ಮಂಗಳವಾರ, ಮೇ 17, 2022
26 °C
ರಾಂಪುರದಲ್ಲಿ ಮೃತ ರೈತರ ಕುಟುಂಬವನ್ನು ಭೇಟಿ ಮಾಡಿದ ಪ್ರಿಯಾಂಕಾ

ಹುತಾತ್ಮ ರೈತರನ್ನು ಭಯೋತ್ಪಾದಕರು ಎಂಬಂತೆ ನೋಡುವುದು ಬಹುದೊಡ್ಡ ಅಪರಾಧ: ಪ್ರಿಯಾಂಕಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹುತಾತ್ಮ ರೈತರನ್ನು ಭಯೋತ್ಪಾದಕರು ಮತ್ತು ಅವರ ಪ್ರತಿಭಟನೆಯನ್ನು ರಾಜಕೀಯ ಪಿತೂರಿ ಎಂಬಂತೆ ನೋಡುವುದು ಬಹುದೊಡ್ಡ ಅಪರಾಧವಾಗಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.  

ಜನವರಿ 26ರಂದು ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟಿದ್ದ ಉತ್ತರ ಪ್ರದೇಶದ ರಾಮ್‌ಪುರದ ರೈತನ ನಿವಾಸಕ್ಕೆ ಪ್ರಿಯಾಂಕಾ ಗುರುವಾರ ಭೇಟಿ ನೀಡಿದ್ದಾರೆ. ಆ ವೇಳೆ ರೈತನ ಕುಟುಂಬಸ್ಥರಿಗೆ ಅವರು ಸಾಂತ್ವನ ಹೇಳಿದ್ದಾರೆ.
 
ಮೃತ ರೈತನ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಬಳಿಕ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

'ಕೇಂದ್ರದ ಕೃಷಿ ಕಾಯ್ದೆಗಳು ರೈತರ ವಿರುದ್ಧದ ಅಪರಾಧವಾಗಿವೆ. ಇದಕ್ಕಿಂತ ದೊಡ್ಡ ಅಪರಾಧವೆಂದರೆ ಹುತಾತ್ಮರನ್ನು ಭಯೋತ್ಪಾದಕರೆಂದು ಕರೆಯುವುದು ಮತ್ತು ರೈತರ ಪ್ರತಿಭಟನೆಯನ್ನು ರಾಜಕೀಯ ಪಿತೂರಿ ಎಂಬಂತೆ ನೋಡುವುದು' ಎಂದು ಹೇಳಿದ್ದಾರೆ.

'ಮೃತ ರೈತನ ಕುಟುಂಬ ಸದಸ್ಯರು ನ್ಯಾಯಾಂಗ ವಿಚಾರಣೆ ಬಯಸುತ್ತಾರೆ. ನಾವು ರೈತ ಮತ್ತು ಆತನ ಕುಟುಂಬಗಳೊಂದಿಗೆ ಇದ್ದೇವೆ. ಈ ಚಳವಳಿಯನ್ನು ನಿಜವಾದ ಹೋರಾಟ ಎಂದು ಸರ್ಕಾರ ಪರಿಗಣಿಸಿಲ್ಲ. ಇದರ ಹಿಂದೆ ಯಾವುದೇ ರಾಜಕೀಯವಿಲ್ಲ. ಇದು ನಮ್ಮ ರೈತರ ನೋವಿನ ಧ್ವನಿಯಾಗಿದೆ' ಎಂದು ಪ್ರಿಯಾಂಕಾ ಗಾಂಧಿ ಹರಿಹಾಯ್ದಿದ್ದಾರೆ.

ರಾಂಪುರದಲ್ಲಿ ಮೃತ ರೈತರ ಕುಟುಂಬವನ್ನು ಭೇಟಿ ಮಾಡಿದ ಪ್ರಿಯಾಂಕಾ

ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆದ ರೈತರ ಪ್ರತಿಭಟನೆ ವೇಳೆ ಮೃತಪಟ್ಟ ರೈತ ನವ್ರೀತ್‌ ಸಿಂಗ್ ಅವರ ಕುಟುಂಬದ ಸದಸ್ಯರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಗುರುವಾರ, ಭೇಟಿಯಾದರು.

ಸಮೀಪದ ದಿಬ್ಡಿಬಾ ಗ್ರಾಮದಲ್ಲಿದ್ದ ನವ್ರೀತ್‌ ಸಿಂಗ್ ಮನೆಗೆ ಮಧ್ಯಾಹ್ನದ ಹೊತ್ತಿಗೆ ಉತ್ತರ ಪ್ರದೇಶದ ಕಾಂಗ್ರೆಸ್ ಘಟಕದ ಮುಖ್ಯಸ್ಥ ಅಜಯ್ ಕುಮಾರ್ ಲಲ್ಲು ಅವರೊಂದಿಗೆ ಪ್ರಿಯಾಂಕ ಆಗಮಿಸಿದರು. ನಂತರ, ಮನೆಯಲ್ಲಿ ಏರ್ಪಡಿಸಿದ್ದ ‘ಅಂತಿಮ್ ಅರ್ದಾಸ್‌‘(ಮೃತಪಟ್ಟವರಿಗೆ ಅಂತಿಮ ನಮನ ಸಲ್ಲಿಸುವ ಕಾರ್ಯಕ್ರಮ)ನಲ್ಲಿ ಪಾಲ್ಗೊಂಡರು.

ಇದನ್ನೂ ಓದಿ- ರೈತರು, ಕ್ರಿಕೆಟಿಗರ ಬಗ್ಗೆ ಅವಹೇಳನ: ನಟಿ ಕಂಗನಾ ಟ್ವೀಟ್‌ ಅಳಿಸಿಹಾಕಿದ ಟ್ವಿಟರ್‌

ಗುರುವಾರ ಬೆಳಿಗ್ಗೆ ರಾಂಪುರಕ್ಕೆ ಬರುವಾಗ ಪಶ್ಚಿಮ ಉತ್ತರ ಪ್ರದೇಶದ ಹಾಪುರ್‌ ಜಿಲ್ಲೆಯ ಸಮೀಪದ ಗಜ್ರೌಲಾ ಪ್ರದೇಶದ ಬಳಿ ಪ್ರಿಯಾಂಕಾ ಅವರ ಬೆಂಗಾವಲು ಪಡೆಯ ನಾಲ್ಕು ವಾಹನಗಳು ಅಪಘಾತಕ್ಕೀಡಾದವು. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿರಲಿಲ್ಲ. ‘ಬೆಂಗಾವಲು ಪಡೆಯು ಕೊನೆಯಲ್ಲಿರುವ ವಾಹನಗಳು ಒಂದಕ್ಕೊಂದು ಅಪ್ಪಳಿಸಿವೆ. ಯಾರಿಗೂ ತೊಂದರೆಯಾಗಿಲ್ಲ‘ ಎಂದು ಕಾಂಗ್ರೆಸ್‌ ಪಕ್ಷದ ಮಾಧ್ಯಮ ಉಸ್ತುವಾರಿ ಲಲನ್‌ ಕುಮಾರ್ ಲಖನೌದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ- ಗಣರಾಜ್ಯೋತ್ಸವದ ದಿನ ನಡೆದ ಗಲಭೆಗೆ ರೈತರು ಜವಾಬ್ದಾರರಲ್ಲ: ಎಚ್.ಡಿ. ದೇವೇಗೌಡ

ರಾಂಪುರ ತಲುಪುವ ಮೊದಲು ಪ್ರಿಯಾಂಕಾ ಗಾಂಧಿಯವರು ರಸ್ತೆ ಬದಿಯಲ್ಲಿ ತನ್ನ ಎಸ್‌ಯುವಿ ಕಾರು ನಿಲ್ಲಿಸಿ, ಮುಂದಿನ ಗಾಜನ್ನು ತಾವೇ ಸ್ವಚ್ಛಗೊಳಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು. ಉಮಾಶಂಕರ್ ಸಿಂಗ್ ಎಂಬುವವರು ಈ ವಿಡಿಯೊವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅದನ್ನು ಅಜಯ್‌ಕುಮಾರ್‌ ಲಲ್ಲು ಹಾಗೂ ರಾಹುಲ್ ಗಾಂಧಿ ಮರು ಟ್ವೀಟ್‌ ಮಾಡಿ ಹಂಚಿಕೊಂಡಿದ್ದರು. ಆ ವಿಡಿಯೊದಲ್ಲಿ ಪ್ರಿಯಾಂಕ ಅವರು ಕಾರು ಸ್ವಚ್ಛಗೊಳಿಸುತ್ತಿದ್ದಾಗ, ಅಜಯ್‌ಕುಮಾರ್ ಅವರಿಗೆ ಸಹಾಯ ಮಾಡುತ್ತಿದ್ದ ದೃಶ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು