ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ಆಮ್ಲಜನಕ ಘಟಕ ಖರೀದಿಗೆ ರಕ್ಷಣಾ ಸಚಿವಾಲಯ ಸಿದ್ಧತೆ‌

ಜರ್ಮನಿಯಿಂದ 23 ಘಟಕಗಳನ್ನು ತರುವ ಪ್ರಸ್ತಾವ l ಸೇನಾ ಆಸ್ಪತ್ರೆಗಳಲ್ಲಿ ನಿಯೋಜನೆ
Last Updated 23 ಏಪ್ರಿಲ್ 2021, 19:58 IST
ಅಕ್ಷರ ಗಾತ್ರ

ನವದೆಹಲಿ: ಆಸ್ಪತ್ರೆಗಳ ಆವರಣದಲ್ಲಿಯೇ ಆಮ್ಲಜನಕವನ್ನು ತಯಾರಿಸುವ 23 ‘ಆಮ್ಲಜನಕ ಉತ್ಪಾದನೆಯ ಸಂಚಾರಿ ಜನರೇಟರ್‌’ಗಳನ್ನು ಜರ್ಮ‌ನಿಯಿಂದ ಖರೀದಿಸಲಾಗಿದ್ದು, ಅವನ್ನು ವಾಯುಪಡೆಯ ವಿಮಾನಗಳ ಮೂಲಕ ತರಲಾಗುವುದು. ಇವುಗಳನ್ನು ದೇಶದ ವಿವಿಧಡೆ ಇರುವ ಸೇನಾ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಇಂತಹ ಪ್ರತಿಯೊಂದು ಘಟಕವು ಪ್ರತಿ ನಿಮಿಷಕ್ಕೆ 40 ಲೀಟರ್ ಆಮ್ಲಜನಕವನ್ನು ತಯಾರಿಸುತ್ತದೆ. ಒಂದು ತಾಸಿನಲ್ಲಿ 2,400 ಲೀಟರ್‌ ಆಮ್ಲಜನಕ ತಯಾರಿಸುವ ಸಾಮರ್ಥ್ಯ ಹೊಂದಿವೆ. ಸಂಚಾರಿ ಘಟಕಗಳಾಗಿರುವುದರಿಂದ ಅಗತ್ಯವಿದ್ದೆಡೆಗೆ ಸಾಗಿಸಬಹುದು. ಇಂತಹ ಇನ್ನಷ್ಟು ಘಟಕಗಳನ್ನು ಖರೀದಿಸಲು ಸಿದ್ಧತೆ ನಡೆದಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

23 ಘಟಕಗಳ ಖರೀದಿಗೆ ಸಂಬಂಧಿಸಿದ ದಾಖಲೆ ಪತ್ರಗಳ ಪ್ರಕ್ರಿಯೆ ನಡೆಯುತ್ತಿದೆ. ಅದು ಮುಗಿದ ಕೂಡಲೇ ಅವನ್ನು ತರಲಾಗುವುದು. ಮುಂದಿನ ಒಂದು ವಾರದ ಒಳಗೆ ಇವು ಭಾರತಕ್ಕೆ ಬರುವ ಸಾಧ್ಯತೆ ಇದೆ. ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸೇನೆಯ ಆಸ್ಪತ್ರೆಗಳಿಗೆ ಇವುಗಳನ್ನು ನೀಡಲು ಆದ್ಯತೆ ಎಂದು ಸಚಿವಾಲಯವು ತಿಳಿಸಿದೆ.

ಆಮ್ಲಜನಕ ಕೊರತೆ ಪಡಿಪಾಟಲು

ಹರಿಯಾಣ: ಪಾಣಿಪತ್‌ನಿಂದ ಸಿರ್ಸಾಗೆ ಹೊರಟಿದ್ದ ಆಮ್ಲಜನಕದ ಟ್ಯಾಂಕರ್ ನಾಪತ್ತೆಯಾಗಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ

ಒಡಿಶಾ: ಒಡಿಶಾ ಸರ್ಕಾರವು ತನ್ನ ಜಾಜ್‌ಪುರ ಮತ್ತು ಅಂಗೂಲ್‌ನಿಂದ ಆಂದ್ರಪ್ರದೇಶದ ವಿಶಾಖಪಟ್ಟಣಕ್ಕೆ ಹಾಗೂ ಮಹಾರಾಷ್ಟ್ರದ ಪುಣೆಗೆ ಆಮ್ಲಜನಕ ಪೂರೈಸಲು ಗ್ರೀನ್‌ ಕಾರಿಡಾರ್ ರೂಪಿಸಿತ್ತು. ಟ್ಯಾಂಕರ್‌ಗಳನ್ನು ಬಿಗಿಭದ್ರತೆಯಲ್ಲಿ ಸಾಗಿಸಲಾಯಿತು

ಮಹಾರಾಷ್ಟ್ರ: ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿದೆ. ಮೊದಲ ಆಮ್ಲಜನಕ ಎಕ್ಸ್‌ಪ್ರೆಸ್‌ ರೈಲು ಶನಿವಾರ ಮಹಾರಾಷ್ಟ್ರವನ್ನು ತಲುಪಲಿದೆ. ಪುಣೆಯ ವಿಎಸ್‌ಐ ಸಕ್ಕರೆ ಕಾರ್ಖಾನೆಯು ಆಮ್ಲಜನಕ ತಯಾರಿಸುತ್ತಿದೆ. ಅದನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಪೂರೈಸಲಿದೆ

ದೆಹಲಿ: ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಆಮ್ಲಜನಕ ಬಹುತೇಕ ಖಾಲಿಯಾಗಿತ್ತು. ಎರಡು ತಾಸಿನಲ್ಲೇ ಒಂದು ಟ್ಯಾಂಕರ್ ಆಮ್ಲಜನಕ ಪೂರೈಸಲಾಗಿತ್ತು. ನಂತರದ ಎರಡು ತಾಸಿನಲ್ಲೇ ಅದು ಖಾಲಿಯಾಗಿದೆ. ಮತ್ತೆ ಆಮ್ಲಜನಕ ಪೂರೈಸುವಂತೆ ಆಸ್ಪತ್ರೆ ಮನವಿ ಮಾಡಿದೆ. ಆಸ್ಪತ್ರೆಯಲ್ಲಿ 700 ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ

ತೆಲಂಗಾಣ: ಒಡಿಶಾದಿಂದ ತೆಲಂಗಾಣದ ವಿವಿಧೆಡೆಗೆ ಆಮ್ಲಜನಕ ಟ್ಯಾಂಕರ್ ಮತ್ತು ಸಿಲಿಂಡರ್‌ಗಳನ್ನು ವಾಯುಪಡೆಯ ವಿಮಾನಗಳ ಮೂಲಕ ಸಾಗಿಸಲಾಗಿದೆ

ಗುಜರಾತ್‌: ಗುಜರಾತ್‌ನ ರಾಜ್‌ಕೋಟ್‌ ಜಿಲ್ಲೆಯ ಹಲವು ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ಉಂಟಾಗಿದೆ. ಆಮ್ಲಜನಕ ಖಾಲಿಯಾದರೆ, ಕೋವಿಡ್‌ ರೋಗಿಗಳು ಸಾವನ್ನಪ್ಪುವ ಅಪಾಯವಿದೆ ಎಂದು ಆಸ್ಪತ್ರೆಗಳು ಕಳವಳ ವ್ಯಕ್ತಪಡಿಸಿವೆ

ಶ್ರೀ ಸಿಮೆಂಟ್ ಕಂಪನಿಯು ತನ್ನ ಪಶ್ಚಿಮ ಬಂಗಾಳ, ಕರ್ನಾಟಕ, ಬಿಹಾರ ಮತ್ತು ಒಡಿಶಾದಲ್ಲಿನ ಘಟಕಗಳಲ್ಲಿ ವೈದ್ಯಕೀಯ ಆಮ್ಲಜನಕ ತಯಾರಿಕೆಯನ್ನು ಆರಂಭಿಸಿದೆ. ಈವರೆಗೆ 12 ಸಾವಿರಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಭರ್ತಿ ಮಾಡಿ ಪೂರೈಸಿದೆ.

ವಾಯುವಾರ್ಗದಲ್ಲಿ ಖಾಲಿ ಸಿಲಿಂಡರ್‌ ಸಾಗಾಟ

ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಖಾಲಿಯಾದ ಆಮ್ಲಜನಕದ ಜಂಬೋ ಸಿಲಿಂಡರ್‌ಗಳನ್ನು, ಆಮ್ಲಜನಕದ ತಯಾರಿಕಾ ಘಟಕಗಳಿಗೆ ವಾಯುಪಡೆಯ ವಿಮಾನಗಳ ಮೂಲಕ ಸಾಗಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಆಸ್ಪತ್ರೆಗಳಿಂದ ಆಮ್ಲಜನಕ ಘಟಕಗಳಿಗೆ ಖಾಲಿ ಸಿಲಿಂಡರ್‌ಗಳನ್ನು ಟ್ರಕ್‌ ಮತ್ತು ರೈಲಿನಲ್ಲಿ ಸಾಗಿಸಲು ಹೆಚ್ಚು ಸಮಯ ಬೇಕಾಗುತ್ತದೆ. ವಿಮಾನಗಳ ಮೂಲಕ ಸಾಗಿಸಿದರೆ, ಕಡಿಮೆ ಸಮಯದಲ್ಲಿ ಘಟಕಗಳಿಗೆ ಈ ಸಿಲಿಂಡರ್‌ಗಳನ್ನು ತಲುಪಿಸಲು ಸಾಧ್ಯವಾಗುತ್ತದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗುತ್ತದೆ. ಇದರಿಂದ ಕಡಿಮೆ ಅವಧಿಯಲ್ಲಿ ಆಮ್ಲಜನಕವನ್ನು ಪೂರೈಕೆ ಮಾಡಲೂ ಸಾಧ್ಯವಾಗುತ್ತದೆ ಎಂದು ಗೃಹ ಸಚಿವಾಲಯವು ಹೇಳಿದೆ.

****
ದೆಹಲಿಯಲ್ಲಿ ಒಂದೂ ಆಮ್ಲಜನಕ ತಯಾರಿಕಾ ಘಟಕವಿಲ್ಲ. ದೆಹಲಿಗೆ ಆಮ್ಲಜನಕವನ್ನು ವಿಮಾನ ಮೂಲಕ ಪೂರೈಸಿ, ಆಮ್ಲಜನಕ ಎಕ್ಸ್‌ಪ್ರೆಸ್‌ ಅನ್ನು ದೆಹಲಿಗೂ ನಿಯೋಜನೆ ಮಾಡಿ
ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

ದೆಹಲಿ ಆಸ್ಪತ್ರೆಗಳು ಆಮ್ಲಜನಕ ಖಾಲಿಯಾಗಿದೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವುದಕ್ಕೂ ಮೊದಲು, ಸಂಬಂಧಿತ ನೋಡಲ್ ಅಧಿಕಾರಿಗೆ ಮನವಿ ಸಲ್ಲಿಸಬೇಕು
ದೆಹಲಿ ಹೈಕೋರ್ಟ್‌

ಸಕ್ಕರೆ ಕಾರ್ಖಾನೆಗಳೂ ವೈದ್ಯಕೀಯ ಆಮ್ಲಜನಕವನ್ನು ತಯಾರಿಸಬಹುದು. ಮಹಾರಾಷ್ಟ್ರದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಆಮ್ಲಜನಕ ತಯಾರಿಸಿ, ಆಸ್ಪತ್ರೆಗಳಿಗೆ ಪೂರೈಸಬೇಕು
ಶರದ್ ಪವಾರ್, ಸಂಸದ ಮತ್ತು ವಿಎಸ್‌ಐ ಸಕ್ಕರೆ ಕಾರ್ಖಾನೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT