ಶುಕ್ರವಾರ, ಅಕ್ಟೋಬರ್ 22, 2021
29 °C
ಕೋವಿಡ್‌ನ 2ನೇ ಅಲೆ ವೇಳೆ ಸಾವು ಹೆಚ್ಚಲು ಕಾರಣ ಆರೋಪ * ಸೋಮವಾರ ವಿಚಾರಣೆ

ವೈದ್ಯಕೀಯ ಆಮ್ಲಜನಕ ಕೊರತೆ: ಉನ್ನತ ಮಟ್ಟದ ತನಿಖೆ ಕೋರಿ ‘ಸುಪ್ರೀಂ’ಗೆ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19ನ ಎರಡನೇ ಅಲೆ ವೇಳೆ ವೈದ್ಯಕೀಯ ಆಮ್ಲಜನಕ ಲಭ್ಯವಿರಲಿಲ್ಲ ಮತ್ತು ಪೂರೈಕೆ ಇರಲಿಲ್ಲ ಎಂಬ ಆರೋಪಗಳ ಕುರಿತು ಆಯೋಗವೊಂದರಿಂದ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಹಾಗೂ ಬಿ.ವಿ.ನಾಗರತ್ನ ಅವರಿರುವ ನ್ಯಾಯಪೀಠವು ಸೋಮವಾರ (ಅ.4) ಈ ಅರ್ಜಿಯ ವಿಚಾರಣೆ ನಡೆಸಲಿದೆ. ದೆಹಲಿ ನಿವಾಸಿಯೊಬ್ಬರ ಪರವಾಗಿ ವಕೀಲ ರಾಜೀವ್‌ ಕುಮಾರ್ ದುಬೆ ಈ ಅರ್ಜಿ ಸಲ್ಲಿಸಿದ್ದಾರೆ.

ಕೋವಿಡ್‌ನ 2ನೇ ಅಲೆಯ ಮಾರ್ಚ್‌ ಹಾಗೂ ಏಪ್ರಿಲ್‌ ಅವಧಿಯಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟು ಜನ ರೋಗಿಗಳ ಸಾವಿಗೆ ಕಾರಣವಾಯಿತು ಎಂದು ಅರ್ಜಿಯಲ್ಲಿ ದೂರಲಾಗಿದೆ.

ಈ ವಿಷಯ ಕುರಿತು ಕೋರ್ಟ್‌ ಮೇಲ್ವಿಚಾರಣೆಯಲ್ಲಿ ಸಿಬಿಐ ಅಥವಾ ಇತರ ಸಂಸ್ಥೆಗಳಿಂದ ತನಿಖೆ ನಡೆಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ನೇತೃತ್ವದ ಆಯೋಗದಿಂದ ಈ ಕುರಿತು ತನಿಖೆ ನಡೆಸುವಂತೆಯೂ ಅರ್ಜಿದಾರರು ಕೋರಿದ್ದಾರೆ.

ಕೇಂದ್ರ ಸರ್ಕಾರ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ವಿವಿಧ ರಾಜ್ಯಗಳ ಆರೋಗ್ಯ ಇಲಾಖೆಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು