ಸೋಮವಾರ, ಅಕ್ಟೋಬರ್ 26, 2020
24 °C

ಕೃಷ್ಣ ಜನ್ಮಭೂಮಿ ವಿವಾದ: ಮಸೀದಿ ತೆರವು ಕೋರಿ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಉತ್ತರ ಪ್ರದೇಶದ ಮಥುರಾದಲ್ಲಿನ ಶ್ರೀ ಕೃಷ್ಣ ಜನ್ಮಭೂಮಿಯಲ್ಲಿನ ದೇಗುಲವನ್ನು ವಶಕ್ಕೆ ನೀಡುವಂತೆ ಹಾಗೂ ಅಲ್ಲಿನ ಶಾಹಿ ಈದ್ಗಾ ಮಸೀದಿಯ ಅತಿಕ್ರಮಣ ತೆರವುಗೊಳಿಸುವಂತೆ ಕೋರಿ ಸ್ಥಳೀಯ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆ ದಾಖಲಿಸಲಾಗಿದೆ.

ಅಯೋಧ್ಯೆಯ ರಾಮ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ದೊರೆತ ಯಶಸ್ಸಿನಿಂದ ಪ್ರೇರಿತವಾಗಿ ಶ್ರೀಕೃಷ್ಣ ಜನ್ಮಭೂಮಿ ವಿವಾದ ಬಗೆಹರಿಸಿ, ಜಮೀನಿನ ಮಾಲೀಕತ್ವ ನೀಡುವಂತೆ ಕೋರಿ ‘ಭಗವಾನ್ ಶ್ರೀಕೃಷ್ಣ ವಿರಾಜಮಾನ್’ ಹೆಸರಿನಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ.

1968ರ ಅಕ್ಟೋಬರ್ 12ರಿಂದ 17ರವರೆಗೆ ನಡೆದ ಸಂಧಾನ ಮಾತುಕತೆ ಸಂದರ್ಭ ಭಕ್ತರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿರುವ ಶ್ರೀ ಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥೆಯು ಈದ್ಗಾ ಮಸೀದಿ ನಿರ್ವಹಣಾ ಟ್ರಸ್ಟ್ ಸಮಿತಿಯೊಂದಿಗೆ ಅಕ್ರಮ ರಾಜಿ ಮಾಡಿಕೊಂಡು, ಈ ಜಮೀನಿನ ಹೆಚ್ಚುವರಿ ಭಾಗವನ್ನು ಟ್ರಸ್ಟ್‌ಗೇ ಬಿಟ್ಟುಕೊಡುವ ಮೂಲಕ ವಂಚನೆ ಮಾಡಿದೆ ಎಂದು ಅರ್ಜಿದಾರರು ದೂರಿದ್ದಾರೆ.

1658ರಿಂದ 1707ರ ನಡುವೆ ಆಳ್ವಿಕೆ ನಡೆಸಿದ ಮೊಘಲ್ ದೊರೆ ಔರಂಗಜೇಬನಿಗೆ ಸೇರಿದ ಸೈನ್ಯವು ಮಥುರಾದಲ್ಲಿದ್ದ ಕೇಶವದೇವ ದೇವಾಲಯ (ಶ್ರೀಕೃಷ್ಣ ದೇಗುಲ) ನೆಲಸಮಗೊಳಿಸಿ ಈದ್ಗಾ ಮಸೀದಿ ನಿರ್ಮಿಸಿದೆ. 1670ರಲ್ಲಿ ಈ ದೇವಸ್ಥಾನವನ್ನು ಧ್ವಂಸಗೊಳಿಸಿ ಮಸೀದಿ ನಿರ್ಮಿಸಿರುವುದಾಗಿ ಇತಿಹಾಸಕಾರ ಜಾದುನಾಥ್ ಸರ್ಕಾರ್ ಉಲ್ಲೇಖಿಸಿದ್ದಾರೆ ಎಂದು ‘ಭಗವಾನ್‌ ಶ್ರೀಕೃಷ್ಣ ವಿರಾಜಮಾನ್’ ಪರ ಅರ್ಜಿ ಸಲ್ಲಿಸಿರುವ ರಂಜನಾ ಅಗ್ನಿಹೋತ್ರಿ, ವಕೀಲರಾದ ಕರುಣೇಶ್‌ ಕುಮಾರ್ ಶುಕ್ಲಾ, ಹರಿಶಂಕರ್ ಜೈನ್ ಹಾಗೂ ವಿಷ್ಣು ಶಂಕರ್ ಜೈನ್‌ ಆರೋಪಿಸಿದ್ದಾರೆ.

‘ಕಾಶಿಯಲ್ಲಿನ ವಿಶ್ವನಾಥ ದೇಗುಲ ಹಾಗೂ ಮಥುರಾದ ಶೀಕೃಷ್ಣ ದೇಗುಲಗಳನ್ನು ಮುಕ್ತಗೊಳಿಸಿ, ‘ದಕ್ಷಿಣೆ’ ರೂಪದಲ್ಲಿ ನೀಡಬೇಕು’ ಎಂದು ಅಯೋಧ್ಯೆಯಲ್ಲಿ ನಡೆದಿದ್ದ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅರ್ಚಕರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಮನವಿ ಮಾಡಿದ್ದರು. ಈ ಕಾರ್ಯಕ್ರಮ ನಡೆದ ಕೆಲವೇ ದಿನಗಳ ನಂತರ ಈ ಅರ್ಜಿ ಸಲ್ಲಿಕೆಯಾಗಿದೆ.

ಆದರೆ, ಕಾಶಿ ಮತ್ತು ಮಥುರಾ ವಿವಾದಗಳು ತನ್ನ ಕಾರ್ಯಸೂಚಿಯಲ್ಲಿಲ್ಲ ಎಂದು ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ)ಗಳು ಸ್ಪಷ್ಟಪಡಿಸಿವೆ.

ಶ್ರೀಕೃಷ್ಣ ಜನ್ಮಭೂಮಿಯ ಜಾಗೆಯನ್ನು ಮರಳಿಸುವಂತೆ ಕೋರಿ ಹಿಂದೂ ಪುರೋಹಿತರ ಸಂಘಟನೆ ಸಲ್ಲಿಸಿರುವ ಅರ್ಜಿಯ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು