ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ನೋವು, ಸಂಕಷ್ಟಗಳಿಗೆ ಹಿಂದುತ್ವವಾದಿಗಳೇ ನೇರ ಹೊಣೆ: ರಾಹುಲ್‌ ಗಾಂಧಿ ವಾಗ್ದಾಳಿ

Last Updated 18 ಡಿಸೆಂಬರ್ 2021, 13:27 IST
ಅಕ್ಷರ ಗಾತ್ರ

ಅಮೇಠಿ: ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ನೋವು ಹಾಗೂ ಸಂಕಷ್ಟಗಳಿಗೆ 'ಹಿಂದುತ್ವವಾದಿಗಳೇ' ನೇರ ಹೊಣೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಶನಿವಾರ ವಾಗ್ದಾಳಿ ನಡೆಸಿದರು.

ಉತ್ತರ ಪ್ರದೇಶದ ಅಮೇಠಿಯಲ್ಲಿ ಶನಿವಾರ ನಡೆದ ಸಾರ್ವಜನಿಕರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇದು ಹಿಂದುಗಳು ಮತ್ತು ಹಿಂದುತ್ವವಾದಿಗಳ ನಡುವಿನ ಯುದ್ಧವಾಗಿದೆ. ಹಿಂದುಗಳು ಸತ್ಯಾಗ್ರಹವನ್ನು ನಂಬಿದರೆ, ಹಿಂದುತ್ವವಾದಿಗಳು ಸತ್ತಾಗ್ರಹವನ್ನು (ರಾಜಕೀಯ ದುರಾಸೆ) ನಂಬುತ್ತಾರೆ‘ ಎಂದು ಟೀಕಿಸಿದರು.

‘ಹಿಂದುವಿನ ಅರ್ಥವನ್ನು ನಾನು ನಿಮಗೆ ಹೇಳುತ್ತೇನೆ- ಹಿಂದುವಾದವನು ಸತ್ಯದ ಮಾರ್ಗವನ್ನು ಅನುಸರಿಸುತ್ತಾನೆ. ತನ್ನೊಳಗಿನ ಭಯವನ್ನು ಎಂದಿಗೂ ಹಿಂಸೆ, ದ್ವೇಷ ಮತ್ತು ಕೋಪವಾಗಿ ಪರಿವರ್ತನೆಗೊಳ್ಳಲು ಬಿಡುವುದಿಲ್ಲ. ಇದಕ್ಕೆ ಅತ್ಯುತ್ತಮ ಉದಾಹರಣೆ ಮಹಾತ್ಮಾ ಗಾಂಧಿ. ಅವರು ಸತ್ಯವನ್ನು ಅರ್ಥಮಾಡಿಕೊಳ್ಳಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು’ಎಂದು ರಾಹುಲ್‌ ಹೇಳಿದರು.

‘ಗೋಡ್ಸೆಯನ್ನು ಯಾರೊಬ್ಬರೂ ಮಹಾತ್ಮ ಎಂದು ಕರೆಯುವುದಿಲ್ಲ. ಏಕೆಂದರೆ ಅವನು ಸತ್ಯವನ್ನು ಮಾತನಾಡುವ ಒಬ್ಬ ಹಿಂದುವನ್ನು ಕೊಂದವನು. ಗೋಡ್ಸೆ ಒಬ್ಬ ಹೇಡಿ, ದುರ್ಬಲ ವ್ಯಕ್ತಿ. ಆತನಿಗೆ ತನ್ನ ಭಯವನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲೇ ಇಲ್ಲ‘ ಎಂದು ರಾಹುಲ್‌ ಟೀಕಿಸಿದರು.

‘ಹಿಂದುತ್ವವಾದಿಯೊಬ್ಬ ಗಂಗಾ ನದಿಯಲ್ಲಿ ಏಕಾಂಗಿಯಾಗಿ ಸ್ನಾನ ಮಾಡಿದರೆ, ಒಬ್ಬ ಹಿಂದುಕೋಟ್ಯಂತರ ಜನರೊಂದಿಗೆ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುತ್ತಾನೆ’ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

‘ತಾವು ಹಿಂದುಎಂದು ಮೋದಿ ಹೇಳುತ್ತಾರೆ. ಆದರೆ, ಅವರು ಯಾವಾಗ ಸತ್ಯವನ್ನು ಮಾತನಾಡಿದ್ದಾರೆ? ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದ ಅವರು, ಎಲ್ಲಿ ನೀಡಿದರು?’ಎಂದು ರಾಹುಲ್‌ ಪ್ರಶ್ನಿಸಿದ್ದಾರೆ.

ಇಂದು ದೇಶದಲ್ಲಿ ಏಕೆ ಜನರಿಗೆ ಉದ್ಯೋಗ ಸಿಗುತ್ತಿಲ್ಲ? ಹಣದುಬ್ಬರ ಏಕೆ ವೇಗವಾಗಿ ಹೆಚ್ಚುತ್ತಿದೆ? ಎಂದು ರಾಹುಲ್ ಪ್ರಶ್ನಿಸಿದರು. ‘ಈ ಪ್ರಮುಖ ವಿಚಾರಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಕೇಂದ್ರ ಸರ್ಕಾರ ಮಾರ್ಕೆಟಿಂಗ್‌ನಲ್ಲಿ ನಿರತವಾಗಿದೆ’ಎಂದು ಅವರು ಹೇಳಿದರು.

‘ಚೀನಾ ದೇಶವು ಲಡಾಕ್‌ನಲ್ಲಿ ಭಾರತದ ಭೂಮಿಯನ್ನು ಕಿತ್ತುಕೊಂಡು ತನ್ನದಾಗಿಸಿಕೊಂಡಿದೆ. ನಮ್ಮ ನೆಲವನ್ನು ಕಿತ್ತುಕೊಂಡಿಲ್ಲವೆಂದು ಪ್ರಧಾನಿ ಹೇಳುತ್ತಾರೆ. ಸ್ವಲ್ಪ ಸಮಯದ ನಂತರ ರಕ್ಷಣಾ ಸಚಿವಾಲಯವು ಚೀನಾ ದೇಶವು ಅಕ್ರಮವಾಗಿ ನಮ್ಮ ಭೂಮಿಯನ್ನು ಕಿತ್ತುಕೊಂಡಿದೆ ಎಂದು ಹೇಳುತ್ತದೆ’ಎಂಬುದಾಗಿ ರಾಹುಲ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT