರೋಧ ಪಕ್ಷಗಳ ಸದಸ್ಯರು ಪರಸ್ಪರ ಪೈಪೋಟಿಗೆ ಬಿದ್ದಿದ್ದಾರೆ. ಬಿಜೆಪಿ ವಿರೋಧಿ ಗುಂಪಿನ ನಾಯಕ ಎಂದು ಗುರುತಿಸಿಕೊಳ್ಳಲು ಈ ಪೈಪೋಟಿ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು