ಮಂಗಳವಾರ, ಡಿಸೆಂಬರ್ 7, 2021
22 °C

ದೇಶದ ತುಂಬಾ ಕುಟುಂಬ ರಾಜಕಾರಣದ ಸಮಸ್ಯೆ: ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಮೋದಿ

ಡೆಕ್ಕನ್ ಹೆರಾಲ್ಡ್ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಹರಡಿರುವ ಕುಟುಂಬದ ಪ್ರಾಬಲ್ಯವುಳ್ಳ ರಾಜಕೀಯ ಪಕ್ಷಗಳ ಬಗ್ಗೆ ಸಂವಿಧಾನಕ್ಕೆ ಬದ್ಧರಾಗಿರುವ ಜನರು ಪ್ರಮುಖವಾಗಿ ಚಿಂತನೆ ನಡೆಸಬೇಕಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಅವರು, ‘ರಾಜಕೀಯ ಪಕ್ಷಗಳು ಪ್ರಜಾಸತ್ತಾತ್ಮಕವಾದ ಲಕ್ಷಣವನ್ನು ಕಳೆದುಕೊಂಡರೆ ಸಂವಿಧಾನದ ಧ್ಯೇಯ ಮತ್ತು ಉದ್ದೇಶಕ್ಕೇ ಧಕ್ಕೆಯಾಗಲಿದೆ’ ಎಂದು ಹೇಳಿದರು.

ಸಂಸತ್ತಿನ ಸೆಂಟ್ರಲ್‌ಹಾಲ್‌ನಲ್ಲಿ ನಡೆದ ‘ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪ್ರಜಾಸತ್ತಾತ್ಮಕವಾದ ಲಕ್ಷಣವನ್ನೇ ಕಳೆದುಕೊಂಡ ಪಕ್ಷಗಳು ಹೇಗೆ ತಾನೇ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಸಾಧ್ಯ’ ಎಂದು ಪ್ರಶ್ನಿಸಿದರು.

14 ವಿರೋಧ ಪಕ್ಷಗಳು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು. ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಮತ್ತು ಸಂಸದರು ಹಾಜರಿದ್ದರು.

‘ಕುಟುಂಬದ ಮತ್ತೊಬ್ಬ ಸದಸ್ಯ ಸೇರಿದಾಕ್ಷಣ ಒಂದು ರಾಜಕೀಯ ಪಕ್ಷ ಕುಟುಂಬ ಆಧಾರಿತವಾಗುವುದಿಲ್ಲ. ಆದರೆ, ಒಂದೇ ಕುಟುಂಬವು ನಿರ್ದಿಷ್ಟವಾಗಿ ಪಕ್ಷವನ್ನು ಮುನ್ನಡೆಸಿದಾಗ ಸಮಸ್ಯೆಗಳು ಶುರುವಾಗುತ್ತವೆ’ ಎಂದು ಮೋದಿ ವ್ಯಾಖ್ಯಾನಿಸಿದರು.

‘ಜನರು ಕೇವಲ ಸಂವಿಧಾನದ ಹಕ್ಕುಗಳ ಬಗ್ಗೆಯಷ್ಟೇ ಮಾತನಾಡಬಾರದು. ಸಾಂವಿಧಾನಿಕ ಜವಾಬ್ದಾರಿಯನ್ನೂ ನಿರ್ವಹಿಸಬೇಕು. ಸ್ವಾತಂತ್ರ್ಯ ಹೋರಾಟದ ವೇಳೆ ಜನರ ಜವಾಬ್ದಾರಿ ಕುರಿತು ಅರಿವು ಮೂಡಿಸಲು ಮಹಾತ್ಮಗಾಂಧಿ ಯತ್ನಿಸಿದ್ದರು. ಗಾಂಧೀಜಿ ಬಿತ್ತಿದ್ದ ಈ ಬೀಜಗಳು ಸ್ವಾತಂತ್ಯದ ನಂತರ ಹೆಮ್ಮರವಾಗಿ ಬೆಳೆಯಬೇಕಾಗಿತ್ತು. ದುರದೃಷ್ಟವಶಾತ್‌ ಹಾಗಾಗಲಿಲ್ಲ. ನಮ್ಮ ಹಕ್ಕುಗಳನ್ನು ಸರ್ಕಾರ ಮಾತ್ರವೇ ಈಡೇರಿಸಬಲ್ಲದು ಎಂದು ಜನರೂ ಭಾವಿಸತೊಡಗಿದರು’ ಎಂದು ಹೇಳಿದರು.

14 ವಿರೋಧ ಪಕ್ಷಗಳಿಂದ ಬಹಿಷ್ಕಾರ

ನವದೆಹಲಿ: ಲೋಕಸಭೆಯು ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಆಯೋಜಿಸಿದ್ದ ಸಂವಿಧಾನ ದಿನ ಕಾರ್ಯಕ್ರಮವನ್ನು ಶುಕ್ರವಾರ ಕಾಂಗ್ರೆಸ್ ಪಕ್ಷ ಸೇರಿದಂತೆ 14 ವಿರೋಧ ಪಕ್ಷಗಳು ಬಹಿಷ್ಕರಿಸಿದವು.

ಸಮಾಜವಾದಿ ಪಕ್ಷ, ಆಮ್‌ ಅದ್ಮಿ ಪಕ್ಷ, ಸಿಪಿಐ, ಸಿಪಿಎಂ, ಡಿಎಂಕೆ, ಶಿರೋಮಣಿ ಅಕಾಲಿ ದಳ, ಶಿವಸೇನೆ, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಜನತಾದಳ, ಆರ್‌ಎಸ್‌ಪಿ, ಇಂಡಿಯನ್ ಯೂನಿಯನ್‌ ಮುಸ್ಲಿಂ ಲೀಗ್‌ ಮತ್ತಿತರ ಪಕ್ಷಗಳು ಬಹಿಷ್ಕರಿಸಿದ್ದವು.

‘ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದ, ರಾಜಕೀಯಯೇತರ ಕಾರ್ಯಕ್ರಮಗಳನ್ನು ಬಹಿಷ್ಕರಿಸುವ ಪರಿಪಾಠ ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ’ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು.

ಸಂವಿಧಾನದ ಅಗೌರವ ಖಂಡಿಸಿ ಗೈರು–ಕಾಂಗ್ರೆಸ್‌

ನವದೆಹಲಿ: ಸಂವಿಧಾನವನ್ನು ಗೌರವಿಸಲಾಗುತ್ತಿಲ್ಲ, ಕಡೆಗಣಿಸಲಾಗುತ್ತದೆ ಎಂಬುದನ್ನು ದೇಶದ ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದಲೇ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಸಂವಿಧಾನ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

ಪಕ್ಷದ ವಕ್ತಾರ ಆನಂದ ಶರ್ಮಾ, ‘ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಯುತವಾಗಿ ಆಡಳಿತ ನಡೆಸುತ್ತಿದೆ. ಸಂಸದೀಯ ವ್ಯವಸ್ಥೆಗೆ ಅಪಮಾನಿಸಿ, ಸಂಸತ್ತನ್ನು ಉಲ್ಲಂಘಿಸಿ ಕಾಯ್ದೆ ರೂಪಿಸಲಾಗುತ್ತಿದೆ. ಇದನ್ನು ಪ್ರತಿಭಟಿಸುವುದು ಉದ್ದೇಶವಾಗಿತ್ತು’ ಎಂದರು.  

ನಮ್ಮ ಪ್ರತಿಭಟನೆಯು ಮೂಲ ನೀತಿಯನ್ನು ಆಧರಿಸಿದ್ದಾಗಿತ್ತು. ಜನರಿಗೆ ಇದನ್ನು ಮನವರಿಕೆ ಮಾಡಿಕೊಡಬೇಕಿತ್ತು. ಕಾಯ್ದೆ ಸಮೂಹದ ಮೇಲೆ ಪರಿಣಾಮ ಬೀರಲಿದೆ. ಆದರೆ, ಸಂಸದೀಯ ನಿಯಮ ಪಾಲಿಸದೇ ಕಾಯ್ದೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಭಿನ್ನಾಭಿಪ್ರಾಯ ಅಡ್ಡಿಯಾಗದಿರಲಿ–ರಾಷ್ಟ್ರಪತಿ

ನವದೆಹಲಿ: ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಪ್ರಮುಖ ಭಾಗ. ಆಡಳಿತ, ವಿರೋಧ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಇರಬಹುದು. ಅದರಿಂದ ಸಾರ್ವಜನಿಕ ಸೇವೆಯ ನಿಜ ಉದ್ದೇಶಕ್ಕೆ ಅಡ್ಡಿಯಾಗಬಾರದು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದರು

‘ಸಂವಿಧಾನ ದಿನ’ ಕಾರ್ಯಕ್ರಮದಲ್ಲಿ ಅವರು, ಪರಿಣಾಮಕಾರಿ ವಿರೋಧಪಕ್ಷ ಇಲ್ಲದಿದ್ದರೆ ಪ್ರಜಾಪ್ರಭುತ್ವವು ಪರಿಣಾಮಕಾರಿ ಆಗದು. ಭಿನ್ನಮತದ ನಡುವೆಯೂ ಆಡಳಿತ, ವಿರೋಧ ಪಕ್ಷಗಳು ಜನರ ಹಿತದೃಷ್ಟಿಯಿಂದ ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು.

ಯಾವುದೇ ಪಕ್ಷದವರಿರಲಿ, ಎಲ್ಲ ಸಂಸದರು ಸಂಸತ್ತಿನ ಘನತೆಯನ್ನು ಕಾಪಾಡಬೇಕು. ತಮ್ಮ ಜವಾಬ್ದಾರಿಯನ್ನು ಅರಿಯಬೇಕು ಹಾಗೂ ಸಂವಿಧಾನವನ್ನು ಬಲಪಡಿಸುವ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಸಲಹೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು