ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆ. 24ರಂದು ಮೋದಿ–ಬೈಡನ್‌ ಮುಖಾಮುಖಿ

ಕ್ವಾಡ್‌ ರಾಷ್ಟ್ರಗಳ ಸಭೆಯಲ್ಲೂ ಪ್ರಧಾನಿ ಭಾಗಿ | ಭದ್ರತೆ, ವಾಣಿಜ್ಯ ಸೇರಿ ವಿವಿಧ ವಿಷಯಗಳ ಚರ್ಚೆ ಸಂಭವ
Last Updated 21 ಸೆಪ್ಟೆಂಬರ್ 2021, 14:12 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಸೆ. 24ರಂದು ವಾಷಿಂಗ್ಟನ್‌ನಲ್ಲಿ ಮುಖಾಮುಖಿಯಾಗಲಿದ್ದು, ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯವೃದ್ಧಿ ಕುರಿತು ಚರ್ಚಿಸಲಿದ್ದಾರೆ.

ವಾಣಿಜ್ಯ ವಹಿವಾಟು, ಬಂಡವಾಳ ಹೂಡಿಕೆ, ರಕ್ಷಣಾ ಕ್ಷೇತ್ರ ಮತ್ತು ಭದ್ರತೆ ಕುರಿತ ವಿಷಯಗಳೂ ಭೇಟಿ ಸಂದರ್ಭದಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವರ್ಧನ್‌ ಶ್ರೀಂಗ್ಲಾ ಮಂಗಳವಾರ ತಿಳಿಸಿದರು.

ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸಕ್ಕಾಗಿ ಬುಧವಾರ ತೆರಳಲಿದ್ದು, ಭಾನುವಾರ ವಾಪಸಾಗುವರು. ಪ್ರಧಾನಿ ನೇತೃತ್ವದ ಈ ನಿಯೋಗದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋಭಾಲ್‌, ವಿದೇಶಾಂಗ ಕಾರ್ಯದರ್ಶಿ ಶ್ರೀಂಗ್ಲಾ ಅವರೂ ಇರುವರು.

ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಶ್ರೀಂಗ್ಲಾ ಅವರು, ಪ್ರಾದೇಶಿಕ ಮಟ್ಟದ ಬೆಳವಣಿಗೆಗಳ ಜೊತೆಗೆ ಅಫ್ಗಾನಿಸ್ತಾನ ಬೆಳವಣಿಗೆ, ಉಗ್ರ ಚಟುವಟಿಕೆಗಳ ನಿಗ್ರಹ ಕ್ರಮಗಳನ್ನು ಉಭಯ ನಾಯಕರು ಚರ್ಚಿಸುವ ಸಂಭವವಿದೆ.

ಅಮೆರಿಕ, ಆಸ್ಟ್ರೇಲಿಯಾ ಮತ್ತು ಬ್ರಿಟನ್‌ ನಡುವಣ ಇತ್ತೀಚಿಗೆ ನಡೆದ ಭದ್ರತಾ ಪಾಲುದಾರಿಕೆ ಕ್ವಾಡ್‌ ರಾಷ್ಟ್ರಗಳ ಶೃಂಗಸಭೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ, ಎರಡೂ ಸಮೂಹದ ಕಾರ್ಯಶೈಲಿ ಭಿನ್ನವಾದುದು ಎಂದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರನ್ನೂ ಭೇಟಿಯಾಗುವರು. ಅಲ್ಲದೆ, 24ರಂದು ನಡೆಯುವ ಕ್ವಾಡ್‌ ರಾಷ್ಟ್ರಗಳ ಸಭೆಯಲ್ಲಿಯೂ ಪ್ರಧಾನಿ ಭಾಗಿಯಾಗುವರು.

ಇದರ ಹೊರತಾಗಿ ಮೋದಿ ಅವರು ವಾಷಿಂಗ್ಟನ್‌ನಲ್ಲಿ ಅಮೆರಿಕದ ವಿವಿಧ ಪ್ರಮುಖ ಕಂಪನಿಗಳ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸುವ ಕಾರ್ಯಕ್ರಮವಿದೆ.

ಮೋದಿ ಅವರು ಈ ಹಿಂದೆ ಅಮೆರಿಕಕ್ಕೆ ಸೆಪ್ಟೆಂಬರ್ 2019ರಲ್ಲಿ ಭೇಟಿ ನೀಡಿದ್ದರು. ಆಗ ಡೊನಾಲ್ಡ್‌ ಟ್ರಂಪ್‌ ಅಧ್ಯಕ್ಷರಾಗಿದ್ದು, ಅವರೊಂದಿಗೆ ಹೂಸ್ಟನ್‌ನಲ್ಲಿ ನಡೆದಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT