ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದಲ್ಲಿ ಮತ್ತೆ ಅಸಮಾಧಾನ: ಪೈಲಟ್‌ ಬೆಂಬಲಿಗರ ಸಭೆ

Last Updated 11 ಜೂನ್ 2021, 4:43 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಬಣದಿಂದ ಮತ್ತೆ ಅಸಮಾಧಾನದ ಕೂಗು ಎದ್ದಿದೆ. ‘ನಮ್ಮ ನಾಯಕ ಪ್ರಸ್ತಾಪಿಸಿದ ಸಮಸ್ಯೆಗಳ ಪರಿಹಾರ ವಿಳಂಬವಾಗುತ್ತಿದೆ,’ ಎಂದು ಪೈಲಟ್‌ ಬೆಂಬಲಿಗರು ಪಕ್ಷದ ವಿರುದ್ಧ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಪೈಲಟ್‌ ನಿವಾಸದಲ್ಲಿ ಗುರುವಾರ ಸೇರಿದ್ದ ಬೆಂಬಲಿಗ ಶಾಸಕರು ಹಲವು ಹೊತ್ತು ಸಭೆ ನಡೆಸಿದ್ದಾರೆ. ವೇದ ಪ್ರಕಾಶ್ ಸೋಲಂಕಿ, ಮುಖೇಶ್ ಭಾಕರ್ ಮತ್ತು ರಾಮ್‌ನಿವಾಸ್ ಗಾವ್ರಿಯಾ ಅವರು ಪೈಲಟ್ ಅವರನ್ನು ಭೇಟಿಯಾದರು. ರಾಕೇಶ್ ಪರೀಕ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

ಸಂಪುಟ ವಿಸ್ತರಣೆ ಮತ್ತು ನೇಮಕಾತಿಗಳಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಸೋಲಂಕಿ, ಭಾಕರ್ ಮತ್ತು ಗಾವ್ರಿಯಾ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡೇ ಹೋರಾಡುವುದಾಗಿಯೂ, ಪೈಲಟ್ ಜೊತೆ ದೃಢವಾಗಿ ನಿಲ್ಲುವುದಾಗಿಯೂ ಅವರು ಪ್ರತಿಪಾದಿಸಿದರು.

‘ಪಕ್ಷದ ಬಲವರ್ಧನೆಗಾಗಿ ನಾವೆಲ್ಲರೂ ಧ್ವನಿ ಎತ್ತುತ್ತಿದ್ದೇವೆ. ಕಾಂಗ್ರೆಸ್ಸಿನ ಬಗೆಗಿನ ನಮ್ಮ ನಿಷ್ಠೆಯನ್ನು ಪ್ರಶ್ನಿಸುವವರು ಪಕ್ಷದ ಹಿತೈಷಿಗಳಲ್ಲ‘ ಎಂದು ಜೈಪುರದ ಚಾಕ್ಸು ವಿಧಾನಸಭಾ ಕ್ಷೇತ್ರದ ಶಾಸಕ ಸೋಲಂಕಿ ಸುದ್ದಿಗಾರರಿಗೆ ತಿಳಿಸಿದರು.

ಕಾಂಗ್ರೆಸ್ ಹೈಕಮಾಂಡ್ ಪೈಲಟ್ ಅವರ ಮಾತನ್ನು ಆಲಿಸಬೇಕು ಮತ್ತು ಅವರು ಎತ್ತಿದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದರು.

‘ಅಸಮಾಧಾನಗೊಂಡಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ಮಾತುಗಳನ್ನು ಕೇವಲ 10 ದಿನಗಳಲ್ಲಿ ಪಂಜಾಬ್‌ನಲ್ಲಿ ಆಲಿಸಲಾಯಿತು. ಆದರೆ ರಾಜಸ್ಥಾನದಲ್ಲಿ 10 ತಿಂಗಳಾದರೂ ಪೈಲಟ್ ಎತ್ತಿದ ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ. 10 ದಿನಗಳಲ್ಲಿ ಸಿಧು ಮಾತನ್ನು ಕೇಳಬಹುದಾದದರೆ, ಪೈಲಟ್ ಮಾತು ಏಕೆ ಕೇಳುತ್ತಿಲ್ಲ. ನಾವು ಪ್ರಸ್ತಾಪಿಸಿದ ಸಮಸ್ಯೆಗಳನ್ನು ಪರಿಹರಿಸುವ ಮಾತೇ ಇಲ್ಲವಾಗಿದೆ,‘ ಎಂದು ಸೋಲಂಕಿ ಕಿಡಿಕಾರಿದರು.

‘ಆಡಳಿತ ವಿಕೇಂದ್ರೀಕರಣಗೊಳ್ಳಬೇಕು. ರಾಜಕೀಯ ನೇಮಕಾತಿಗಳು ಶೀಘ್ರವೇ ನಡೆಯಬೇಕು ಎಂದು ನಾನು ಪದೇ ಪದೆ ಹೇಳುತ್ತಿದ್ದೇನೆ,‘ ಎಂದು ಸೋಲಂಕಿ ತಿಳಿಸಿದರು.

ಅಶೋಕ್‌ ಗೆಹ್ಲೋಟ್‌ ನೇತೃತ್ವದ ರಾಜಸ್ಥಾನ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹತ್ತು ತಿಂಗಳ ಹಿಂದೆ ಬಂಡೆದಿದ್ದ ಸಚಿನ್‌ ಪೈಲಟ್‌ ಅವರನ್ನು ಉಪಮುಖ್ಯಮಂತ್ರಿ ಸ್ಥಾನ ಮತ್ತು ಪಕ್ಷದ ಅಧ್ಯಕ್ಷ ಗಾದಿಯಿಂದ ಕಿತ್ತುಹಾಕಲಾಗಿತ್ತು. ಸಮಸ್ಯೆಗಳನ್ನು ಪರಿಹರಿಸುವುದಾಗಿ ಕಾಂಗ್ರೆಸ್‌ ಹೈಕಮಾಂಡ್‌ ನೀಡಿದ ಭರವಸೆ ಮೇರೆಗೆ ಸಚಿನ್‌ ಪೈಲಟ್‌ ತಣ್ಣಗಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT