ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯೋತ್ಸವ: 7ನೇ ಬಾರಿಗೆ ಭಾಷಣ ಮಾಡಲಿರುವ ಮೋದಿ

ದೆಹಲಿಯ ಕೆಂಪುಕೋಟೆಯಲ್ಲಿ 74ನೇ ಸ್ವಾತಂತ್ರೋತ್ಸವ ದಿನಾಚರಣೆ
Last Updated 14 ಆಗಸ್ಟ್ 2020, 22:44 IST
ಅಕ್ಷರ ಗಾತ್ರ
ADVERTISEMENT
""

ನವದೆಹಲಿ: ಇಲ್ಲಿನ ಕೆಂಪು ಕೋಟೆಯಲ್ಲಿ ಶನಿವಾರ ನಡೆಯಲಿರುವ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ 7ನೇ ಬಾರಿ ಸ್ವಾತಂತ್ರ್ಯೋತ್ಸವ ದಿನದ ಭಾಷಣ ಮಾಡಲಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ನಡುವೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಮೋದಿ, ಭಾರತ–ಚೀನಾ ಗಡಿ ಸಂಘರ್ಷ ಮತ್ತು ಆತ್ಮನಿರ್ಭರ್ ಭಾರತದ ಕುರಿತು ಮಾತನಾಡುವ ನಿರೀಕ್ಷೆ ಇದೆ. ಪ್ರತಿ ಬಾರಿಯೂ ಆ. 15ರ ಭಾಷಣದಲ್ಲಿ ಮೋದಿ ಅವರು, ಹೊಸ ದೊಡ್ಡ ಯೋಜನೆ, ಸರ್ಕಾರದ ಸಾಧನೆಯ ವಿವರಗಳನ್ನು ನೀಡುವುದರಿಂದ ಈ ಬಾರಿ ಕೋವಿಡ್‌ ಬಿಕ್ಕಟ್ಟಿನ ನಡುವೆ ದೇಶ ಎದುರಿಸುತ್ತಿರುವ ಸಮಸ್ಯೆ–ಸವಾಲುಗಳ ಬಗ್ಗೆ ಮೋದಿ ಏನು ಹೇಳಲಿದ್ದಾರೆ ಎನ್ನುವುದು ಬಹುತೇಕರ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಮೋದಿ ಅವರು, ತ್ರಿವಳಿ ತಲಾಖ್ ವಿರುದ್ಧ ಕಾನೂನು ತರುವ ಕುರಿತು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಸರ್ಕಾರದ ಕ್ರಮವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದ್ದರು. ಅಷ್ಟೇ ಅಲ್ಲ ಜನಸಂಖ್ಯಾ ನಿಯಂತ್ರಣ ಸೇರಿದಂತೆ ದೇಶವು ಸದೃಢ ಆರ್ಥಿಕತೆಯನ್ನು ಸಾಧಿಸುವ ಗುರಿಯನ್ನು ಹೊಂದಬೇಕೆಂದು ಪ್ರತಿಪಾದಿಸಿದ್ದರು.

ಈ ಹಿಂದೆ ಮೋದಿ ಅವರು ಸರ್ಕಾರದ ನೀತಿ ಮತ್ತು ಯೋಜನೆಗಳಾದ ಜನಧನ್ ಹಾಗೂ ಸ್ಟಾರ್ಟ್ ಅಪ್ ಇಂಡಿಯಾಕ್ಕೆ ಸಂಬಂಧಿಸಿದಂತೆ ಕೆಲ ಘೋಷಣೆಗಳನ್ನು ಪ್ರಕಟಿಸಲು ಸ್ವಾತಂತ್ರ್ಯ ದಿನವನ್ನೇ ಆರಿಸಿಕೊಂಡಿದ್ದರು.

ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾಗಿರುವ ಮೋದಿ ನೇತೃತ್ವದ ಸರ್ಕಾರವು ಇದೀಗ ಎರಡು ವರ್ಷಕ್ಕೆ ಕಾಲಿಟ್ಟಿದೆ. ಆ. 5ರಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮಮಂದಿರದ ಭೂಮಿಪೂಜೆಯಲ್ಲಿ ಮೋದಿ ಪಾಲ್ಗೊಂಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಪ್ರಧಾನಿ ಸ್ವಾತಂತ್ರ್ಯೋತ್ಸವ ದಿನದ ಭಾಷಣ ಮಾಡುತ್ತಿದ್ದಾರೆ. ಆತ್ಮನಿರ್ಭರ್ ಭಾರತದ ಗುರಿಗಳನ್ನು ಸಾಕಾರಗೊಳಿಸಲು ಈಗಾಗಲೇ ಕೃಷಿ, ರಕ್ಷಣಾ ವಲಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಸರ್ಕಾರ ತನ್ನ ಕ್ರಮಗಳನ್ನು ಘೋಷಿಸಿದ್ದು, ಹೆಚ್ಚಿನ ಸುಧಾರಣಾ ಕ್ರಮಗಳ ನಿರೀಕ್ಷೆ ಇದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಿದ್ಧತೆ ನಿಮಿತ್ತ ನವದೆಹಲಿಯ ಕೆಂಪುಕೋಟೆಯಲ್ಲಿ ದೆಹಲಿ ಪೊಲೀಸರು ತಾಲೀಮು ನಡೆಸಿದರು –ಪಿಟಿಐ ಚಿತ್ರ

4 ಸಾವಿರಕ್ಕೂ ಹೆಚ್ಚು ಜನರಿಗೆ ಆಹ್ವಾನ
ನವದೆಹಲಿ: ಕೆಂಪು ಕೋಟೆಯಲ್ಲಿ ಶನಿವಾರ (ಆ.15) ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಮಾಧ್ಯಮ ಸಿಬ್ಬಂದಿ ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ.

‘ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಚಿಕ್ಕ ಮಕ್ಕಳ ಬದಲು ಎನ್‌ಸಿಸಿ ಕೆಡೆಟ್ಸ್‌ಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಚಿಕ್ಕಮಕ್ಕಳಿಗೆ ‘ಜ್ಞಾನಪಥ’ದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಸಚಿವಾಲಯವು ಮಾಹಿತಿ ನೀಡಿದೆ.

‘ಕೋವಿಡ್‌–19 ಕಾರಣಕ್ಕಾಗಿ ಪ್ರತಿ ಎರಡು ಆಸನಗಳ ಮಧ್ಯೆ ಕನಿಷ್ಠ ಎರಡು ಗಜದ ಅಂತರವನ್ನು ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ. ಆಹ್ವಾನಿತರೆಲ್ಲರೂಕಡ್ಡಾಯವಾಗಿ ಮುಖಗವಸುಗಳನ್ನು (ಮಾಸ್ಕ್‌) ಧರಿಸಬೇಕೆಂದು ಕೋರಲಾಗಿದೆ. ವಿತರಣೆಗೆ ಅನುಕೂಲವಾಗುವಂತೆ ವಿವಿಧ ಸ್ಥಳಗಳಲ್ಲಿ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳನ್ನು ಇರಿಸಲಾಗಿದೆ. ಇವುಗಳ ಬಗ್ಗೆ ಆಹ್ವಾನಿತರ ಗಮನ ಸೆಳೆಯಲು ಅಲ್ಲಲ್ಲಿ ಸೂಚನಾ ಫಲಕಗಳನ್ನೂ ಅಳವಡಿಸಲಾಗಿದೆ’ ಎಂದು ಸಚಿವಾಲಯವು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT