ಬುಧವಾರ, ಆಗಸ್ಟ್ 10, 2022
21 °C

100 ಹೆಚ್ಚುವರಿ ರೈಲು ಸಂಚಾರ ಆರಂಭಿಸಲು ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಲವಾರು ರಾಜ್ಯಗಳು ಲಾಕ್‌ಡೌನ್‌ ಸಡಿಲಿಕೆ ಮಾಡುತ್ತಿದ್ದು, ಪ್ರಯಾಣಿಕರ ಬೇಡಿಕೆ ಪೂರೈಸುವುದಕ್ಕಾಗಿ ಹೆಚ್ಚು ರೈಲುಗಳ ಕಾರ್ಯಾಚರಣೆ ಮಾಡಲು ಭಾರತೀಯ ರೈಲ್ವೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸುಮಾರು 100 ಹೆಚ್ಚುವರಿ ರೈಲುಗಳನ್ನು ಈ ವಾರವೇ ಓಡಿಸಲು ನಿರ್ಧರಿಸಿದೆ.

ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ಮುಂಗಡವಾಗಿ ಕಾಯ್ದಿರಿಸುವ ದರ್ಜೆಗೆ ಪ್ರಯಾಣಿಕರು ಹೆಚ್ಚು ಟಿಕೆಟ್‌ ಪಡೆಯುತ್ತಿದ್ದಾರೆ. ಇದರಿಂದಾಗಿ ಹೆಚ್ಚು ಅಂತರದ ಸ್ಥಳಗಳ ನಡುವೆ ಮೇಲ್‌ ಮತ್ತು ಎಕ್ಸ್‌ಪ್ರೆಸ್‌ ರೈಲುಗಳ ಚಾಲನೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ತಿಂಗಳು ದಿನಕ್ಕೆ ಸುಮಾರು 5 ಲಕ್ಷ ಟಿಕೆಟ್‌ಗಳನ್ನು ಕಾಯ್ದಿರಿಸಲಾಗುತ್ತಿತ್ತು. ಆದರೆ ಈ ತಿಂಗಳು 14 ಲಕ್ಷಕ್ಕಿಂತ ಹೆಚ್ಚು ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ.

ರಾಜ್ಯಗಳ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚು ರೈಲುಗಳನ್ನು ಆರಂಭಿಸಬಹುದು. ಆದ್ದರಿಂದ, ರಾಜ್ಯ ಸರ್ಕಾರಗಳ ಜೊತೆ ಸಂಪರ್ಕದಲ್ಲಿ ಇರಲು  ರೈಲ್ವೆ ವಿಭಾಗೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಶೇಷ ರೈಲುಗಳನ್ನು ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಜಾರ್ಖಂಡ್‌ ರಾಜ್ಯಗಳಿಂದ ಮಹಾನಗರಗಳಾದ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್‌ಗೆ ಬಿಡಲಾಗುವುದು. ಲಾಕ್‌ಡೌನ್‌ ಘೋಷಣೆಯಾದ ಬಳಿಕ ತಮ್ಮ ರಾಜ್ಯಗಳಿಗೆ ಹಿಂದಿರುಗಿದ್ದ ವಲಸೆ ಕಾರ್ಮಿಕರು ಈಗ ಉದ್ಯೋಗ ಹುಡುಕಲು ನಗರಗಳಿಗೆ ಮರಳುತ್ತಿದ್ದಾರೆ. ಅಂತಹ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಹೆಚ್ಚು ರೈಲುಗಳು ಕಾರ್ಯಾರಂಭ ಮಾಡಲಿವೆ.

ರೈಲ್ವೆ ಸೇವೆಯನ್ನು ಆದಷ್ಟು ಬೇಗ ಸಹಜಸ್ಥಿತಿಗೆ ತರಲು ಭಾರತೀಯ ರೈಲ್ವೆ ಉತ್ಸುಕವಾಗಿದೆ. ಕ್ರಮೇಣ ಸೇವೆಯನ್ನು ಹೆಚ್ಚಿಸಲಾಗುತ್ತದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ಸುನೀತ್‌ ಶರ್ಮ ಸುದ್ದಿಗಾರರಿಗೆ ಹೇಳಿದ್ದರು.

ಈಗ ದಿನಕ್ಕೆ ಸುಮಾರು 900 ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳು ಓಡಾಡುತ್ತಿವೆ. ಕೋವಿಡ್‌ ಸಾಂಕ್ರಾಮಿಕದ ಎರಡನೇ ಅಲೆ ಆರಂಭವಾಗುವ ಮೊದಲು 1,500 ರೈಲುಗಳು ಓಡಾಡುತ್ತಿದ್ದವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು