ಶುಕ್ರವಾರ, ಸೆಪ್ಟೆಂಬರ್ 17, 2021
21 °C

ಪೆಗಾಸಸ್‌ ಪ್ರಕರಣ ಸತ್ಯವಾಗಿದ್ದರೆ ಗಂಭೀರ: ಸುಪ್ರೀಂ ಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಗಾಸಸ್‌ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎಂಬ ವರದಿಗಳು ನಿಜವಾಗಿದ್ದರೆ ಇದೊಂದು ಗಂಭೀರ ಸ್ವರೂಪದ ಪ್ರಕರಣ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ತಂತ್ರಜ್ಞಾನ ಬಳಸಿ ಅಕ್ರಮವಾಗಿ ಗೂಢಚರ್ಯೆ ನಡೆಸಲಾಗಿದೆ ಎಂಬ ಪ್ರಕರಣವು 2019ರ ಮೇ ನಲ್ಲಿಯೇ ಬಯಲಾದರೂ ಅಪರಾಧ ತನಿಖೆಗಾಗಿ ದೂರು ದಾಖಲಿಸಲು ಏಕೆ ಯತ್ನಿಸಿಲ್ಲ ಎಂದು ಮುಖ್ಯ ನ್ಯಾಯ
ಮೂರ್ತಿ ಎನ್‌.ವಿ. ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್‌ ಅವರ ಪೀಠವು ಪ್ರಶ್ನಿಸಿದೆ. ನ್ಯಾಯಮೂರ್ತಿಗಳೂ ಸೇರಿದಂತೆ ವಿವಿಧ ವರ್ಗಗಳ ಜನರ ಮೇಲೆ ಗೂಢಚರ್ಯೆ ನಡೆಸಲಾಗಿದೆ ಎಂಬ ಪ್ರಕರಣದ ಸ್ವತಂತ್ರ ತನಿಖೆ ನಡೆಯ
ಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪೀಠವು ಸೂಚಿಸಿದೆ.

ಅರ್ಜಿಗಳ ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ನೀಡುವಂತೆ ಅರ್ಜಿದಾರರಿಗೆ ತಿಳಿಸಿದೆ. ಮುಂದಿನ ವಿಚಾರಣೆಯು ಮಂಗಳವಾರ (ಆಗಸ್ಟ್‌ 10) ನಡೆಯಲಿದೆ. 

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಿಂಧುತ್ವವನ್ನೇ ಅರ್ಜಿದಾರರಲ್ಲಿ ಕೆಲವರು ಪ್ರಶ್ನಿಸಿದ್ದಾರೆ. ಹಾಗಾಗಿ, ವಿಷಯವು ಹೆಚ್ಚು ಸಂಕೀರ್ಣಗೊಂಡಿದೆ. ಕೇಂದ್ರ ಸರ್ಕಾರದ ಪರವಾಗಿ ಯಾರಾದರೂ ಹಾಜರಾಗಲಿ. ಆ
ಮೇಲೆ ನೋಡೋಣ ಎಂದು ಪೀಠವು ಹೇಳಿದೆ. 

ಬೇಹುಗಾರಿಕೆಗೆ ಒಳಗಾಗಿದ್ದಾರೆ ಎನ್ನಲಾದ ವ್ಯಕ್ತಿಗಳು ಅಪರಾಧ ತನಿಖೆಗಾಗಿ ದೂರು ದಾಖಲಿಸಿದ್ದಾರೆಯೇ ಎಂದು ಪೀಠವು ಕೇಳಿದೆ. ಭಾರತೀಯ ಸಂಪಾದಕರ ಕೂಟವು ಸಲ್ಲಿಸಿದ ಅರ್ಜಿಯನ್ನು ಬಿಟ್ಟರೆ ಉಳಿದೆಲ್ಲ ಅರ್ಜಿಗಳು ಮಾಧ್ಯಮ ವರದಿಗಳನ್ನು ಆಧಾರಿಸಿವೆ ಎಂದು ನ್ಯಾಯಮೂರ್ತಿ
ಗಳು ಹೇಳಿದ್ದಾರೆ. 

ಅರ್ಜಿ ಸಲ್ಲಿಸಿದ ವ್ಯಕ್ತಿಗಳು ವಿದ್ಯಾವಂತರು ಮತ್ತು ಸಂಪನ್ಮೂಲದ ಲಭ್ಯತೆ ಇರುವವರು. ಹಾಗಾಗಿ, ಅವರು ಅರ್ಜಿಯ ಜತೆಗೆ ಹೆಚ್ಚು ದಾಖಲೆಗಳನ್ನು ಸಲ್ಲಿಸಬಹುದಿತ್ತು ಎಂದು ಪೀಠವು ಹೇಳಿದೆ. ಪತ್ರಕರ್ತರಾದ ಎನ್‌. ರಾಮ್‌ ಮತ್ತು ಶಶಿಕುಮಾರ್‌ ಅವರೂ ಅರ್ಜಿದಾರರಲ್ಲಿ ಸೇರಿದ್ದಾರೆ. 

ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್‌ ಎಂಬ ಕಂಪನಿಯು ತಯಾರಿಸುವ ಪೆಗಾಸಸ್‌ ಕುತಂತ್ರಾಂಶ ಬಳಸಿ 50 ಸಾವಿರಕ್ಕೂ ಹೆಚ್ಚು ಜನ ಮೇಲೆ ಗೂಢಚರ್ಯೆ ನಡೆಸಲು ಯತ್ನಿಸಲಾಗಿದೆ ಎಂಬ ಅಂತರರಾಷ್ಟ್ರೀಯ ಮಟ್ಟದ ತನಿಖಾ ವರದಿಯು ಜುಲೈ 18ರಂದು ಪ್ರಕಟವಾಗಿತ್ತು. ಅದರಲ್ಲಿ ಭಾರತದ ಹಲವರು ಹೆಸರು ಸೇರಿದೆ. 

‘ಮೌಲ್ಯಗಳ ಮೇಲಿನ ದಾಳಿ’

‘ಪೆಗಾಸಸ್‌ ಎಂಬುದು ಕುತಂತ್ರಾಂಶ. ನಮ್ಮ ಗಮನಕ್ಕೆ ಬಾರದಂತೆಯೇ ಇದು ನಮ್ಮ ಜೀವನಕ್ಕೆ ಪ್ರವೇಶಿಸುತ್ತದೆ. ನಮ್ಮ ಜೀವನದೊಳಕ್ಕೆ ಬರಲು ಇದಕ್ಕೆ ಒಂದು ಫೋನ್‌ ಇದ್ದರೆ ಸಾಕು. ಖಾಸಗಿತನ, ಮಾನವ ಘನತೆ, ನಮ್ಮ ಗಣರಾಜ್ಯದ ಮೌಲ್ಯ ಎಲ್ಲದರ ಮೇಲೆ ನಡೆದ ದಾಳಿ ಇದು. ಈ ಕುತಂತ್ರಾಂಶವು ರಾಷ್ಟ್ರೀಯ ಅಂತರ್ಜಾಲದ ಬೆನ್ನೆಲುಬಿನೊಳಗೇ ನುಸುಳಿದೆ’ ಎಂದು ಎನ್‌.ರಾಮ್‌ ಪರ ವಾದಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಹೇಳಿದರು. 

ಸಾಮಾಜಿಕ ಹೋರಾಟಗಾರರು, ಪತ್ರಕರ್ತರು, ರಾಜಕಾರಣಿಗಳು ಮತ್ತು ಇತರರ ಮೇಲೆ ನಡೆದ ಬೇಹುಗಾರಿಕೆ ಬಗ್ಗೆ ಪ್ರಕಟವಾದ ಮಾಧ್ಯಮ ವರದಿಗಳ ಆಧಾರದಲ್ಲಿ  ಫ್ರಾನ್ಸ್‌ ಮತ್ತು ಅಮೆರಿಕದ ನ್ಯಾಯಾಲಯಗಳು ಕ್ರಮ ಕೈಗೊಂಡಿವೆ ಎಂಬುದರತ್ತ ಸಿಬಲ್‌ ಗಮನ ಸೆಳೆದರು. ನ್ಯಾಯಮೂರ್ತಿಗಳ ಮೇಲೆಯೂ ಬೇಹುಗಾರಿಕೆ ನಡೆಸಲಾಗಿದೆ ಎಂಬ ಆರೋಪ ಇದೆ. ಈ ಕುತಂತ್ರಾಂಶವನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗುತ್ತದೆ. ಹಾಗಾಗಿ, ಈ ಹಂತದಲ್ಲಿ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ನೀಡಬೇಕು ಎಂದು ಕೋರಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು