ಶುಕ್ರವಾರ, ಅಕ್ಟೋಬರ್ 23, 2020
21 °C
ಪಕ್ಷದ ವೆಬ್‌ಸೈಟ್‌, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲು ಚುನಾವಣಾ ಆಯೋಗ ಸೂಚನೆ

ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣ ಮಾಹಿತಿ ಬಹಿರಂಗ ಕಡ್ಡಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಜಕೀಯ ಪಕ್ಷಗಳು ತಾವು ಕಣಕ್ಕಿಳಿಸುವ ಅಭ್ಯರ್ಥಿಗಳ ವಿರುದ್ಧ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಕುರಿತ ಮಾಹಿತಿಯನ್ನು ಪಕ್ಷದ ವೆಬ್‌ಸೈಟ್‌ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಚುನಾವಣಾ ಆಯೋಗ ಶುಕ್ರವಾರ ಸೂಚಿಸಿದೆ.

ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ದಿಷ್ಟ ವ್ಯಕ್ತಿಯನ್ನು ಆಯ್ಕೆ ಮಾಡಿರುವುದಕ್ಕೆ ಕಾರಣಗಳನ್ನು ಸಹ ಪ್ರಕಟಿಸಬೇಕು. ಇದರಿಂದ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಲು ಮತದಾರರಿಗೆ ಮಾಹಿತಿ ನೀಡಿದಂತಾಗುತ್ತದೆ ಎಂದೂ ಆಯೋಗ ಹೇಳಿದೆ.

ಬಿಹಾರ ವಿಧಾನಸಭೆಗೆ ಅಕ್ಟೋಬರ್‌ 28ರಿಂದ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ. ಆಯೋಗ ಇಂಥ ಸೂಚನೆ ನೀಡಿದ ನಂತರ ನಡೆಯುವ ಮೊದಲ ಚುನಾವಣೆಯೂ ಇದಾಗಲಿದೆ. 

ಅಷ್ಟೇ ಅಲ್ಲ, ಕ್ರಿಮಿನಲ್‌ ಹಿನ್ನೆಲೆ ಹೊಂದಿರದ ವ್ಯಕ್ತಿಗಳನ್ನು ಏಕೆ ಸ್ಪರ್ಧಾಕಣಕ್ಕೆ ಇಳಿಸಲಿಲ್ಲ ಎಂಬ ಬಗ್ಗೆಯೂ ಎಲ್ಲ ರಾಜಕೀಯ ಪಕ್ಷಗಳು ವಿವರಣೆ ನೀಡಬೇಕು.

‘ಗೆಲ್ಲುವ ಸಾಮರ್ಥ್ಯವೊಂದೇ ಅಭ್ಯರ್ಥಿಯ ಆಯ್ಕೆಗೆ ಮಾನದಂಡವಾಗಬಾರದು. ಅಭ್ಯರ್ಥಿಯ ಶಿಕ್ಷಣ, ಸಾಧನೆ ಹಾಗೂ ಪ್ರತಿಭೆಯೇ ಮುಖ್ಯವಾಗಬೇಕು ಎಂಬುದೇ ಇಂತಹ ನಿರ್ದೇಶನಕ್ಕೆ ಕಾರಣ’ ಎಂದು ಆಯೋಗ ಸ್ಪಷ್ಟಪಡಿಸಿದೆ.

‘ತನ್ನ ಅಭ್ಯರ್ಥಿಗಳ ಕುರಿತ ವಿವರಗಳನ್ನು ರಾಷ್ಟ್ರೀಯ ಹಾಗೂ ಸ್ಥಳೀಯ ಭಾಷೆಯ ಪತ್ರಿಕೆಯಲ್ಲಿಯೂ ಪ್ರಕಟಿಸಬೇಕು. ಪಕ್ಷವು ಖಾತೆ ಹೊಂದಿರುವ ಫೇಸ್‌ಬುಕ್‌, ಟ್ವಿಟರ್‌ನಂತಹ ಸಾಮಾಜಿಕ ಮಾಧ್ಯಮದ ವೇದಿಕೆಗಳ ಮೂಲಕವೂ ಪ್ರಚುರಪಡಿಸಬೇಕು‘ ಎಂದು ಆಯೋಗ ಹೇಳಿದೆ.

ಅಭ್ಯರ್ಥಿಗಳ ವಿರುದ್ಧ ವಿಚಾರಣೆಗೆ ಬಾಕಿ ಇರುವ ಕ್ರಿಮಿನಲ್‌ ಪ್ರಕರಣಗಳ ಕುರಿತ ಮಾಹಿತಿಯನ್ನು ಬಹಿರಂಗಪಡಿಸುವುದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ಕಳೆದ ಫೆಬ್ರುವರಿಯಲ್ಲಿ ಆಯೋಗಕ್ಕೆ ನಿರ್ದೇಶನ ನೀಡಿತ್ತು. ಈ ನಿರ್ದೇಶನದಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದ್ದ ಆಯೋಗ, ಕ್ರಿಮಿನಲ್‌ ಹಿನ್ನೆಲೆ ಹೊಂದಿರುವ ವ್ಯಕ್ತಿಗಳನ್ನು ಕಣಕ್ಕಿಳಿಸಲು ಆಯ್ಕೆ ಮಾಡಿರುವುದಕ್ಕೆ ಕಾರಣ ನೀಡುವಂತೆ ತಿಳಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು