ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ ಕಲಾಪ ನುಂಗಿದ ಪೆಗಾಸಸ್: ಸಚಿವರ ಹೇಳಿಕೆ ಪತ್ರ ಹರಿದು ಹಾಕಿದ ಟಿಎಂಸಿ ಸಂಸದ

ಸಚಿವರ ಹೇಳಿಕೆ ಪತ್ರ ಹರಿದುಹಾಕಿದ ಟಿಎಂಸಿ ಸಂಸದ
Last Updated 22 ಜುಲೈ 2021, 19:04 IST
ಅಕ್ಷರ ಗಾತ್ರ

ನವದೆಹಲಿ: ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈ‍ಷ್ಣವ್ ಅವರು ರಾಜ್ಯಸಭೆಯಲ್ಲಿ ಗುರುವಾರ ಹೇಳಿಕೆ ನೀಡಲು ಮುಂದಾದಾಗ ಅವರ ಕೈಯಲ್ಲಿದ್ದ ಹೇಳಿಕೆ ಪತ್ರವನ್ನು ಟಿಎಂಸಿ ಸಂಸದ ಶಂತನು ಸೆನ್ ಕಸಿದುಕೊಂಡು, ಹರಿದು ಹಾಕಿದ್ದಾರೆ. ಗೂಢಚರ್ಯೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಗದ್ದಲ ನಡೆಸಿದ ಕಾರಣ ಗುರುವಾರ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು.

ಪೆಗಾಸಸ್ ಗೂಢಚರ್ಯೆಗೆ ಸಂಬಂಧಿಸಿದಂತೆ ಸರ್ಕಾರವು ಸ್ಪಷ್ಟನೆ ನೀಡಬೇಕು ಎಂದು ಟಿಎಂಸಿ, ಕಾಂಗ್ರೆಸ್‌ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ಸದಸ್ಯರು ಬೆಳಿಗ್ಗೆ ರಾಜ್ಯಸಭೆಯಲ್ಲಿ ಒತ್ತಾಯಿಸಿದರು. ಸರ್ಕಾರವು ಉತ್ತರಿಸದೇ ಇದ್ದ ಕಾರಣ ಗದ್ದಲದ ವಾತಾವರಣ ನಿರ್ಮಾಣವಾಯಿತು. ಹೀಗಾಗಿ ಮಧ್ಯಾಹ್ನ 12ರವರೆಗೆ ಕಲಾಪವನ್ನು ಮುಂದೂಡಲಾಯಿತು. 12 ಗಂಟೆಗೆ ಕಲಾಪ ಆರಂಭವಾದಾಗಲೂ ಗದ್ದಲ ಮುಂದುವರಿಯಿತು. ಹೀಗಾಗಿ ಮಧ್ಯಾಹ್ನ 2 ಗಂಟೆವರೆಗೆ ಕಲಾಪ ಮುಂದೂಡಲಾಯಿತು.

ಕಲಾಪ ಮತ್ತೆ ಆರಂಭವಾದಾಗ, ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿಕೆ ನೀಡಲು ಮುಂದಾದರು. ಆಗ ಅವರ ಕೈಯಲ್ಲಿದ್ದ ಪತ್ರವನ್ನು ಶಂತನು ಸೆನ್ ಕಸಿದುಕೊಂಡು, ಹರಿದುಹಾಕಿದರು. ಇದಕ್ಕೆ ಉಪಸಭಾಪತಿ ಹರಿವಂಶ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಬೆಳಿಗ್ಗೆಯಿಂದ ನೀವು ಆಗ್ರಹಿಸುತ್ತಿದ್ದ ವಿಷಯದ ಬಗ್ಗೆ ಸರ್ಕಾರವು ಹೇಳಿಕೆ ನೀಡಲು ಮುಂದಾದರೆ, ನೀವು ಅವಕಾಶ ನೀಡುತ್ತಿಲ್ಲ. ಈ ರೀತಿ ವರ್ತಿಸಬೇಡಿ’ ಎಂದು ಹೇಳಿದರು.

ಆದರೂ ವಿರೋಧ ಪಕ್ಷಗಳ ಸದಸ್ಯರು ಗದ್ದಲ ಮುಂದುವರಿಸಿದರು. ಆಗ ಅಶ್ವಿನಿ ವೈಷ್ಣವ್ ಅವರು ‘ಈ ಹೇಳಿಕೆಯನ್ನು ಸದನದ ಮುಂದೆ ಇರಿಸುತ್ತೇನೆ’ ಎಂದರು. ಲೋಕಸಭೆಯಲ್ಲಿ ನೀಡಿದ್ದ ಹೇಳಿಕೆಯನ್ನೇ ಅಶ್ವಿನಿ ಇಲ್ಲಿ ಪುನರಾವರ್ತಿಸಿದರು. ‘ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೀಗೆ ಮಾಡಲಾಗಿದೆ. ಈ ವರದಿಗಳ ಹಿಂದೆ ಯಾವುದೇ ಆಧಾರವಿಲ್ಲ. ಈ ಹಿಂದೆಯೂ
ಹೀಗೆ ಮಾಡಲಾಗಿತ್ತು’ ಎಂಬುದು ಅವರ ಹೇಳಿಕೆಯಾಗಿತ್ತು.

‘ಸರ್ಕಾರವು ತನ್ನ ಹೇಳಿಕೆಯನ್ನು ಸದನದ ಮುಂದೆ ಇರಿಸಿದೆ. ಯಾರಾದರೂ ಪ್ರಶ್ನೆ ಕೇಳುವುದಿದ್ದರೆ ಕೇಳಿ’ ಎಂದು ಹರಿವಂಶ್ ಹೇಳಿದರು. ಆದರೆ, ವಿರೋಧ ಪಕ್ಷಗಳ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೀಗಾಗಿ ಮೂರನೇ ಬಾರಿ ಕಲಾಪವನ್ನು ಮುಂದೂಡಲಾಯಿತು.

ಶಂತನು ಸೆನ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ.

ವರದಿಗೆ ಈಗಲೂ ಬದ್ಧ: ಅಮ್ನೆಸ್ಟಿ ಇಂಟರ್‌ನ್ಯಾಷನಲ್

‘ಪೆಗಾಸಸ್ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ನಾವು ಬಹಿರಂಗಪಡಿಸಿರುವ ದತ್ತಾಂಶಗಳು, ವಿವರಗಳು ಮತ್ತು ವರದಿಗಳಿಗೆ ಈಗಲೂ ಬದ್ಧರಾಗಿದ್ದೇವೆ. ಇವುಗಳಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳಿದೆ.

‘ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಅಭಿವೃದ್ಧಿ ಪಡಿಸಿರುವ ಪೆಗಾಸಸ್ ಕಣ್ಗಾವಲು ತಂತ್ರಾಂಶ ಬಳಸಿಕೊಂಡು ಗೂಢಚರ್ಯೆ ನಡೆಸಲಾಗಿದೆ. ಎನ್‌ಎಸ್‌ಒ ಗ್ರೂಪ್ ಗೂಢಚರ್ಯೆ ನಡೆಸಿದೆ ಎಂದು ನಾವು ಹೇಳಿಲ್ಲ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳಿದೆ’ ಎಂಬ ವಿವರ ಇರುವ ವರದಿಗಳು ಹಲವು ಸುದ್ದಿ ಪೋರ್ಟಲ್‌ಗಳಲ್ಲಿ ಪ್ರಕಟವಾಗಿವೆ.

‘ಪೆಗಾಸಸ್ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ಇಸ್ರೇಲ್‌ನ ಹೀಬ್ರೂ ಭಾಷೆಯಲ್ಲಿ ನೀಡಿದ್ದ ಹೇಳಿಕೆ ಯನ್ನು ತಪ್ಪಾಗಿ ಭಾಷಾಂತರ ಮಾಡಿ, ಸುಳ್ಳು ವರದಿ ಗಳನ್ನು ಪ್ರಕಟಿಸಲಾಗಿದೆ. ನಾವು ಬಿಡುಗಡೆ ಮಾಡಿ ರುವ ದತ್ತಾಂಶಗಳಲ್ಲಿ ಇರುವ ಫೋನ್‌ ಸಂಖ್ಯೆಗಳು, ಎನ್‌ಎಸ್ಒ ಗ್ರಾಹಕರು ಗೂಢಚರ್ಯೆ ನಡೆಸಲು ಆಯ್ದುಕೊಂಡಿದ್ದ ಸಂಖ್ಯೆಗಳು ಎಂದು ನಾವು ಈಗಲೂ ಹೇಳುತ್ತೇವೆ’ ಎಂದು ಅಮ್ನೆಸ್ಟಿ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT