ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿ+ಯೋಗಿ = ಉಪಯೋಗಿ: ಉತ್ತರ ಪ್ರದೇಶದ ಸಿಎಂ ಯೋಗಿ ಅವರನ್ನು ಬಣ್ಣಿಸಿದ ಪ್ರಧಾನಿ

Last Updated 18 ಡಿಸೆಂಬರ್ 2021, 15:50 IST
ಅಕ್ಷರ ಗಾತ್ರ

ಲಖನೌ: ಬಿಜೆಪಿಯ ಪ್ರತಿಸ್ಪರ್ಧಿ ಪಕ್ಷಗಳು ದೇಶದ ಪರಂಪರೆಯನ್ನು ವಿರೋಧಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶಿವ, ರಾಮ ಮಂದಿರ ಮತ್ತು ಗಂಗಾ ನದಿಯನ್ನು ಉಲ್ಲೇಖಿಸಿ ಅವರು ಮಾತನಾಡಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಮೇಲೆ ಹೊಗಳಿಕೆಯ ಮಳೆಗರೆದಿದ್ದಾರೆ. ಯೋಗಿ ಅವರು ‘ಉಪಯೋಗಿ’ ಎಂಬುದನ್ನು ಜನರು ಕಂಡುಕೊಂಡಿದ್ದಾರೆ ಎಂದು ಹೇಳಿದ್ದಾರೆ. ‘ಯುಪಿ (ಉತ್ತರ ಪ್ರದೇಶ) +ಯೋಗಿ=ಉಪಯೋಗಿ’ ಎಂದರು.

ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಶಾಜಹಾನ್‌ಪುರದಲ್ಲಿ ಅವರು ಮಾತನಾಡಿದರು. ದೇಶದ ಪರಂಪರೆಯ ಬಗ್ಗೆ ಅಸಮಾಧಾನ ಇರುವ ಜನರು ದೇಶದಲ್ಲಿ ಇದ್ದಾರೆ ಎಂದರು.

‘ಕೆಲವು ಜನರಿಗೆ ಕಾಶಿ ವಿಶ್ವನಾಥ ಧಾಮ, ರಾಮ ಮಂದಿರ, ಗಂಗಾ ನದಿ ಸ್ವಚ್ಛತೆ ಬಗ್ಗೆ ಸಮಸ್ಯೆ ಇದೆ. ಸೇನಾ ಕಾರ್ಯಾಚರಣೆಯ ಬಗ್ಗೆಯೂ ಇವೇ ಜನರು ಪ್ರಶ್ನೆಗಳನ್ನು ಎತ್ತುತ್ತಾರೆ. ಕೊರೊನಾ ಲಸಿಕೆಯ ಬಗ್ಗೆಯೂ ಅವರು ಪ್ರಶ್ನೆ ಕೇಳುತ್ತಾರೆ’ ಎಂದು ಮೋದಿ ಅವರು ಪ್ರತಿಸ್ಪರ್ಧಿ ಪಕ್ಷಗಳ ನಾಯಕರನ್ನು ಪರೋಕ್ಷವಾಗಿ ಉಲ್ಲೇಖಿಸಿ ಹೇಳಿದ್ದಾರೆ.

ಉತ್ತರ ಪ್ರದೇಶದ ಜನರ ಅಭಿವೃದ್ಧಿಗಾಗಿ ಯೋಗಿ ನೇತೃತ್ವದ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಕಳೆದ ಕೆಲ ವರ್ಷಗಳಲ್ಲಿ ರಾಜ್ಯವು ಅಭಿವೃದ್ಧಿಗೆ ಸಾಕ್ಷಿಯಾಗಿದೆ. ಮಾಫಿಯಾಗಳನ್ನು ದಮನ ಮಾಡಲಾಗಿದೆ. ಗ್ರಾಮಗಳಿಂದ ವಲಸೆ ನಿಂತಿದೆ. ಮಹಿಳೆಯರಲ್ಲಿ ಸುರಕ್ಷಿತ ಭಾವ ಈಗ ಇದೆ ಎಂದು ಮೋದಿ ಪ್ರತಿಪಾದಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ಗಲ್ಲಿಗೇರಿಸಿದ ರಾಮ್‌ ಪ್ರಸಾದ್ ಬಿಸ್ಮಿಲ್‌, ಅಷ್ಫಕ್‌ಉಲ್ಲಾ ಖಾನ್‌ ಮತ್ತು ರೋಶನ್‌ ಸಿಂಗ್‌ ಅವರನ್ನು ಮೋದಿ ಸ್ಮರಿಸಿದರು. ಈ ಮೂವರು ಶಾಜಹಾನ್‌ಪುರದವರು. ದೇಶ ಸೇವೆಯೇ ಈ ಮಹಾನ್‌ ಹೋರಾಟಗಾರರಿಗೆ ನೀಡುವ ನಿಜವಾದ ಗೌರವ ಎಂದರು.

ಬಾಬಾ ವಿಶ್ವನಾಥ, ಗಂಗಾ ಮತ್ತು ಪರಶುರಾಮ ಹೆಸರುಗಳನ್ನು ಉಲ್ಲೇಖಿಸಿ ಮೋದಿ ಭಾಷಣ ಆರಂಭಿಸಿದರು.

ಗಂಗಾ ಎಕ್ಸ್‌ಪ್ರೆಸ್‌ವೇ ಯೋಜನೆಯು ಪ್ರಯಾಗರಾಜ್‌ ಅನ್ನು ಮೀರಠ್‌ ಜತೆಗೆ ಜೋಡಿಸುತ್ತದೆ. ಇದು 12 ಜಿಲ್ಲೆಗಳಲ್ಲಿ ಹಾದು ಹೋಗುತ್ತದೆ. ಯೋಜನೆಯ ಒಟ್ಟು ವೆಚ್ಚವು ₹36 ಸಾವಿರ ಕೋಟಿಗೂ ಹೆಚ್ಚು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT