ಭಾನುವಾರ, ಏಪ್ರಿಲ್ 2, 2023
31 °C
ಎಲ್ಗಾರ್‌ ಪ್ರಕರಣದ ಆರೋಪಿ

ಪುಣೆ ನ್ಯಾಯಾಧೀಶರು ಅಧಿಕಾರ ಇಲ್ಲದಿದ್ದರೂ ಜಾಮೀನು ನಿರಾಕರಿಸಿದ್ದಾರೆ: ಸುಧಾ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪುಣೆಯ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರು ತಮ್ಮನ್ನು ತಾವು ನಿಯೋಜಿತ ವಿಶೇಷ ನ್ಯಾಯಾಧೀಶರಂತೆ ‘ನಟಿಸುವ’ ಮೂಲಕ, ನನ್ನನ್ನು ಮತ್ತು ಇತರ ಸಹ ಆರೋಪಿಗಳನ್ನು ದೀರ್ಘಕಾಲದಿಂದ ಜೈಲಿನಲ್ಲಿ ಇರುವಂತೆ ಮಾಡಿದ್ದಾರೆ ಎಂದು ಎಲ್ಗಾರ್‌ ಪರಿಷತ್‌– ಮಾವೊಗಳೊಂದಿಗಿನ ಸಂಪರ್ಕ ಪ್ರಕರಣದ ಆರೋಪಿ ಸುಧಾ ಭಾರದ್ವಾಜ್‌ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಸುಧಾ ಅವರ ಪರ ಹಾಜರಾದ ಹಿರಿಯ ವಕೀಲ ಯುಗ್ ಚೌಧರಿ ಈ ಕುರಿತು ಮಾಹಿತಿಯನ್ನು ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಪುಣೆಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕೆ.ಡಿ. ವಡಾನೆ ಅವರು ಸುಧಾ ಮತ್ತು ಇತರ ಎಂಟು ಕಾರ್ಯಕರ್ತರನ್ನು 2018ರಲ್ಲಿ ಪುಣೆ ಪೊಲೀಸರ ವಶಕ್ಕೆ ಕಳುಹಿಸಿ ಆದೇಶಿಸಿದ್ದರು. ವಡಾನೆ ಅವರು ಈ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ಪೊಲೀಸರಿಗೆ ಸಮಯವನ್ನೂ ವಿಸ್ತರಿಸಿದ್ದರು. ನಂತರ 2018ರ ಅಕ್ಟೋಬರ್‌ನಲ್ಲಿ ಸುಧಾ ಮತ್ತು ಇತರ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದರು. ಈ ವೇಳೆ ಆದೇಶ ಹೊರಡಿಸುವಾಗ ವಡಾನೆ ಅವರು ತಮ್ಮನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯ (ಯುಎಪಿಎ) ವಿಶೇಷ ನ್ಯಾಯಾಧೀಶರು ಎಂದು ಹೇಳಿಕೊಂಡು, ಆದೇಶಕ್ಕೆ ಸಹಿ ಹಾಕಿದ್ದರು ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಈ ಕುರಿತು ಆರ್‌ಟಿಐ ಮೂಲಕ ಮಹಾರಾಷ್ಟ್ರ ಸರ್ಕಾರ ಮತ್ತು ಹೈಕೋರ್ಟ್‌ನಿಂದ ಪಡೆದ ಉತ್ತರಗಳು ತಮ್ಮ ಬಳಿಯಿದ್ದು, ಅದರಲ್ಲಿ ವಡಾನೆ ಅವರನ್ನು ವಿಶೇಷ ನ್ಯಾಯಾಧೀಶರಾಗಿ ನೇಮಿಸಲಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಚೌದರಿ ತಿಳಿಸಿದರು.

ತನಗೆ ಅಧಿಕಾರ ಇಲ್ಲದೇ ಇದ್ದರೂ ವಡಾನೆ ಅವರು ಜಾಮೀನು ನಿರಾಕರಣೆ, ಅವಧಿ ವಿಸ್ತರಣೆ, ಚಾರ್ಜ್‌ಶೀಟ್‌ ಸ್ವೀಕಾರ ಮಾಡಿರುವುದು ಸರಿಯಲ್ಲ. ಹಾಗಾಗಿ ವಡಾನೆ ಅವರು ನೀಡಿದ್ದ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದರು.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಎಸ್. ಶಿಂಧೆ ಮತ್ತು ಎನ್.ಜೆ.ಜಾಮದಾರ್ ಅವರ ಪೀಠವು ಈ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿತು. ಅಲ್ಲದೆ ವಡಾನೆ ಅವರ ನೇಮಕ, ಹುದ್ದೆಗೆ ಸಂಬಂಧಿಸಿದಂತೆ ನೈಜ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್‌ ರಿಜಿಸ್ಟ್ರಿ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು