ಭಾನುವಾರ, ಮೇ 16, 2021
22 °C

ಚುನಾವಣಾ ತಂತ್ರ ಪರಿಣತ ಪ್ರಶಾಂತ್‌ ಕಿಶೋರ್‌ ನೇಪಥ್ಯಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ ಭರ್ಜರಿ ಗೆಲುವಿನ ಹಿಂದಿರುವ ಶಕ್ತಿಗಳಲ್ಲಿ, ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ (ಪಿಕೆ) ಅವರೂ ಒಬ್ಬರು.

ಈ ಹಿಂದೆಯೂ ವಿವಿಧ ರಾಜ್ಯಗಳಲ್ಲಿ ಬೇರೆಬೇರೆ ಪಕ್ಷಗಳಿಗಾಗಿ ಕಾರ್ಯತಂತ್ರ ಗೆಲುವಿಗೆ ಕಾರಣರಾಗಿದ್ದ ಪ್ರಶಾಂತ್‌, ಈಗ ಈ ವೃತ್ತಿಯನ್ನು ತ್ಯಜಿಸುವುದಾಗಿ ಹೇಳಿದ್ದಾರೆ. ಮಮತಾ ಅವರ ಗೆಲುವು ಖಚಿತವಾಗುತ್ತಿರುವುದು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಎರಡಂಕಿಗಿಂತ ಹೆಚ್ಚಿನ ಸ್ಥಾನಗಳು ಲಭಿಸದು ಎಂಬುದು ಖಚಿತವಾಗುತ್ತಿದ್ದಂತೆ, ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.

‘ಈವರೆಗೆ ಏನು ಮಾಡುತ್ತಿದ್ದೆನೋ ಅದನ್ನು ಮುಂದುವರಿಸಲು ನಾನು ಬಯಸುವುದಿಲ್ಲ. ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಈಗ ಸ್ವಲ್ಪ ಬಿಡುವು ತೆಗೆದುಕೊಂಡು ಬೇರೇನನ್ನಾದರೂ ಮಾಡುವ ಸಮಯ ಬಂದಿದೆ. ಈ ಸ್ಥಾನವನ್ನು ತ್ಯಜಿಸಲು ನಾನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಜತೆಯಲ್ಲೇ, ರಾಜಕೀಯವನ್ನು ಪ್ರವೇಶಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಅಸಾಧಾರಣ ಶಕ್ತಿಯಾಗಿದೆ’ ಎಂಬ ತಮ್ಮ ನಿಲುವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಆದರೆ, ‘ಮೋದಿ ಅವರ ಜನಪ್ರಿಯತೆ ಹೆಚ್ಚಿದೆ ಎಂದರೆ ಬಿಜೆಪಿಯು ಎಲ್ಲಾ ಚುನಾವಣೆಗಳನ್ನು ಗೆಲ್ಲುತ್ತದೆ ಎಂದು ಅರ್ಥವಲ್ಲ’ ಎಂದಿದ್ದಾರೆ.

ವೈರಲ್‌ ಆದ ಟ್ವೀಟ್: ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಭಾರಿ ಗೆಲುವು ಖಚಿತವಾಗುತ್ತಿದ್ದಂತೆಯೇ ಪ್ರಶಾಂತ್‌ ಅವರು ಕಳೆದ ಡಿಸೆಂಬರ್‌ನಲ್ಲಿ ಮಾಡಿದ್ದ ಒಂದು ಟ್ವೀಟ್‌ ಟ್ವಿಟರ್‌ನಲ್ಲಿ ಪುನಃ ಹರಿದಾಡಿತು.

ಡಿಸೆಂಬರ್‌ 21ರಂದು ಬಿಜೆಪಿಗೆ ಸವಾಲು ಹಾಕುವ ರೀತಿಯಲ್ಲಿ ಮಾಡಿದ್ದ ಆ ಟ್ವೀಟ್‌ನಲ್ಲಿ ಅವರು, ‘294 ಸದಸ್ಯಬಲದ ವಿಧಾನಸಭೆಯಲ್ಲಿ, ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವು ಎರಡಂಕಿ ಸಂಖ್ಯೆಯನ್ನು ದಾಟಲೂ ಹೆಣಗಾಡಬೇಕಾಗುತ್ತದೆ. ಈ ಟ್ವೀಟ್‌ ಅನ್ನು ಸೇವ್‌ ಮಾಡಿಟ್ಟುಕೊಳ್ಳಿ. ಕೇಂದ್ರಕ್ಕೆ ಬೆಂಬಲವಾಗಿ ನಿಂತಿರುವ ಮಾಧ್ಯಮದ ಒಂದು ಭಾಗದವರಿಗೆ ಹೇಳುತ್ತಿದ್ದೇನೆ, ಬಿಜೆಪಿಯು ಎರಡಂಕಿ ಸಾಧನೆ ಮಾಡಲು ಯಶಸ್ವಿಯಾದರೆ ನಾನು ಈ ಜಾಗವನ್ನು ಖಾಲಿಮಾಡುತ್ತೇನೆ’ ಎಂದಿದ್ದರು.

ಈ ಟ್ವೀಟ್‌ಗೆ ಪ್ರತಿ ಟ್ವೀಟ್‌ ಮಾಡಿದ್ದ ಬಿಜೆಪಿಯ ಕೈಲಾಶ್‌ ವಿಜಯವರ್ಗೀಯ ‘ಬಂಗಾಳದಲ್ಲಿ ಎದ್ದಿರುವ ಬಿಜೆಪಿಯ ಸುನಾಮಿಯ ಫಲವಾಗಿ ಅಲ್ಲಿ ನಮ್ಮ ಸರ್ಕಾರ ರಚನೆಯಾದ ನಂತರ, ದೇಶವು ಒಬ್ಬ ಚುನಾವಣಾ ನೀತಿ ನಿರೂಪಕನನ್ನು ಕಳೆದುಕೊಳ್ಳಲಿದೆ’ ಎಂದಿದ್ದರು.

ಪ್ರಶಾಂತ್‌ ಅವರ ಹಳೆಯ ಟ್ವೀಟ್‌ ಅನ್ನು ಉಲ್ಲೇಖಿಸಿ ಅನೇಕ ಮಂದಿ ಭಾನುವಾರ ಟ್ವೀಟ್‌ಗಳನ್ನು ಮಾಡಿದ್ದಾರೆ. ‘ಬಿಜೆಪಿಯು ಬಂಗಾಳದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುವುದು ಸದ್ಯಕ್ಕೆ ಅಸಾಧ್ಯ. ಪ್ರಶಾಂತ್‌ ಅವರು ಇನ್ನೂ ಕಣದಲ್ಲಿದ್ದಾರೆ’ ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

ಮತ ಎಣಿಕೆ ಆರಂಭವಾದ ಮೊದಲ ಕೆಲವು ಗಂಟೆಗಳ ಕಾಲ ಬಿಜೆಪಿ –ಟಿಎಂಸಿ ಮಧ್ಯೆ ತೀವ್ರ ಪೈಪೋಟಿ ನಡೆಯುವ ಲಕ್ಷಣಗಳು ಗೋಚರಿಸಿದ್ದವು. ಆ ಸಂದರ್ಭದಲ್ಲಿ ಕೆಲವರು, ‘ಪ್ರಶಾಂತ್‌ ಅವರು ಬೇರೆ ಉದ್ಯೋಗ ಹುಡುಕುವುದು ಸೂಕ್ತ’ ಎಂದು ಟ್ವೀಟ್‌ ಮಾಡಿದ್ದರು.

‘ಬಿಜೆಪಿ ಪಕ್ಷಪಾತಿ ಚುನಾವಣಾ ಆಯೋಗ’
ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ, ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಆಯೋಗವು ನಡೆದುಕೊಂಡಿರುವ ರೀತಿಗೆ ಪ್ರಶಾಂತ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಕಠಿಣ ಸ್ಪರ್ಧೆ ಇತ್ತು. ಚುನಾವಣಾ ಆಯೋಗವು ಕಣ್ಣಿಗೆ ರಾಚುವಷ್ಟು ಪಕ್ಷಪಾತಿಯಾಗಿತ್ತು. ಇದಕ್ಕಿಂತ ಹೆಚ್ಚು ಪಕ್ಷಪಾತಿಯಾಗಿದ್ದ ಚುನಾವಣಾ ಆಯೋಗವನ್ನು ನಾನು ಈವರೆಗೆ ನೋಡಿಲ್ಲ. ಬಿಜೆಪಿಗೆ ಸಹಾಯ ಮಾಡಲು ಈ ಆಯೋಗವು ಬೇಕಾದ ಎಲ್ಲವನ್ನೂ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

‘ಪ್ರಚಾರದಲ್ಲಿ ಧರ್ಮದ ಬಳಕೆಯಿಂದ ಆರಂಭಿಸಿ ಮತದಾನದ ದಿನಾಂಕವನ್ನು ನಿರ್ಧರಿಸುವುದು, ಕಾನೂನುಗಳನ್ನು ತಿರುಚುವಲ್ಲಿಯವರೆಗೆ ಆಯೋಗವು ಬಿಜೆಪಿಗಾಗಿ ಎಲ್ಲವನ್ನೂ ಮಾಡಿದೆ. ಬಿಜೆಪಿಯ ವಿಸ್ತರಿತ ಸಂಸ್ಥೆಯಂತೆ ಆಯೋಗ ಕೆಲಸ ಮಾಡಿದೆ’ ಎಂದು ಅವರು ಆರೋಪಿಸಿದರು.

‘ನಮಗೆ ಪ್ರಚಾರ ನಡೆಸುವುದೇ ಸವಾಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ನಾವೇ ಗೆಲ್ಲಲಿದ್ದೇವೆ ಎಂಬ ಬೃಹತ್‌ ಪ್ರಚಾರಾಂದೋಲನ ನಡೆಸಲು ಬಿಜೆಪಿ ಪ್ರಯತ್ನಿಸಿತ್ತು. ಆದರೆ, ಒಳ್ಳೆಯ ಸಾಧನೆ ಮಾಡುತ್ತೇವೆ, ಬಯಸಿದ್ದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಜನರು ನೀಡುತ್ತಾರೆ ಎಂಬ ವಿಶ್ವಾಸ ನಮಗಿತ್ತು’ ಎಂದಿದ್ದಾರೆ.

ಡಬಲ್‌ ಗೆಲುವು
ಪ್ರಶಾಂತ್‌ ಈ ಬಾರಿ ಡಬಲ್‌ ಗೆಲುವು ಸಾಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅವರು ಟಿಎಂಸಿಗಾಗಿ ಕಾರ್ಯತಂತ್ರ ಹೆಣೆದರೆ, ತಮಿಳುನಾಡಿನಲ್ಲಿ ಅವರು ಡಿಎಂಕೆ ಪರವಾಗಿ ಕೆಲಸ ಮಾಡಿದ್ದಾರೆ. ಅಲ್ಲಿ ಒಂದು ದಶಕದ ಕಾಲ ವಿರೋಧಪಕ್ಷದ ಸ್ಥಾನದಲ್ಲಿದ್ದ ಡಿಎಂಕೆಯು ಗೆಲುವು ದಾಖಲಿಸಿದೆ.

ಕಿಶೋರ್‌ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ, 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ಅವರ ಜೆಡಿಯುಗೆ ಚುನಾವಣಾ ಕಾರ್ಯತಂತ್ರ ರೂಪಿಸಿ, ಆ ಪಕ್ಷಗಳ ಗೆಲುವಿಗೆ ಕಾರಣರಾಗಿದ್ದರು. ಆದರೆ, ಪಶ್ಚಿಮ ಬಂಗಾಳ ಅವರಿಗೆ ದೊಡ್ಡ ಸವಾಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು