ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಉಚಿತ ಲಸಿಕೆ ನೀಡಿ: ಹಿರಿಯ ಮಾಜಿ ಅಧಿಕಾರಿಗಳ ಪತ್ರ

ಸರ್ಕಾರದ ನಿರ್ಲಕ್ಷಕ್ಕೆ ಅಸಮಾಧಾನ: ಪ್ರಧಾನಮಂತ್ರಿಗೆ ಹಿರಿಯ ಮಾಜಿ ಅಧಿಕಾರಿಗಳ ಪತ್ರ
Last Updated 20 ಮೇ 2021, 16:25 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎಲ್ಲ ನಾಗರಿಕರಿಗೂ ಉಚಿತ ಲಸಿಕೆ ಒದಗಿಸಬೇಕು ಎಂದು ಹಿರಿಯ ಮಾಜಿ ಅಧಿಕಾರಿಗಳು ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ.

‘ಅಂತರರಾಷ್ಟ್ರೀಯ ಸಮುದಾಯ ಮತ್ತು ಭಾರತದ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದರೂ ಮೊದಲ ಮತ್ತು ಎರಡನೇ ಅಲೆಯ ಅಂತರದ ನಡುವಣ ಅವಧಿಯನ್ನು ಮಹತ್ವದ ಸಂಪನ್ಮೂಲಗಳನ್ನು ಸಂಗ್ರಹಿಸಿಕೊಳ್ಳಲು ಬಳಸಿಕೊಳ್ಳಲಿಲ್ಲ. ಈ ಅವಧಿಯಲ್ಲಿ ವೈದ್ಯಕೀಯ ಸಿಬ್ಬಂದಿ ಹೆಚ್ಚಿಸಲು, ಹಾಸಿಗೆಗಳು, ಆಮ್ಲಜನಕ, ವೆಂಟಿಲೇಟರ್‌ಗಳು, ಔಷಧ ಮತ್ತು ಇತರ ಉಪಕರಣಗಳು ಸೇರಿದಂತೆ ವೈದ್ಯಕೀಯಕ್ಕೆ ಸಂಬಂಧಿಸಿದ ಸಂಪನ್ಮೂಲಗಳನ್ನು ಸಂಗ್ರಹ ಮಾಡಿಕೊಳ್ಳಬಹುದಾಗಿತ್ತು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ವೈದ್ಯಕೀಯ ನೆರವಿಗಾಗಿ ನಾಗರಿಕರು ಪರದಾಡುತ್ತಿದ್ದಾರೆ. ಸಾವಿರಾರು ಮಂದಿ ಸಾವಿಗೀಡಾಗಿದ್ದಾರೆ. ಆದರೂ, ಬಿಕ್ಕಟ್ಟಿನ ಅಗಾಧ ಪ್ರಮಾಣವನ್ನು ನೋಡಿದಾಗ ಸರ್ಕಾರ ನಿರ್ಲಕ್ಷ್ಯ ಮನೋಭಾವ ಹೊಂದಿದೆ ಎನ್ನುವ ಅಭಿಪ್ರಾಯ ಮೂಡಿದೆ. ಲಸಿಕೆಯನ್ನು ಸಂಗ್ರಹಿಸಿಟ್ಟುಕೊಳ್ಳಲು ಸಹ ಮುಂಚಿತವಾಗಿ ಯಾವುದೇ ಯೋಜನೆ ರೂಪಿಸಲಿಲ್ಲ’ ಎಂದು ತಿಳಿಸಿದ್ದಾರೆ.

‘ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಇದ್ದರೂ ಪಿಎಂ ಕೇರ್ಸ್‌ ನಿಧಿಯನ್ನು ಸ್ಥಾಪಿಸಲಾಯಿತು. ಆದರೆ, ಪಿಎಂ ಕೇರ್ಸ್‌ ನಿಧಿಗೆ ಸಂಗ್ರಹವಾದ ಮೊತ್ತ ಮತ್ತು ವೆಚ್ಚವನ್ನು ಇದುವರೆಗೆ ಬಹಿರಂಗಪಡಿಸಿಲ್ಲ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆರ್‌ಟಿ–ಪಿಸಿಆರ್‌ ಪರೀಕ್ಷೆಯನ್ನು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಹೆಚ್ಚಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಕೋರಿದ್ದಾರೆ.

ಸಂಪುಟದ ಮಾಜಿ ಕಾರ್ಯದರ್ಶಿ ಕೆ.ಎಂ. ಚಂದ್ರಶೇಖರ್‌, ಮಾಜಿ ಆರೋಗ್ಯ ಕಾರ್ಯದರ್ಶಿ ಕೆ. ಸುಜಾತಾ ರಾವ್‌, ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್‌ ಮೆನನ್‌, ಪ್ರಧಾನಿಯ ಮಾಜಿ ಸಲಹೆಗಾರ ಟಿ.ಕೆ.ಎ. ನಯ್ಯರ್‌, ಮಾಜಿ ಮುಖ್ಯ ಮಾಹಿತಿ ಆಯುಕ್ತ ವಜಾಹತ್‌ ಹಬಿಬುಲ್ಲಾ ಮತ್ತು ದೆಹಲಿಯ ಮಾಜಿ ಲೆಫ್ಟಿನೆಂಟ್‌ ಗವರ್ನರ್‌ ನಜೀಬ್‌ ಜಂಗ್‌ ಸೇರಿದಂತೆ ನಾಗರಿಕ ಸೇವೆಯ 116 ಮಾಜಿ ಅಧಿಕಾರಿಗಳು ಈ ಪತ್ರವನ್ನು ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT