ಗುರುವಾರ , ಅಕ್ಟೋಬರ್ 28, 2021
19 °C
’ಭಾರತ: ವಿಭಜನೆ ಮತ್ತು ಆ ನಂತರ‘ ವೆಬಿನಾರ್‌ನಲ್ಲಿ ಆರ್‌ಎಸ್ಎಸ್‌ ಮುಖಂಡ ರಾಮ ಮಾಧವ್

ಪ್ರತ್ಯೇಕತಾವಾದವಲ್ಲ, ರಾಷ್ಟ್ರೀಯವಾದ ಚಿಂತನೆ ಬೆಳೆಸಿ: ರಾಮ ಮಾಧವ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ‘ದೇಶ ವಿಭಜನೆ ಪ್ರಕ್ರಿಯೆಯು ಕೇವಲ ಭಯೋತ್ಪಾದಕರನ್ನಷ್ಟೇ ಪ್ರತ್ಯೇಕಗೊಳಿಸಲಿಲ್ಲ, ಭಾವನೆಗಳನ್ನೂ ಪ್ರತ್ಯೇಕವಾಗಿಸಿತು‘ ಎಂದು ಆರ್‌ಎಸ್‌ಎಸ್‌ ಮುಖಂಡ ರಾಮ್‌ ಮಾಧವ್‌ ಹೇಳಿದರು.

‘ಪ್ರತ್ಯೇಕತಾವಾದದಲ್ಲಿ ನಂಬಿಕೆ ಹೊಂದಿರುವ ಶಕ್ತಿಗಳನ್ನು ಹತ್ತಿಕ್ಕುವುದರ ಜೊತೆಗೇ ‘ಭಾವನೆಗಳನ್ನು ಬೆಸೆಯುವ’ ಮಾರ್ಗಗಳನ್ನು ಹುಡುಕುವುದು ಈಗಿನ ಅಗತ್ಯವಾಗಿದೆ’ ಎಂದೂ ಅವರು ಪ್ರತಿಪಾದಿಸಿದರು.

‘ಭಾರತ: ವಿಭಜನೆ ಮತ್ತು ಆ ನಂತರ: ತಲ್ಲಣಗಳ ಸ್ಮರಣಾ ದಿನ’ ಕುರಿತು ಜೆಎನ್‌ಯು ಶನಿವಾರ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಟ್ಟದ ವೆಬಿನಾರ್‌ನಲ್ಲಿ ಅವರು, ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಮಹಮ್ಮದ್‌ ಅಲಿ ಜಿನ್ನಾರನ್ನು ದೈತ್ಯವಾಗಿ ಬೆಳೆಯಲು ಬಿಡಲಾಯಿತು. ಇದೇ ವಿಭಜನೆಯ ದೃಢಸಂಕಲ್ಪಕ್ಕೆ ಕಾರಣವಾಯಿತು’ ಎಂದರು.

ಮಹಮ್ಮದ್ ಅಲಿ ಜಿನ್ನಾ ಅವರು 20ನೇ ಶತಮಾನದ ಆರಂಭದಿಂದ, ಆಗಸ್ಟ್‌ 14,1947ರಲ್ಲಿ ಪಾಕಿಸ್ತಾನ ರಚನೆಯವರೆಗೂ ಆಲ್‌ ಇಂಡಿಯಾ ಮುಸ್ಲಿಂ ಲೀಗ್‌ ನಾಯಕರಾಗಿದ್ದರು.

ಅಖಂಡ ಭಾರತದ ವಿಭಜನೆ ಎಂಬುದು ಆ ಕಾಲಘಟ್ಟದಲ್ಲಿ ಇತರೆ ದೇಶಗಳಲ್ಲಿ ಆದ ವಿಭಜನೆಯಂತೆ ಕೇವಲ ಗಡಿ ನಿಗದಿಪಡಿಸುವುದಷ್ಟೇ ಆಗಿರಲಿಲ್ಲ. ಆಚರಣೆಗಳು ಭಿನ್ನವಾಗಿದ್ದರೂ ಒಟ್ಟಿಗೇ ಬದುಕುತ್ತಿದ್ದ ಹಿಂದೂ, ಮುಸಲ್ಮಾನರ ಪ್ರತ್ಯೇಕ ದೇಶಗಳು ರಚನೆಯಾದವು. ಈ ವಿಭಜನೆಯು ಕೇವಲ ಭಯೋತ್ಪಾದಕರನ್ನಷ್ಟೇ ಪ್ರತ್ಯೇಕವಾಗಿಸಲಿಲ್ಲ. ಭಾವನೆಗಳನ್ನು ಪ್ರತ್ಯೇಕವಾಗಿಸಿತು. ಭಾವನೆಗಳ ಪ್ರತ್ಯೇಕತೆ ಎಂಬುದನ್ನು ಎಚ್ಚರಿಕೆ ಮತ್ತು ಗಂಭೀರವಾಗಿ ಪರಿಗಣಿಸಬೇಕು. ಈ ಕಾರಣದಿಂದ ಸಂಯುಕ್ತ ಭಾರತ ಸಮಾಜವನ್ನು ನಿರ್ಮಿಸಲು ಪ್ರತ್ಯೇಕತಾವಾದ ಮತ್ತು ಕೋಮುವಾದ ಚಿಂತನೆಗಳನ್ನು ಹತ್ತಿಕ್ಕಬೇಕು. ರಾಷ್ಟ್ರೀಯವಾದ ಚಿಂತನೆಗೆ ಉತ್ತೇಜನ ನೀಡಬೇಕು ಎಂದರು.

‘ಅಖಂಡ ಭಾರತ‘ದ ಕಲ್ಪನೆ ಎಂದರೆ ಕೇವಲ ಭೌಗೋಳಿಕ ಗಡಿಗಳನ್ನು ಸೇರಿಸುವುದಷ್ಟೇ ಅಲ್ಲ. ದೇಶ ವಿಭಜನೆಯ ಸಂದರ್ಭದಲ್ಲಿ ಮಾನಸಿಕವಾಗಿ ಮೂಡಿರುವ ಗಡಿಯನ್ನು, ಪ್ರತ್ಯೇಕತಾ ಭಾವನೆಯನ್ನು ತೆಗೆದುಹಾಕುವ ದೃಷ್ಟಿಕೋನದಿಂದ ನೋಡಬೇಕಾಗುತ್ತದೆ ಎಂದು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರೂ ಆದ ಮಾಧವ್‌, ದೇಶ ವಿಭಜನೆಯ ಬೆಳವಣಿಗೆಯನ್ನು ‘ತಪ್ಪು ತೀರ್ಮಾನದ ಕಾರಣ ಉಂಟಾದ ಪ್ರಮಾದ‘ ಎಂದು ಬಣ್ಣಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಈಚೆಗೆ ಆಗಸ್ಟ್ 14 ಅನ್ನು ದೇಶ ವಿಭಜನೆಯ ನೋವುಗಳ ಸ್ಮರಣಾ ದಿನವಾಗಿ ಆಚರಿಸಲಾಗುವುದು ಎಂದು ಪ್ರಕಟಿಸಿದ್ದರು. ಆಗ, ವಿಭಜನೆ ವೇಳೆ ಅಸಂಖ್ಯ ಜನರು ವಸತಿ ಕಳೆದುಕೊಂಡರೆ, ವಿಭಜನೆಯ ಹಿಂಸೆ, ದ್ವೇಷದಿಂದ ಅನೇಕರು ಜೀವ ಕಳೆದುಕೊಂಡರು ಎಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು