ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಶ್ರೀರಾಮ್ ಘೋಷಣೆಗೆ ಮೋದಿ ಮೌನ ಸರಿಯಲ್ಲ: ಟಿಎಂಸಿ

Last Updated 24 ಜನವರಿ 2021, 12:27 IST
ಅಕ್ಷರ ಗಾತ್ರ

ಕೋಲ್ಕತ್ತ: ‘ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾಷಣದ ವೇಳೆ ಜನಸಮೂಹದ ಒಂದು ಭಾಗ ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದಾಗ ಪ್ರಧಾನಿ ನರೇಂದ್ರ ಮೋದಿ ಅವರು ಮೌನ ವಹಿಸಿದ್ದು ವಿಷಾದದ ಸಂಗತಿ’ ಎಂದು ತೃಣಮೂಲ ಕಾಂಗ್ರೆಸ್ ಭಾನುವಾರ ಹೇಳಿದೆ.

‘ಈ ಘಟನೆಯು ಕೆಲ ಜನರ ದ್ವೇಷಪೂರಿತ ಮನಸ್ಥಿತಿಯನ್ನು ಬಿಂಬಿಸುತ್ತದೆ’ ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಸಚಿವ ಬ್ರಾತ್ಯಾ ಬಸು ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.

‌‘ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಉಪಸ್ಥಿತರಿದ್ದ ಪ್ರಧಾನಿ ಮೋದಿ ಅವರು ಘೋಷಣೆ ಕೂಗುತ್ತಿದ್ದವರ ಜನರ ನಡವಳಿಕೆ ಕುರಿತು ಖಂಡಿಸಿ ಒಂದೂ ಮಾತನ್ನಾಡಲಿಲ್ಲ. ಇದು ಬಿಜೆಪಿಗೆ ನೇತಾಜಿ ಅವರ ಬಗ್ಗೆ ಗೌರವವಿಲ್ಲ ಎಂಬುದನ್ನು ಸೂಚಿಸುತ್ತದೆ’ ಎಂದು ಅವರು ಆರೋಪಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಕಪ್ಪು ಫ್ಯಾಸಿಸ್ಟ್ ಶಕ್ತಿ ಅಧಿಕಾರವನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಒಂದು ವೇಳೆ ಅದು ಬಂಗಾಳವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯಕಾರಿ ಸ್ಥಿತಿಯೊದಗುತ್ತದೆ. ಹಾಗಾಗಿ, ಬಂಗಾಳದಲ್ಲಿ ಫ್ಯಾಸಿಸ್ಟ್ ಶಕ್ತಿಗೆ ಅವಕಾಶ ಮಾಡಿಕೊಡಬೇಡಿ. ವಿಭಿನ್ನ ಸಿದ್ಧಾಂತಗಳ ಜನರು ಬಂಗಾಳದಲ್ಲಿ ಮುಕ್ತವಾಗಿ ತಮ್ಮ ಅಭಿವ್ಯಕ್ತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅದನ್ನು ಕೊನೆಗಾಣಿಸಲು ಅವಕಾಶ ನೀಡಬೇಡಿ’ ಎಂದೂ ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಂಗಾಳದ ಜನಪ್ರಿಯ ನಟಿ ಕೌಶಾನಿ ಮುಖೋಪಾಧ್ಯಾಯ್, ಈಸ್ಟರ್ನ್ ಇಂಡಿಯಾ ಮೋಷನ್ ಪಿಕ್ಚರ್ಸ್ ಅಸೋಸಿಯೇಶನ್‌ನ ಅಧ್ಯಕ್ಷೆ ಪಿಯಾ ಸೇನ್ ಗುಪ್ತಾ ಟಿಎಂಸಿಗೆ ಸೇರ್ಪಡೆಯಾದರು. ಎರಡು ದಿನಗಳ ಹಿಂದೆಯಷ್ಟೆ ಜನಪ್ರಿಯ ನಟ ಸೌರವ್ ದಾಸ್ ಕೂಡಾ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.

ಮಮತಾ ಬ್ಯಾನರ್ಜಿ ಅವರಿಗೆ ಇತ್ತೀಚಿನವರೆಗೆ ಆಪ್ತರಾಗಿದ್ದ ನಟ ರುದ್ರಾನಿಲ್ ಘೋಷ್, ಬಿಜೆಪಿ ನಾಯಕರೊಂದಿಗೆ ಸಕ್ರಿಯವಾಗಿದ್ದು, ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಟಿಎಂಸಿಯ ವಕ್ತಾರ ಕುನಾಲ್ ಘೋಷ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

‘ಮಮತಾ ಡಿಎನ್‌ಎ ದೋಷಪೂರಿತ, ಅವರದ್ದು ರಾಕ್ಷಸ ಸಂಸ್ಕೃತಿ’

ಬಲ್ಲಿಯಾ (ಪಿಟಿಐ): ‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಡಿಎನ್‌ಎ ದೋಷಪೂರಿತವಾಗಿದ್ದು, ಅವರು ರಾಕ್ಷಸ ಸಂಸ್ಕೃತಿಯ ಹಿನ್ನೆಲೆಯಿಂದ ಬಂದವರು’ ಎಂದು ಉತ್ತರ ಪ್ರದೇಶದ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.

‘ಜೈಶ್ರೀರಾಮ್’ ಘೋಷಣೆಗೆ ಮಮತಾ ವಿರೋಧ ವ್ಯಕ್ತಪಡಿಸಿದ್ದನ್ನು ಉಲ್ಲೇಖಿಸಿದ ಅವರು, ಯಾವುದೇ ರಾಕ್ಷಸ ಭಗವಾನ್ ರಾಮನನ್ನು ಪ್ರೀತಿಸಲು ಸಾಧ್ಯವಿಲ್ಲ. ಮಮತಾ ಅಪ್ರಮಾಣಿಕ ಮತ್ತು ದುಷ್ಟ ವ್ಯಕ್ತಿ. ಹಾಗಾಗಿ, ರಾಮನ ಬಗ್ಗೆ ಅವರ ಸಿಟ್ಟು ಸಹಜವಾದದ್ದೇ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

‘ಮಮತಾ ಅವರ ಈ ನಡೆ ಪಶ್ಚಿಮ ಬಂಗಾಳದಲ್ಲಿ ಅವರ ಪಕ್ಷ ಹಾಗೂ ಅವರ ಪಕ್ಷದ ಕಾರ್ಯಕರ್ತರು ನಡೆಸುತ್ತಿರುವ ಹಿಂಸಾಚಾರ ಕೃತ್ಯಕ್ಕೆ ಪುರಾವೆ ನೀಡುವಂತಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT