ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷದ ವಿಷವನ್ನು ಬಿತ್ತಿರುವಾಗ 'ಅಮೃತ ಮಹೋತ್ಸವ'ಕ್ಕೆ ಅರ್ಥವಿದೆಯೇ?: ರಾಹುಲ್‌

Last Updated 26 ಸೆಪ್ಟೆಂಬರ್ 2021, 3:52 IST
ಅಕ್ಷರ ಗಾತ್ರ

ನವದೆಹಲಿ: ಸ್ವಾತಂತ್ರ್ಯವೆಂಬುದು ಎಲ್ಲರಿಗೂ ಸಿಗದಿದ್ದಾಗ ಅದು ಎಂತಹ ಸ್ವಾತಂತ್ರ್ಯ? ದೇಶದಲ್ಲಿ ದ್ವೇಷದ ವಿಷವನ್ನು ಬಿತ್ತುತ್ತಿರುವಾಗ 'ಅಮೃತ ಮಹೋತ್ಸವ' ಎಂಬುದಕ್ಕೆ ಅರ್ಥವಿದೆಯೇ? ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಅಸ್ಸಾಂನ ದರಂಗ್‌ ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಸಂದರ್ಭ ಪೊಲೀಸರು ಮತ್ತು ಭೂಮಿ ಕಬಳಿಸಿದ್ದಾರೆ ಎನ್ನಲಾಗಿರುವ ಆರೋಪಿಗಳ ನಡುವಿನ ಸಂಘರ್ಷದಿಂದ ಉದ್ಭವಿಸಿದ ಹಿಂಸಾಚಾರವನ್ನು ಗುರಿಯಾಗಿಸಿಕೊಂಡು ರಾಹುಲ್‌ ಗಾಂಧಿ ಈ ಹೇಳಿಕೆ ನೀಡಿದ್ದಾರೆ. ಗುರುವಾರ ನಡೆದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಎದೆಗೆ ಗುಂಡೇಟು ತಗುಲಿ ಬಿದ್ದಿದ್ದ ವ್ಯಕ್ತಿಯ ಮೇಲೆ ಛಾಯಾಗ್ರಾಹಕನೊಬ್ಬ ಹಾರಿ, ನೆಗೆದು ಹಲ್ಲೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು. ಸತ್ತು ಬಿದ್ದಿರುವ ವ್ಯಕ್ತಿಯ ಮೇಲೆ ನಡೆಸಿದ ದೌರ್ಜನ್ಯ ದ್ವೇಷದ ಪರಮಾವಧಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಆತನನ್ನು ಬಂಧಿಸಿ, ನ್ಯಾಯಾಂಗದ ವಶಕ್ಕೆ ನೀಡಲಾಯಿತು.

ಅಸ್ಸಾಂನಲ್ಲಿ ನಡೆಯುತ್ತಿರುವ ಸರ್ಕಾರಿ ಭೂ-ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಅಸ್ಸಾಂನ ರಾಜ್ಯಪಾಲ ಜಗದೀಶ್‌ ಮುಖಿ ಅವರನ್ನು ಕಾಂಗ್ರೆಸ್‌ ನಾಯಕರು ಭೇಟಿ ಮಾಡಿದ್ದಾರೆ. ವಿವಿಧ ಸಂಘಟನೆಗಳು ದರಂಗ್‌ ಜಿಲ್ಲೆಯಲ್ಲಿ ಶುಕ್ರವಾರ 12 ಗಂಟೆಗಳ ಬಂದ್‌ಗೆ ಕರೆ ನೀಡಿದ್ದವು.

ವ್ಯಾಪಕ ಟೀಕೆ, ಪ್ರತಿಪಕ್ಷಗಳ ವಿರೋಧ, ಸ್ಥಳೀಯರ ಆಕ್ರಂದನಗಳ ಮಧ್ಯೆಯೇ 'ಭೂ-ಒತ್ತುವರಿ ಕಾರ್ಯಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ' ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT