ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್ ಕಾಂಗ್ರೆಸ್‌ನಲ್ಲಿ ಸಂಘರ್ಷ: ತ್ರಿಸದಸ್ಯ ಸಮಿತಿ ಭೇಟಿಯಾದ ಸಿಎಂ ಸಿಂಗ್

Last Updated 4 ಜೂನ್ 2021, 10:02 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ನ ಕಾಂಗ್ರೆಸ್‌ ಪಕ್ಷದ ರಾಜ್ಯ ಘಟಕದೊಳಗೆ ಭುಗಿಲೆದ್ದಿರುವ ಸಂಘರ್ಷವನ್ನು ಬಗೆಹರಿಸುವ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ರಚಿಸಿರುವ ತ್ರಿಸದಸ್ಯ ಸಮಿತಿಯನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶುಕ್ರವಾರ ಇಲ್ಲಿ ಭೇಟಿಯಾದರು.

ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ರಚಿಸಿರುವ ತ್ರಿಸದಸ್ಯರ ಸಮಿತಿಯನ್ನು ಶುಕ್ರವಾರ ಇಲ್ಲಿನ ಅಕ್ಬರ್ ರಸ್ತೆಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಅಮರಿಂದರ್‌ ಸಿಂಗ್‌ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಪಕ್ಷವನ್ನು ಒಗ್ಗೂಡಿಸುವ ಪ್ರಯತ್ನಗಳ ಕುರಿತು ಮತ್ತು ಮುಂಬರುವ ವಿಧಾನಸಭಾ ಚುನಾವಣೆಗೆ ಅಗತ್ಯದ ಸಿದ್ದತೆಗಳ ಬಗ್ಗೆಯೂ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಖರ್ಗೆ ನೇತೃತ್ವದ ಈ ಸಮಿತಿಯಲ್ಲಿ ಪಂಜಾಬ್‌ನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್ ರಾವತ್ ಮತ್ತು ಮಾಜಿ ಸಂಸದ ಜೆ.ಪಿ.ಅಗರ್‌ವಾಲ್ ಅವರು ಸಮಿತಿಯ ಸದಸ್ಯರಾಗಿದ್ದಾರೆ.

ಅಮರಿಂದರ್‌ ಸಿಂಗ್ ಮತ್ತು ಸಂಪುಟದ ಮಾಜಿ ಸಹೋದ್ಯೋಗಿ ನವಜೋತ್ ಸಿಂಗ್ ಸಿಧು ನಡುವೆ ಎಸ್‌ಐಟಿ ತನಿಖಾ ವರದಿಗೆ ಸಂಬಂಧಿಸಿದಂತೆ ಮಾತಿನ ಸಮರ ಮುಂದುವರಿದಿದೆ. ಈ ವಿಷಯಕ್ಕೆ ಸಂಬಂಧಿಸಿದ ಸಿಧು ಅವರು ಮುಖ್ಯಮಂತ್ರಿಯ ವಿರುದ್ಧ ಸಾರ್ವಜನಿಕವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಆಂತರಿಕ ಸಂಘರ್ಷವನ್ನು ಬಗೆಹರಿಸುವ ಸಂಬಂಧ ಅಧ್ಯಕ್ಷೆ ಸೋನಿಯಾ ಗಾಂಧಿ ಈ ತ್ರಿಸದಸ್ಯ ಸಮಿತಿಯನ್ನು ರಚಿಸಿದ್ದಾರೆ.

ಈಸಮಿತಿ ಕಳೆದ ನಾಲ್ಕು ದಿನಗಳಲ್ಲಿ ನವಜೋತ್‌ ಸಿಂಗ್‌ ಸಿಧು, ಪಕ್ಷದ ಸಂಸದರು, ಶಾಸಕರು ಮತ್ತು ಮಾಜಿ ಪಿಸಿಸಿ ಮುಖ್ಯಸ್ಥರನ್ನು ಭೇಟಿ ಮಾಡಿದೆ. ಈ ವಾರಾಂತ್ಯದಲ್ಲಿ ಅಥವಾ ಮುಂದಿನ ವಾರದಲ್ಲಿ ಸಮಿತಿ ತನ್ನ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT