ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ಪ್ರಶ್ನಿಸಿ ‘ಸುಪ್ರೀಂ’ನಲ್ಲಿ ಪಿಐಎಲ್

ನವದೆಹಲಿ: ಗುಜರಾತ್ ಗಲಭೆ ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರವನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಲಾಗಿದೆ.
ವಕೀಲ ಎಂ.ಎಲ್.ಶರ್ಮಾ ಎಂಬುವವರು ಪಿಐಎಲ್ ಸಲ್ಲಿಸಿದ್ದಾರೆ. ‘ಕೇಂದ್ರದ ನಡೆ ಅಸಾಂವಿಧಾನಿಕ, ದುರುದ್ದೇಶಪೂರಿತ ಹಾಗೂ ಸರ್ವಾಧಿಕಾರಿ ಧೋರಣೆಯಿಂದ ಕೂಡಿದೆ. ಹೀಗಾಗಿ ಸಾಕ್ಷ್ಯಚಿತ್ರವನ್ನು ನಿಷೇಧಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಜ.23ರಂದು ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿದ್ದಾರೆ.
‘ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರದ ಭಾಗ– 1 ಹಾಗೂ ಭಾಗ–2 ಪರಿಶೀಲಿಸಬೇಕು. ಗುಜರಾತ್ ಗಲಭೆಗೆ ಕಾರಣರಾದವರು, ಗಲಭೆಯಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಶಾಮೀಲಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ಪತ್ರಿಕಾ ಸ್ವಾತಂತ್ರ್ಯ ಸಂವಿಧಾನದತ್ತ ಮೂಲಭೂತ ಹಕ್ಕು. ಕೇಂದ್ರ ಸರ್ಕಾರ ಈ ಹಕ್ಕನ್ನು ಮೊಟಕುಗೊಳಿಸಬಹುದೇ ಎಂದೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.