ನವದೆಹಲಿ: ಇಂಡೊನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ಆಹಾರ ಮತ್ತು ಇಂಧನ ಭದ್ರತೆ, ಡಿಜಿಟಲ್ ರೂಪಾಂತರ ಮತ್ತು ಆರೋಗ್ಯ ವಿಷಯಗಳ ಕುರಿತ ಚರ್ಚೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವರು ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಭಾನುವಾರ ತಿಳಿಸಿದ್ದಾರೆ.
ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಅವರು ಸೋಮವಾರ ಬಾಲಿಗೆ ತೆರಳಲಿದ್ದಾರೆ ಎಂದೂ ಹೇಳಿದ್ದಾರೆ.
ಶೃಂಗಸಭೆಯಲ್ಲಿ ಉಕ್ರೇನ್ ಯುದ್ಧ ಮತ್ತು ಅದರ ಪರಿಣಾಮಗಳು ಸೇರಿದಂತೆ ಜಾಗತಿಕ ಮಟ್ಟದ ವಿವಿಧ ಸವಾಲುಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.
ಜಾಗತಿಕ ಆರ್ಥಿಕತೆ, ಇಂಧನ, ಪರಿಸರ ಮೊದಲಾದ ವಿಚಾರಗಳ ಬಗ್ಗೆ ಮೋದಿ ಅವರು ಇತರ ನಾಯಕರ ಜೊತೆ ಮಾತುಕತೆ ನಡೆಸುವರು ಎಂದೂ ವಿವರಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್, ಜರ್ಮನಿಯ ಚಾನ್ಸೆಲರ್ ಒಲಾಫ್ ಸ್ಕಾಲ್ಜ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಪಾಲ್ಗೊಳ್ಳುವರು.
ಇಂಡೊನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ ಅವರ ಆಹ್ವಾನದ ಮೇರೆಗೆ ಮೋದಿ ಅವರು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದು, ಬಾಲಿಯಲ್ಲಿ 45 ಗಂಟೆಗಳ ವಾಸ್ತವ್ಯದ ಅವಧಿಯಲ್ಲಿ ಅವರು 20 ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ.
ಭಾರತವು ಡಿಸೆಂಬರ್ 1 ರಿಂದ ಔಪಚಾರಿಕವಾಗಿ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.