ಭಾನುವಾರ, ಆಗಸ್ಟ್ 14, 2022
25 °C

ನಿತೀಶ್‌ ವಿರುದ್ಧ ದೂರು: ಐಎಎಸ್‌ ಅಧಿಕಾರಿಯನ್ನು 4 ಗಂಟೆ ಕಾಯಿಸಿದ ಪೊಲೀಸರು!

ಪಿಟಿಐ Updated:

ಅಕ್ಷರ ಗಾತ್ರ : | |

DH Photo

ಪಟನಾ: ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸೇರಿದಂತೆ ರಾಜ್ಯದ ಉನ್ನತ ಅಧಿಕಾರಿಗಳ ವಿರುದ್ಧ ಐಎಎಸ್‌ ಅಧಿಕಾರಿಯೊಬ್ಬರು ಪೊಲೀಸರಿಗೆ ಲಿಖಿತ ದೂರು ನೀಡಿದ ಘಟನೆ ನಡೆದಿದೆ.

1987ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಸುಧೀರ್‌ ಕುಮಾರ್‌ ಅವರು ಶನಿವಾರ ಸಿಎಂ ಸೇರಿದಂತೆ ಕೆಲವು ಉನ್ನತ ಅಧಿಕಾರಿಗಳ ವಿರುದ್ಧ ಗರ್ದಾನಿಬಾಗ್‌ ಪೊಲೀಸ್‌ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ. ಆದರೆ ದೂರು ಸ್ವೀಕರಿಸಲು ಸುಮಾರು 4 ಗಂಟೆ ಕಾಯಿಸಿದ್ದಾಗಿ ಸುಧೀರ್‌ ಕುಮಾರ್‌ ದೂರಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಿರುವ ಯಾರ ಹೆಸರನ್ನು ಬಹಿರಂಗ ಪಡಿಸದ ಸುಧೀರ್‌ ಕುಮಾರ್‌, ನಕಲಿ ರುಜು ಪ್ರಕರಣಕ್ಕೆ ಸಂಬಂಧಿಸಿ ಭಾಗಿಯಾಗಿರುವ ಎಲ್ಲರ ಹೆಸರನ್ನು ದೂರಿನಲ್ಲಿ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಮುಖ್ಯಮಂತ್ರಿಯ ಹೆಸರಿದೆಯೇ? ಎಂದು ನಿರಂತರವಾಗಿ ಪ್ರಶ್ನಿಸಿದ ಸುದ್ದಿಗಾರರಿಗೆ 'ಹೌದು' ಎಂದು ಉತ್ತರಿಸಿದ್ದಾರೆ.

ಪಟನಾದ ಮಾಜಿ ಎಸ್‌ಎಸ್‌ಪಿ, ಐಪಿಎಸ್‌ ಅಧಿಕಾರಿ ಮನು ಮಹಾರಾಜ್‌ ಅವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಸುಧೀರ್‌ ತಿಳಿಸಿದ್ದಾರೆ. ಡಿಐಜಿ ಸ್ಥಾನಕ್ಕೆ ಬಡ್ತಿ ಪಡೆದಿರುವ ಮನು ಮಹಾರಾಜ್‌ ಪ್ರಸ್ತುತ ಬೇರೆ ಕಡೆ ಕಾರ್ಯ ನಿರ್ವಹಿಸುತ್ತಾರೆ.

'ಉದ್ಯೋಗ ಭರ್ತಿ ಹಗರಣ'ದಲ್ಲಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಸುಧೀರ್‌ ಕುಮಾರ್‌ ಅವರಿಗೆ ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ ಜಾಮೀನು ನೀಡಿತ್ತು. ಇನ್ನೊಂದು ವರ್ಷದಲ್ಲಿ ಸುಧೀರ್‌ ಕುಮಾರ್‌ ನಿವೃತ್ತರಾಗಲಿದ್ದಾರೆ.

'ಐಎಎಸ್‌ ಅಧಿಕಾರಿಯೊಬ್ಬರನ್ನು 4 ಗಂಟೆ ಕಾಯಿಸಿರುವುದು ಬಿಹಾರದಲ್ಲಿ ಕಾನೂನು ಎಷ್ಟೊಂದು ಹದಗೆಟ್ಟಿದೆ ಎಂಬುದಕ್ಕೆ ಉದಾಹರಣೆಯಾಗಿದೆ. ಲಿಖಿತ ದೂರು ನೀಡಿದರು ಎಫ್‌ಐಆರ್‌ ದಾಖಲಿಸಿಕೊಂಡಿಲ್ಲ. ನಾನು ಕೇವಲ ದೂರು ಪತ್ರವನ್ನು ಪೊಲೀಸರಿಗೆ ಹಸ್ತಾಂತರಿಸಿದಂತಾಗಿದೆ ಅಷ್ಟೇ. ಮಾರ್ಚ್‌ ತಿಂಗಳಲ್ಲಿ ಶಾಸ್ತ್ರಿ ನಗರ ಪೊಲೀಸ್‌ ಠಾಣೆಗೆ ಭೇಟಿ ನೀಡಿದಾಗಲೂ ಹೀಗೆಯೇ ಆಯಿತು' ಎಂದು ಸುಧೀರ್‌ ಕುಮಾರ್‌ ಹೇಳಿದ್ದಾರೆ.

'ದೂರು ಸ್ವೀಕರಿಸಲಾಗಿದೆ. ಎಲ್ಲ ರೀತಿಯ ಅಗತ್ಯ ಕಾನೂನು ಕ್ರಮಗಳನ್ನು ಮುಂದೆ ತೆಗೆದುಕೊಳ್ಳಲಾಗುವುದು. ಇದು ತನಿಖೆಗೆ ಸಂಬಂಧಿಸಿದ ವಿಚಾರ. ಇದರಲ್ಲಿರುವ ಹೆಸರುಗಳನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ' ಎಂದು ಗರ್ದಾನಿಬಾಗ್‌ ಪೊಲೀಸ್‌ ಠಾಣೆಯ ಎಸ್‌ಎಚ್‌ಒ ಅರುಣ್‌ ಕುಮಾರ್‌ ತಿಳಿಸಿದ್ದಾರೆ. ದೂರಿನಲ್ಲಿ ಸಿಎಂ ಹೆಸರಿರುವ ಬಗ್ಗೆ ಮಾಧ್ಯಮಗಳು ಅರುಣ್‌ ಕುಮಾರ್‌ ಅವರನ್ನು ಪ್ರಶ್ನಿಸಿದ್ದವು.

ಐಎಎಸ್‌ ಅಧಿಕಾರಿ ನೀಡಿರುವ ದೂರಿಗೆ ಸಂಬಂಧಿಸಿ ತನಿಖೆ ನಡೆಸುವಂತೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್‌ ಒತ್ತಾಯಿಸಿದ್ದಾರೆ. 'ಈ ಹಗರಣದಲ್ಲಿ ತಾವು ಶುದ್ಧ ಹಸ್ತರು ಎಂದಿದ್ದರೆ ತನಿಖೆ ಎದುರಿಸಲು ಮುಜುಗರ ಪಟ್ಟುಕೊಳ್ಳಬೇಕಿಲ್ಲ' ಎಂದು ಆರ್‌ಜೆಡಿ ಮುಖಂಡ ಹೇಳಿದ್ದಾರೆ.

'ಅಂದು ನಿತೀಶ್‌ ಕುಮಾರ್‌ ನನ್ನ ಹೆಸರನ್ನು ಮುನ್ನೆಲೆಗೆ ತಂದಿದ್ದರು. ಇದೀಗ ನಿತೀಶ್‌ ಅವರದ್ದೇ ಸರದಿ' ಎಂದು 4 ವರ್ಷಗಳ ಹಿಂದಿನ ಮನಿ ಲಾಂಡರಿಂಗ್‌ ಪ್ರಕರಣದಲ್ಲಿ ತಮ್ಮ ಹೆಸರನ್ನು ಮುನ್ನೆಲೆಗೆ ತಂದ ಬಗ್ಗೆ ತೇಜಸ್ವಿ ಯಾದವ್‌ ನೆನಪಿಸಿದರು. ಆಗ ತೇಜಸ್ವಿ ಅವರು ಉಪ ಮುಖ್ಯಮಂತ್ರಿಯಾಗಿದ್ದರು. ಮನಿ ಲಾಂಡರಿಂಗ್‌ ಪ್ರಕರಣದ ಗದ್ದಲದ ಬಳಿಕ ಆರ್‌ಜೆಡಿ ಜೊತೆಗಿನ ಮೈತ್ರಿ ಕಳೆದುಕೊಂಡು ಪುನಃ ಬಿಜೆಪಿ ಜೊತೆಗೆ ನಿತೀಶ್‌ ಕುಮಾರ್‌ ಅಧಿಕಾರಕ್ಕಾಗಿ ಸಖ್ಯ ಬೆಳೆಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು