ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಮತ್ತು ಪಂಜಾಬ್‌: ಪಕ್ಷಗಳ ಕಾರ್ಯತಂತ್ರದ ಸುಳಿವು ಬಯಲು

ಟಿಕೆಟ್‌ ಹಂಚಿಕೆ: ಜಾಟವ, ಜಾಟ್‌ ಸಮುದಾಯ ಓಲೈಕೆಗೆ ಬಿಜೆಪಿ ಯತ್ನ | ಯಾದವೇತರ ಒಬಿಸಿ ಮತಕ್ಕೆ ಎಸ್‌ಪಿ ಕಣ್ಣು
Last Updated 15 ಜನವರಿ 2022, 18:57 IST
ಅಕ್ಷರ ಗಾತ್ರ

ನವದೆಹಲಿ: ಎಲ್ಲ ಪ್ರಮುಖ ಪಕ್ಷಗಳು ಉತ್ತರ ಪ್ರದೇಶ ಮತ್ತು ಪಂಜಾಬ್‌ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿವೆ. ಈ ಮೂಲಕ ಚುನಾವಣೆಯಲ್ಲಿ ತಮ್ಮ ಕಾರ್ಯತಂತ್ರ ಏನು ಎಂಬುದರ ಸುಳಿವು ನೀಡಿವೆ.

ಉತ್ತರ ಪ್ರದೇಶದ ಮುಖ್ಯ ಪಕ್ಷಗಳಾದ ಬಿಜೆಪಿ, ಎಸ್‌ಪಿ, ಬಿಎಸ್‌ಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳ ಮೊದಲ ಪಟ್ಟಿಗಳು ಪ್ರಕಟವಾಗಿವೆ. ಪಂಜಾಬ್‌ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 86 ಅಭ್ಯರ್ಥಿಗಳ ಪಟ್ಟಿಯನ್ನೂಕಾಂಗ್ರೆಸ್ ಪಕ್ಷವು ಪ್ರಕಟಿಸಿದೆ.

ಪಂಜಾಬ್‌ನಲ್ಲಿ ಮೊದಲಿಗೆ ಪಟ್ಟಿ ಪ್ರಕಟಿಸಿದ್ದು ಶಿರೋಮಣಿ ಅಕಾಲಿ ದಳ; ಪಕ್ಷವು ಒಟ್ಟು ಕ್ಷೇತ್ರಗಳ ನಾಲ್ಕನೇ ಒಂದರಲ್ಲಿ ಹೊಸಬರಿಗೆ ಟಿಕೆಟ್‌ ನೀಡಿದೆ.

ಉತ್ತರ ಪ್ರದೇಶದಲ್ಲಿ ಮಹಿಳಾ ಸಬಲೀಕರಣವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ಪಕ್ಷವು ಚುನಾವಣಾ ಕಣಕ್ಕೆ ಇಳಿದಿದೆ. ಆದರೆ, ಪಂಜಾಬ್‌ನಲ್ಲಿ ನಾಲ್ವರು ಮಹಿಳೆಯರಿಗೆ ಮಾತ್ರ ಟಿಕೆಟ್‌ ಕೊಟ್ಟಿದೆ. ಇದು ಪ್ರಕಟವಾದ ಅಭ್ಯರ್ಥಿಗಳ ಸಂಖ್ಯೆಯ ಶೇ 4ರಷ್ಟು ಮಾತ್ರ. ಉತ್ತರ ಪ್ರದೇಶದಲ್ಲಿ ಮಾತ್ರ ಪಕ್ಷದ 125 ಅಭ್ಯರ್ಥಿಗಳ ಪಟ್ಟಿಯಲ್ಲಿ 50 ಮಹಿಳೆಯರಿದ್ದಾರೆ.

ಬಿಜೆಪಿಯ ಟಿಕೆಟ್‌ ಹಂಚಿಕೆಯು ಇತರ ಪಕ್ಷಗಳ ಹುಬ್ಬೇರುವಂತೆ ಮಾಡಿದೆ. ದಲಿತ ಸಮುದಾಯದ 19 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್‌ ನೀಡಿದೆ. ಅವರಲ್ಲಿ 13 ಮಂದಿ, ಮಾಯಾವತಿ ಅವರ ಜಾಟವ ಸಮುದಾಯಕ್ಕೆ ಸೇರಿದವರು. ಬಿಎಸ್‌ಪಿಯ ಕೆಲವು ಹಿರಿಯ ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗೆ ಇದು ಪುಷ್ಟಿ ಕೊಟ್ಟಿದೆ. ಬಿಎಸ್‌ಪಿ ಅತ್ಯಂತ ದುರ್ಬಲವಾಗಿದೆ ಎಂಬ ಮಾತು ದಿನ ಕಳೆದಂತೆ ಜೋರಾಗಿಯೇ ಕೇಳಿ ಬರುತ್ತಿದೆ. ಸಾಮಾನ್ಯ ವರ್ಗದ ಹಲವು ಕ್ಷೇತ್ರಗಳಲ್ಲಿಯೂ ದಲಿತ ವರ್ಗದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.

ಬಿಎಸ್‌ಪಿಯ 53 ಅಭ್ಯರ್ಥಿಗಳ ಪಟ್ಟಿಯಲ್ಲಿ 14 ಮುಸ್ಲಿಮರಿದ್ದಾರೆ. ಇವರಲ್ಲಿ ಹೆಚ್ಚಿನವರಿಗೆ ಉತ್ತರ ಪ್ರದೇಶದ ಪಶ್ಚಿಮ ಭಾಗದ ಕ್ಷೇತ್ರಗಳನ್ನು ನೀಡಲಾಗಿದೆ. ಇದು ಎಸ್‌ಪಿ–ಆರ್‌ಎಲ್‌ಡಿ ಮೈತ್ರಿಕೂಟಕ್ಕೆ ಸಂಕಷ್ಟದ ಸ್ಥಿತಿ ಸೃಷ್ಟಿಸುವ ಸಾಧ್ಯತೆ ಇದೆ. ಏಕೆಂದರೆ, ಈ ಪ್ರದೇಶದ 29 ಕ್ಷೇತ್ರಗಳ ಪೈಕಿ ಎಂಟರಲ್ಲಿ ಮುಸ್ಲಿಮರನ್ನು ಮೈತ್ರಿಕೂಟವು ಕಣಕ್ಕೆ ಇಳಿಸಿದೆ.

ಜಾಟ್‌ ಸಮುದಾಯವು ಈ ಹಿಂದಿನ ಮೂರು ಚುನಾವಣೆಯಲ್ಲಿ ಬಿಜೆಪಿಯ ಜತೆ ಗಟ್ಟಿಯಾಗಿ ನಿಂತಿತ್ತು. ಈ ಬಾರಿ, ಕೃಷಿ ಕಾಯ್ದೆಗಳ ವಿರುದ್ಧ ಒಂದು ವರ್ಷ ನಡೆದ ಹೋರಾಟದ ಮುಂಚೂಣಿಯಲ್ಲಿ ಜಾಟ್ ಸಮುದಾಯವೇ ಇತ್ತು. ಈ ಹೋರಾಟವು ಬಿಜೆಪಿಯ ಬೆಂಬಲ ನೆಲೆಯನ್ನು ನಡುಗಿಸಿತ್ತು. ಜತೆಗೆ, ಎಸ್‌ಪಿ ಮತ್ತು ಆರ್‌ಎಲ್‌ಡಿ ಮೈತ್ರಿಯು ಬಿಜೆಪಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹಾಗಿದ್ದರೂ ಜಾಟ್‌ ಸಮುದಾಯವನ್ನು ಕೈಬಿಡುವುದಿಲ್ಲ ಎಂಬ ಸಂದೇಶ ರವಾನಿಸಲು ಬಿಜೆಪಿ ಮುಂದಾಗಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದ 16 ಕ್ಷೇತ್ರಗಳಲ್ಲಿ ಜಾಟ್‌ ಸಮುದಾಯದವರಿಗೆ ಟಿಕೆಟ್‌ ನೀಡಲಾಗಿದೆ.

ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷವು (ಎಸ್‌ಪಿ) ಅತಿ ಹೆಚ್ಚು ಮುಸ್ಲಿಮರಿಗೆ ಟಿಕೆಟ್‌ ನೀಡಿದೆ. ಹಾಗಿದ್ದರೂ, ಮುಸ್ಲಿಂ–ಯಾದವ ಬೆಂಬಲ ನೆಲೆಯ ಆಚೆಗೆ ಪಕ್ಷವನ್ನು ಬೆಳೆಸಲು ಅಖಿಲೇಶ್‌ ಮುಂದಾಗಿದ್ದಾರೆ. ಅದಕ್ಕಾಗಿ ಉತ್ತರ ಪ್ರದೇಶದ ಪೂರ್ವ ಭಾಗದ ಯಾದವೇತರ ಹಿಂದುಳಿದ ವರ್ಗಗಳು ಮತ್ತು ಬ್ರಾಹ್ಮಣ ಸಮುದಾಯದ ಹಲವು ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.

ಪೂರ್ವ ಭಾಗದಲ್ಲಿ, ಕುಶ್ವಾಹಾ ಸಮುದಾಯದ ಮತಗಳನ್ನು ಎಸ್‌ಪಿ ನೆಚ್ಚಿಕೊಂಡಿದೆ. ಅದಕ್ಕಾಗಿ ಈ ಸಮುದಾಯದ ಬೆಂಬಲ ಹೊಂದಿರುವ ಸ್ವಾಮಿ ಪ್ರಸಾದ್‌ ಮೌರ್ಯ ಮತ್ತು ಅವರ ನಿಷ್ಠಾವಂತ ಶಾಸಕರನ್ನು ಬಿಜೆಪಿಯಿಂದ ಸೆಳೆದುಕೊಂಡಿದೆ. ಇದಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ ಮತ್ತು ಬಿಎಸ್‌ಪಿ, ಕುಶ್ವಾಹಾ ಸಮುದಾಯದ ಹಲವು ಮುಖಂಡರಿಗೆ ಟಿಕೆಟ್‌ ಕೊಟ್ಟಿವೆ.

ಮೌರ್ಯ ಅವರ ನಿರ್ಗಮನವು ಬಿಜೆಪಿಗೆ ಬಿಸಿ ಮುಟ್ಟಿಸಿದೆ. ಹಾಲಿ ಶಾಸಕರಲ್ಲಿ ಶೇ 50ರಷ್ಟು ಮಂದಿಗೆ ಟಿಕೆಟ್‌ ನಿರಾಕರಿಸಲು ಬಿಜೆಪಿ ಯೋಜಿಸಿತ್ತು. ಈ ಚಿಂತನೆಯನ್ನು ಪಕ್ಷವು ಕೈಬಿಟ್ಟಿದೆ. ಬಿಜೆಪಿಯ 83 ಅಭ್ಯರ್ಥಿಗಳ ಪಟ್ಟಿಯಲ್ಲಿ 20 ಮಂದಿ ಮಾತ್ರ ಹೊಸಬರು. ಕಳೆದ ಚುನಾವಣೆಯಲ್ಲಿ ಈ ಎಲ್ಲ 83 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಬಿಜೆಪಿಯ ಮೊದಲ ಪಟ್ಟಿಯಲ್ಲಿ ಶೇ 10ರಷ್ಟು ಮಾತ್ರ ಮಹಿಳೆಯರಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಠಾಕೂರ್‌ ಸಮುದಾಯದ ಅಭ್ಯರ್ಥಿಗಳೇ ಗರಿಷ್ಠ ಸಂಖ್ಯೆಯಲ್ಲಿದ್ಧಾರೆ. ಎರಡನೇ ಸ್ಥಾನದಲ್ಲಿ ಬ್ರಾಹ್ಮಣರಿದ್ದಾರೆ. ಉತ್ತರ ಪ್ರದೇಶದ ಪೂರ್ವ ಭಾಗದ ಕ್ಷೇತ್ರಗಳ ಟಿಕೆಟ್‌ ಘೋಷಣೆಯಾದಾಗ ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗಳಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ದೊರೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT