ಗುರುವಾರ , ಜೂನ್ 17, 2021
22 °C
ವಕೀಲ ಪ್ರಶಾಂತ್‌ ಭೂಷಣ್‌ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ‘ಸುಪ್ರೀಂ’ ಆದೇಶ

ದೇಶದಲ್ಲಿ ವಾಕ್‌ ಸ್ವಾತಂತ್ರ್ಯದ ದುಸ್ಥಿತಿಯ ಸಂಕೇತ: ಸಿಎಚ್‌ಆರ್‌ಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಭೂಷಣ್‌ ವಿರುದ್ಧ ಸುಪ್ರೀಂ ಕೋರ್ಟ್‌ನ ಆದೇಶವು, ರಾಷ್ಟ್ರದಲ್ಲಿ ಪ್ರಸ್ತುತ ವಾಕ್‌ ಸ್ವಾತಂತ್ರ್ಯದ ದುಸ್ಥಿತಿಯ ಸಂಕೇತ ಎಂದು ಕಾಮನ್‌ವೆಲ್ತ್‌ ಮಾನವ ಹಕ್ಕುಗಳ ಉಪಕ್ರಮ(ಸಿಎಚ್‌ಆರ್‌ಐ) ಅಭಿಪ್ರಾಯ ವ್ಯಕ್ತಪಡಿಸಿದೆ. 

ಟ್ವೀಟ್‌ಗಳು ಎಷ್ಟೇ ಅಸಮಂಜಸವಾಗಿರಲಿ ಅಥವಾ ಕಟುವಾಗಿರಲಿ, ಈ ಪ್ರಕರಣದಲ್ಲಿ ಆದೇಶವನ್ನು ಹೊರಡಿಸುವ ವೇಳೆ ಸುಪ್ರೀಂ ಕೋರ್ಟ್‌ ‘ಕಾನೂನಿನ ಘನತೆ ಹಾಗೂ ನ್ಯಾಯಾಂಗದ ಆಡಳಿತವು ಮೂಲಭೂತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಮಿಗಿಲಾದುದು’ ಎಂದಿರುವುದು ಟೀಕೆಯ ಶಿಕ್ಷೆ ಕುರಿತು ನಡುಕವನ್ನು ಉಂಟುಮಾಡುವ ಸಂದೇಶವನ್ನು ನೀಡಿದೆ ಎಂದು ಸಿಎಚ್‌ಆರ್‌ಐನ ಭಾರತದ ಕಾರ್ಯಾಂಗ ಮಂಡಳಿಯ ಮುಖ್ಯಸ್ಥ, ಮಾಜಿ ಮಾಹಿತಿ ಆಯುಕ್ತರಾಗಿದ್ದ ವಜಾಹತ್‌ ಹಬೀಬುಲ್ಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಜನರ ಹಕ್ಕುಗಳನ್ನು ರಕ್ಷಿಸುವ ಮುಖಾಂತರ ನ್ಯಾಯಾಂಗವು ಜನರ ನಂಬಿಕೆಯನ್ನು ಗಳಿಸಿಕೊಳ್ಳಬೇಕೇ ಹೊರತು ಇಂಥ ಪಿಡುಗಿನ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆಯ ಅಸ್ತ್ರವನ್ನು ಬಳಸಿಕೊಳ್ಳಬಾರದು. ಪಿಡುಗಿನ ಕಾರಣದಿಂದ ನ್ಯಾಯಾಲಯಗಳಲ್ಲಿ ವಿಚಾರಣೆಗಳಿಗೆ ಅಡ್ಡಿಯಾಗಿದೆ, ಕೆಲವು ಪ್ರಮುಖ ಪ್ರಕರಣಗಳ ವಿಚಾರಣೆಯೇ ಆರಂಭವಾಗಿಲ್ಲ. ಈ ಸಂದರ್ಭದಲ್ಲಿ ಪ್ರಶಾಂತ್‌ ಭೂಷಣ್‌ ಅವರಂಥ ಮಾನವ ಹಕ್ಕುಗಳ ರಕ್ಷಣೆ ಮಾಡುವವರು ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿದ್ದಕ್ಕಾಗಿ ತಪ್ಪಿತಸ್ಥ ಎಂದು ಆದೇಶಿಸಲಾಗಿದೆ’ ಎಂದು ಸಿಎಚ್‌ಆರ್‌ಐ ಉಲ್ಲೇಖಿಸಿದೆ. 

ಪ್ರಸ್ತುತ ಇರುವಂಥ ಕ್ರಿಮಿನಲ್‌ ಮಾನನಷ್ಟ ಹಾಗೂ ನಿಂದನೆ ಕಾನೂನುಗಳನ್ನು ರದ್ದುಗೊಳಿಸಲು ಆಗ್ರಹಿಸಿರುವ ಸಮಾಜದ ಹಲವು ವರ್ಗಗಳು, ನಾಗರಿಕ ಸಂಸ್ಥೆಗಳು, ವಕೀಲರ ಕರೆಗೆ ಸಿಎಚ್‌ಆರ್‌ಐ ಬೆಂಬಲ ಸೂಚಿಸಿದೆ. ಭಿನ್ನಾಭಿಪ್ರಾಯವನ್ನು ಅಪರಾಧ ಎಂದು ಪರಿಗಣಿಸುವ ವಸಾಹತು ಶಾಹಿ ಪರಂಪರೆಯಂತೆ ಇವುಗಳು ಇವೆ ಎಂದು ಅಭಿಪ್ರಾಯಪಟ್ಟಿದೆ. 

‘ಭಾರತದ 74ನೇ ಸ್ವಾತಂತ್ರ್ಯದ ಸಂದರ್ಭದಲ್ಲಿ ಜನರ ಹಕ್ಕನ್ನು ಎತ್ತಿಹಿಡಿಯುವಂಥ ಕೆಲಸವನ್ನು ಸುಪ್ರೀಂ ಕೋರ್ಟ್‌ ಮಾಡಬೇಕೆಂದು ಆಶಿಸುತ್ತೇವೆಯೇ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವಂಥ ಕೆಲಸವನ್ನಲ್ಲ. ಇತ್ತೀಚಿನ ವರ್ಷಗಳಲ್ಲಿ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿದ್ದಕ್ಕಾಗಿ ಮಾಧ್ಯಮದ ವರದಿಗಾರರ ಬಂಧನ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ತಿಳಿಸಿದವರ ಮೇಲೆ ಹಲ್ಲೆಗಳು ಹೆಚ್ಚುತ್ತಿವೆ’ ಎಂದು ತಿಳಿಸಿದೆ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು