ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗಾರು ಅಧಿವೇಶನ: ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಿಂದ ಕೋವಿಡ್‌ವರೆಗಿನ ಚರ್ಚೆ

Last Updated 14 ಸೆಪ್ಟೆಂಬರ್ 2020, 7:46 IST
ಅಕ್ಷರ ಗಾತ್ರ

ನವದೆಹಲಿ: ಸೋಮವಾರದಿಂದ ಆರಂಭವಾಗಿರುವ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ರದ್ದುಗೊಳಿಸಿರುವ ಕುರಿತು ವಿರೋಧ ಪಕ್ಷಗಳ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

'ಪ್ರಶ್ನೋತ್ತರ ಅವಧಿ ಅತ್ಯಮೂಲ್ಯವಾದ ಸಮಯವಾಗಿದೆ, ಆದರೆ ಪರಿಸ್ಥಿತಿಯ ಕಾರಣಗಳಿಂದ ಅದಕ್ಕೆ ಅವಕಾಶ ನೀಡಲು ಸಾಧ್ಯವಾಗುತ್ತಿಲ್ಲ ಎಂದು ನೀವು ಹೇಳುತ್ತಿರುವಿರಿ. ಪ್ರಶ್ನೋತ್ತರ ಅವಧಿಯನ್ನು ಕೈಬಿಟ್ಟು ಕಾರ್ಯಕಲಾಪಗಳನ್ನು ನಡೆಸುತ್ತಿರುವಿರಿ. ನೀವು ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸುವ ಪ್ರಯತ್ನ ಮಾಡುತ್ತಿದ್ದೀರಿ' ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದ ಅಧಿರ್ ರಂಜನ್‌ ಚೌಧರಿ ಆಡಳಿತ ಪಕ್ಷವನ್ನು ಆರೋಪಿಸಿದರು.

'ಇದು ಬಹಳ ಭಿನ್ನ ಪರಿಸ್ಥಿತಿಯಾಗಿದೆ. ಒಂದು ದಿನ ಸದನದಲ್ಲಿ ಸೇರುವುದಕ್ಕೂ ಹಿಂದೆ ಸರಿದಿರುವ ಸಮಯದಲ್ಲಿ ನಾವು, ಸುಮಾರು 800–850 ಸಂಸದರು ಇಲ್ಲಿ ಒಟ್ಟಿಗೆ ಸೇರಿದ್ದೇವೆ. ಸರ್ಕಾರವನ್ನು ಪ್ರಶ್ನಿಸಲು ಬಹಳಷ್ಟು ಮಾರ್ಗಗಳಿವೆ. ಸರ್ಕಾರವೇನೂ ಚರ್ಚೆಯಿಂದ ತಪ್ಪಿಸಿಕೊಂಡು ಓಡುತ್ತಿಲ್ಲ. ನಾವೂ ಚರ್ಚೆಗೆ ಸಿದ್ಧರಿದ್ದೇವೆ' ಎಂದು ಬಿಜೆಪಿ ಸಚಿವಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದರು.

'ಬಹಳಷ್ಟು ಪಕ್ಷಗಳ ಮುಖಂಡರು ಪ್ರಶ್ನೋತ್ತರ ಅವಧಿ ರದ್ದುಗೊಳಿಸಿರುವುದು ಮತ್ತು ಶೂನ್ಯ ಅವಧಿಯನ್ನು 30 ನಿಮಿಷಗಳಿಗೆ ಮೊಟುಕುಗೊಳಿಸಿರುವುದಕ್ಕೆ ಸಮ್ಮತಿಸಿದ್ದಾರೆ. ಅಧಿವೇಶನವನ್ನು ಕಠಿಣ ಪರಿಸ್ಥಿತಿಯಲ್ಲಿ ಆಯೋಜಿಸಲಾಗುತ್ತಿದ್ದು, ಎಲ್ಲ ಸದಸ್ಯರೂ ಇದಕ್ಕೆ ಸಹಕರಿಸಬೇಕೆಂದು ಕೋರುತ್ತೇನೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮನವಿ ಮಾಡಿದರು.

ನೀಟ್‌ ಪರೀಕ್ಷೆಗೆ ಸಂಬಂಧಿಸಿದಂತೆ ಡಿಎಂಕೆ ಸಂಸದ ಟಿ.ಆರ್‌.ಬಾಲು ಲೋಕಸಭೆಯ ಗಮನ ಸೆಳೆಯಲು ಪ್ರಯತ್ನಿಸಿದರು. 'ಆತ್ಮಹತ್ಯೆ ಮಾಡಿಕೊಂಡ 12 ವಿದ್ಯಾರ್ಥಿಗಳೆಲ್ಲರೂ ಗ್ರಾಮೀಣ ಭಾಗದಿಂದ ಬಂದವರು. ಅವರು 12ನೇ ತರಗತಿಯನ್ನು ರಾಜ್ಯದ ಪಠ್ಯಕ್ರಮದಲ್ಲಿ ಪಾಸ್ ಮಾಡಿದ್ದರು, ಆದರೆ ನೀಟ್‌ ಪರೀಕ್ಷೆಯು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಮಾತ್ರ ನಡೆಸಲಾಗಿದೆ. ಸಿಬಿಎಸ್‌ಇಯ ಯಾವುದೇ ಪಠ್ಗಗಳು ತಿಳಿಯದೆ, ಅಸಹಾಯಕರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತದ ಭವಿಷ್ಯದ ವೈದ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಹೇಳಿದರು.

ಎನ್‌ಸಿಪಿಯ ಸಂಸದೆ ಸುಪ್ರಿಯಾ ಸುಳೆ ಮಾತನಾಡಿ, 'ಪ್ರಸ್ತುತ ದೇಶದಲ್ಲಿನ ಬಹುದೊಡ್ಡ ಸವಾಲುಗಳು ಆರ್ಥಿಕತೆಯ ಸ್ಥಿತಿ ಮತ್ತು ನಿರುದ್ಯೋಗ. ಮೊದಲ ದಿನ ನಾವು ಆರ್ಥಿಕತೆ, ಸಾಂಕ್ರಾಮಿಕ ರೋಗ ಹಾಗೂ ನಿರುದ್ಯೋಗದ ಸವಾಲುಗಳ ಬಗ್ಗೆ ಚರ್ಚಿಸಬೇಕಿದೆ' ಎಂದರು.

'ಕೋವಿಡ್‌–19 ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಭಾರತದಲ್ಲಿ ಪ್ರತಿ 10 ಲಕ್ಷ ಜನರಿಗೆ 3,328 ಪ್ರಕರಣಗಳು ಹಾಗೂ 55 ಸಾವುಗಳಿಗೆ ನಿಯಂತ್ರಿಸಲಾಗಿದೆ. ಇದು ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ, ಇಡೀ ಜಗತ್ತಿನಲ್ಲಿಯೇ ಅತಿ ಕಡಿಮೆ ಪ್ರಮಾಣವನ್ನು ಹೊಂದಿದೆ' ಎಂದು ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್‌ ಲೋಕಸಭೆಗೆ ಮಾಹಿತಿ ನೀಡಿದರು.

ಸಂಸದರೆಲ್ಲರೂ ಮಾಸ್ಕ್‌ ಧರಿಸಿದ್ದರು ಹಾಗೂ ಇದೇ ಮೊದಲ ಬಾರಿಗೆ ಸಂಸದರೆಲ್ಲರೂ ಹಾಜರಾತಿಯನ್ನು ಆ್ಯಪ್‌ (Attendance Register) ಮೂಲಕ ಖಚಿತ ಪಡಿಸಿದರು. ಸುರಕ್ಷತೆಯ ಕಾರಣಗಳಿಗಾಗಿ ಸದಸ್ಯರ ನಡುವೆ ಪಾಲಿ–ಕಾರ್ಬನ್‌ ಶೀಟ್‌ ಮೂಲಕ ಪ್ರತ್ಯೇಕಿಸಲಾಗಿತ್ತು. ಸಂಸದರು ಕುಳಿತೇ ಚರ್ಚೆಯಲ್ಲಿ ಭಾಗಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT