ಶನಿವಾರ, ಮಾರ್ಚ್ 25, 2023
28 °C

President Of India: ದುರಂತಗಳನ್ನು ಮೆಟ್ಟಿ ನಿಂತ ದ್ರೌಪದಿ ಮುರ್ಮು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಮತ ಎಣಿಕೆಯ ಪ್ರತಿ ಸುತ್ತಿನಲ್ಲೂ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಈ ಮೂಲಕ ರಾಷ್ಟ್ರಪತಿ ಹುದ್ದೆ ಅಲಂಕರಿಸಿದ ಪ್ರಥಮ ಬುಡಕಟ್ಟು ಮಹಿಳೆ ಎಂಬ ಖ್ಯಾತಿಗೂ ಅವರು ಪಾತ್ರರಾಗಲಿದ್ದಾರೆ. 

ಇವತ್ತು ತಾವಿರುವ ಸ್ಥಾನ ತಲುಪಲು ಅವರು ದೀರ್ಘ ಹಾದಿ ಕ್ರಮಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಹಲವು ದುರಂತಗಳನ್ನು ಮೆಟ್ಟಿ ನಿಂತಿದ್ದಾರೆ.

2009 ಮತ್ತು 2015ರ ನಡುವಿನ ಆರು ವರ್ಷಗಳಲ್ಲಿ ಪತಿ, ಇಬ್ಬರು ಮಕ್ಕಳು, ತಾಯಿ ಮತ್ತು ಸಹೋದರರನ್ನು ಕಳೆದುಕೊಂಡು ತೀವ್ರ ಆಘಾತ ಅನುಭವಿಸಿದ್ದರು. ಬಳಿಕ, ಅವುಗಳನ್ನು ಮೆಟ್ಟಿ ನಿಂತು ಧ್ಯಾನಕ್ಕೆ ಮೊರೆಹೋದ ಅವರು, ತಮ್ಮ ವೈಯಕ್ತಿಕ ಆಘಾತಗಳಿಂದ ಹೊರಬಂದರು. ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು. ಬುಡಕಟ್ಟು ಜನಾಂಗದ ನಾಯಕಿಯಾಗಿ ಹೊರಹೊಮ್ಮಿದರು.
 
ದ್ರೌಪದಿ ಮುರ್ಮು ಅವರಿಗೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಕ್ಕಳಿದ್ದರು. ವರದಿಗಳ ಪ್ರಕಾರ, 2009ರಲ್ಲಿ ಅವರ ಒಬ್ಬ ಮಗ ಅನುಮಾನಾಸ್ಪದವಾಗಿ ಸಾವಿಗೀಡಾದರು. ಮತ್ತೊಬ್ಬ ಮಗ ರಸ್ತೆ ಅಪಘಾತದಲ್ಲಿ ಅಸುನೀಗಿದ. ಇದಾದ ಒಂದು ವರ್ಷದಲ್ಲಿ ಅವರ ಪತಿ ಶ್ಯಾಮ್ ಚರಣ್ ಮುರ್ಮು ಹೃದಯಾಘಾತದಿಂದ ಸಾವಿಗೀಡಾದರು. ದ್ರೌಪದಿ ಮುರ್ಮು ಅವರ ಮಗಳು ಒಡಿಶಾದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

ರಾಜಕೀಯ ಪಯಣ

ಜೂನ್ 20, 1958ರಲ್ಲಿ ಸಂತಾಲ ಬುಡಕಟ್ಟು ಜನಾಂಗದಲ್ಲಿ ಜನಿಸಿದ ಮುರ್ಮು ಉತ್ತಮ ವಾಗ್ಮಿಯಾಗಿದ್ದರು. ಜಾರ್ಖಂಡ್‌ನ ಮೊದಲ ಮಹಿಳಾ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ ಖ್ಯಾತಿ ಅವರದು. 

1997ರಲ್ಲಿ ಒಡಿಶಾದ ರಾಯ್‌ರಾಂಗ್‌ಪುರದ ಬಿಜೆಪಿಯ ಕೌನ್ಸಿಲರ್ ಆಗಿ ತಮ್ಮ ರಾಜಕೀಯ ಪಯಣ ಆರಂಭಿಸಿದರು. 2000–2004ರ ಬಿಜೆಪಿ–ಬಿಜೆಡಿ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿಯೂ ಕೆಲಸ ಮಾಡಿದ್ಧಾರೆ. 2015ರಲ್ಲಿ ಅವರನ್ನು ಜಾರ್ಖಂಡ್ ರಾಜ್ಯದ ರಾಜ್ಯಪಾಲರಾಗಿ ನೇಮಕ ಮಾಡಲಾಗಿತ್ತು. 2021ರವರೆಗೆ ಅವರು ಅಲ್ಲಿ ಸೇವೆ ಸಲ್ಲಿಸಿದ್ದರು.

2014ರಲ್ಲಿ ರಾಯ್‌ರಾಂಗ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರು, ಬಿಜೆಡಿ ಅಭ್ಯರ್ಥಿ ಎದುರು ಸೋತಿದ್ದರು.2021ರಲ್ಲಿ ರಾಜ್ಯಪಾಲೆಯಾಗಿ ಅವಧಿ ಮುಗಿದ ಬಳಿಕ ರಾಯ್‌ರಾಂಗ್‌ಪುರದಲ್ಲಿ ಧ್ಯಾನ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.  

ರಾಷ್ಟ್ರಪತಿ ಚುನಾವಣೆಗೆ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಘೋಷಿಸಿದಾಗ,‘ನಾನು ನಿಜಕ್ಕೂ ಅಚ್ಚರಿಗೊಂಡಿದ್ದೇನೆ ಮತ್ತು ಬಹಳ ಸಂತೋಷವಾಗಿದೆ. ಮಯೂರ್‌ಭಂಜ್ ಜಿಲ್ಲೆಯ ಒಂದು ಕುಗ್ರಾಮದ ಆದಿವಾಸಿ ಜನಾಂಗದ ಮಹಿಳೆಯಾದ ನಾನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗುತ್ತೇನೆಂದು ಎಂದೂ ಊಹಿಸಿರಲಿಲ್ಲ’ಎಂದು ಹೇಳಿದ್ದರು. ನಾನು ಈ ಅವಕಾಶವನ್ನು ನಿರೀಕ್ಷಿಸಿರಲಿಲ್ಲ. ಜಾರ್ಖಂಡ್‌ನ ರಾಜ್ಯಪಾಲೆಯಾದ ಬಳಿಕ 6 ವರ್ಷಗಳಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಲಿಲ್ಲ ಎಂದೂ ಹೇಳಿದ್ದರು

ಇವನ್ನೂ ಓದಿ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು